

ಹಾಸನ: ರೈತರ ಜಮೀನು ವಕ್ಫ್ ಬೋರ್ಡ್ ಆಸ್ತಿ ಎಂದು ನೀಡಲಾಗಿರುವ ನೋಟೀಸ್ ಹಿಂಪಡೆಯಬೇಕು. ರೈತರ ಪಹಣಿಗಳಲ್ಲಿ ನಮೂದಾಗಿರುವ ವಕ್ಫ್ ಆಸ್ತಿ ಎಂಬುದನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಕನ್ನಡಪರ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸದಸ್ಯರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಇದೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಡಿ. ಶಂಕರೇಗೌಡ, ರಾಜ್ಯ ಕಾಂಗ್ರೆಸ್ ಸರ್ಕಾರ ವಕ್ಫ್ ಬೋರ್ಡ್ ಹೆಸರಿನಲ್ಲಿ ರೈತರಿಗೆ ನೋಟಿಸ್ ನೀಡುತ್ತಿರುವುದು ಸರಿಯಲ್ಲ. ಕಾಂಗ್ರೆಸ್ ಪಕ್ಷದ ನಾಯಕರು ಅಧಿಕಾರಕ್ಕೆ ಬರುವ ಮುನ್ನ ಸಾರ್ವಜನಿಕರ ಸೇವೆ ಮಾಡುತ್ತೇವೆ. ರೈತಪರ ಆಡಳಿತ ನೀಡುತ್ತೇವೆ ಎಂದು ಹೇಳಿದ್ದರು. ಇದೀಗ ಅಧಿಕಾರಕ್ಕೆ ಬಂದ ಬಳಿಕ ಒಂದು ಸಮುದಾಯದ ತುಷ್ಟೀಕರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಸಚಿವ ಜಮೀರ್ ಅಹಮ್ಮದ್ ಖಾನ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆದೇಶದ ಮೇರೆಗೆ ಕಂದಾಯ ಅಧಿಕಾರಿಗಳಿಗೆ ಸೂಚನೆ ನೀಡುವ ಮೂಲಕ ರಾಜ್ಯದ ಸಾವಿರಾರು ರೈತರ ಜಮೀನುಗಳಲ್ಲಿ ಅತಿಕ್ರಮವಾಗಿ ಪಹಣಿಗಳಲ್ಲಿ ವಕ್ಫ್ ಆಸ್ತಿ ಎಂದು ನಮೂದಿಸಿ ನೋಟಿಸ್ ನೀಡಿದ್ದಾರೆ. ರೈತರ ಆಸ್ತಿಗಳ ಮೇಲೆ ವಕ್ಫ್ ಬೋರ್ಡ್ ಹೆಸರು ಬಂದಿದೆ. ಈಗ ದೇವಸ್ಥಾನ, ಮಠ-ಮಾನ್ಯಗಳ ಮೇಲೆಯೂ ಲಗ್ಗೆ ಇಟ್ಟಿರುವುದು ಸರಿಯಲ್ಲ. ಹಿಂದುಗಳನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆದಿದ್ದು, ಇದರಿಂದ ಸಾವಿರಾರು ವರ್ಷ ನೆಲೆಯೂರಿರುವ ರೈತರಿಗೆ ತೊಂದರೆ ಉಂಟಾಗಿದೆ. ಕೂಡಲೇ ಈ ಆದೇಶ ರದ್ದುಗೊಳಿಸಬೇಕು. ಇಲ್ಲವಾದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ದಿನೇಶ್ ಗೌಡ, ಹರೀಶ್ ಗೌಡ, ಪಾಂಡು, ರಾಘವೇಂದ್ರ, ಜಾನ್, ಮಂಜೇಗೌಡ, ಅನಂತರಾಜು, ಕುಮಾರ್, ಪುಟ್ಟಸ್ವಾಮಿಗೌಡ, ವಿಜಯಕುಮಾರ್, ಜಯಶಂಕರ್, ರಾಮಸಾ ್ವಮಿ ಸೇರಿದಂತೆ ಇತರರು ಭಾಗವಹಿಸಿದ್ದರು.