ವಕ್ಫ್ ಮಂಡಳಿ ಸ್ಥಳಗಳಲ್ಲಿ ವಸತಿ, ಆಸ್ಪತ್ರೆ

Jameer
Published on

ಚಿತ್ರದುರ್ಗ: ರಾಜ್ಯದ ಪ್ರತಿ ತಾಲೂಕಿನಲ್ಲೂ ವಕ್ಫ್‌ ಮಂಡಳಿಯ ಜಾಗಗಳಿವೆ. ಅಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ವಸತಿ, ಆಸ್ಪತ್ರೆ, ಕಾಲೇಜುಗಳ ನಿರ್ಮಾಣಕ್ಕೆ ಚಿಂತಿಸಲಾಗಿದೆ ಎಂದು ವಸತಿ ಸಚಿವ ಜಮೀರ್ ಅಹಮದ್ ಖಾನ್ ಹೇಳಿದರು.

ಜಿಲ್ಲಾಡಳಿತ, ಜಿಪಂ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಅಗಸನಕಲ್ಲು ರಸ್ತೆಯಲ್ಲಿ ಅಂಜುಮಾನ್ ಎ ದಾರೂಲ್ ಹುದಾ ಸಂಸ್ಥೆ ಕೊಹೇನೂರ್ ಶಾದಿಮಹಲ್ ನೂತನ ಕಟ್ಟಡ ನಿರ್ಮಾಣ ಸಂಬಂಧ ಮಂಗಳವಾರ ಆಯೋಜಿಸಿದ್ದ ಶಂಕುಸ್ಥಾಪನೆಯಲ್ಲಿ ಮಾತನಾಡಿದರು.

ಮಂಡಳಿಯ ಆಸ್ತಿಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿದರೆ, ಸರ್ಕಾರದ ಅನುದಾನಕ್ಕೆ ಕಾಯುವ ಅಗತ್ಯವಿಲ್ಲ. ಅಲ್ಪಸಂಖ್ಯಾತರ ಅಭಿವೃದ್ಧಿ ಬಯಸಿ ಜನ ನನಗೆ ಅವಕಾಶ ಕಲ್ಪಿಸಿದ್ದು, ಆ ನಂಬಿಕೆ ಉಳಿಸಿಕೊಳ್ಳುತ್ತೇನೆ ಎಂದರು.

ನಾಲ್ಕು ತಿಂಗಳಿಂದ ಶಾಸಕ ವೀರೇಂದ್ರ ಪಪ್ಪಿ ಅವರು ಶಾದಿಮಹಲ್ ನಿರ್ಮಾಣದ ಕುರಿತು ಹತ್ತಾರು ಬಾರಿ ಮನವಿ ಮಾಡಿದ್ದರು. ಈಗ 2 ಕೋಟಿ ರೂ. ಮಂಜೂರಾಗಿದೆ. ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿರುವ ಶಾದಿಮಹಲ್ಗಳಿಗೂ ಅನುದಾನ ನೀಡಲಾಗಿದೆ. ನಾನೂ, ಮಂಡಳಿ ಅಧ್ಯಕ್ಷರು ಅಭಿವೃದ್ಧಿ ಪರವಿದ್ದೇವೆ ಎಂದು ಹೇಳಿದರು.

ಪ್ರಾಥಮಿಕ ಶಿಕ್ಷಣ ಪಡೆಯುತ್ತಿರುವ 5 ಲಕ್ಷ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ವಿದ್ಯಾರ್ಥಿ ವೇತನ ನೀಡಲಾಗುವುದು. ದಂತ ವೈದ್ಯಕೀಯ, ಇಂಜಿನಿಯರಿಂಗ್, ವಿದೇಶದಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಕ್ರಮವಾಗಿ 1 ಲಕ್ಷ ರೂ., 50 ಸಾವಿರ ರೂ., 30 ಲಕ್ಷ ರೂ. ಸಬ್ಸಿಡಿ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡಲಾಗುತ್ತಿದೆ ಎಂದರು.

ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಮಾತನಾಡಿ, ನವ ಚಿತ್ರದುರ್ಗ ನಿರ್ಮಾಣಕ್ಕೆ ಮುನ್ನುಡಿ ಬರೆಯಲಾಗಿದ್ದು, ಅಭಿವೃದ್ಧಿಗೆ ಹೆಚ್ಚು ಗಮನ ಹರಿಸಲಾಗುವುದು. ಸಚಿವರು ಚಿತ್ರದುರ್ಗ ತಾಲೂಕಿಗೆ 1,500 ಹೊಸ ಮನೆ ಮಂಜೂರು ಮಾಡಿದ್ದಾರೆ ಎಂದರು.

ವಕ್ಫ್‌ ಮಂಡಳಿ ರಾಜ್ಯ ಅಧ್ಯಕ್ಷ ಕೆ.ಅನ್ವರ್ ಬಾಷಾ, ನಗರಸಭೆ ಸದಸ್ಯ ಸರ್ದಾರ್, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net