ವಕ್ಫ್ ತಿದ್ದುಪಡಿ ವಿರೋಧಿಸಿ ಯುವ ಕಾಂಗ್ರೆಸ್ ಪ್ರತಿಭಟನೆ

21_HSN_04
Published on

ಹಾಸನ: ವಕ್ಫ್ ಕಾಯ್ದೆ ತಿದ್ದುಪಡಿ ವಿರೋಧಿಸಿ ನಗರದ ಹೇಮಾವತಿ ಪ್ರತಿಮೆ ಬಳಿ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಸೋಮವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಕೇಂದ್ರ ಸರ್ಕಾರ ವಕ್ಫ್ ತಿದ್ದುಪಡಿಗೆ ಮುಂದಾಗಿರುವುದು ಖಂಡನೀಯ, ಕೂಡಲೇ ಇದನ್ನು ರದ್ದು ಮಾಡಬೇಕು ಎಂದು ಆಗ್ರಹಿಸಿ ಪ್ರಧಾನಿ ನರೇಂದ್ರ ಮೋದಿ ಗೃಹ ಸಚಿವ ಅಮಿತ್ ಷಾ ಹಾಗೂ ಇತರ ಕೇಂದ್ರದ ನಾಯಕರ ವಿರುದ್ಧ ಘೋಷಣೆ ಕೂಗುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಇರ್ಫಾನ್ ಮಾತನಾಡಿ, ಕೇಂದ್ರ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಆರಂಭದಿಂದಲೂ ಮುಸಲ್ಮಾನರ ವಿರೋಧಿ ಆಡಳಿತ ನಡೆಸುತ್ತ ಬಂದಿದೆ. ಮುಸಲ್ಮಾನ್ ಸಮುದಾಯದ ಜನರು ದಾನ ನೀಡಿದ ಜಾಗವನ್ನು ದೇವರ ಹೆಸರಿನಲ್ಲಿ ಇಡಲಾಗಿದ್ದು ಅದಕ್ಕೂ ಕಣ್ಣು ಹಾಕಿರುವ ಕೇಂದ್ರ ಸರ್ಕಾರ ಇದೀಗ ಅದನ್ನು ಕಬಳಿಸಲು ಹುನ್ನಾರ ನಡೆಸಿದೆ ಎಂದರು.

ವಕ್ಫ್ ಆಸ್ತಿ ಯಾರೊಬ್ಬರ ಆಸ್ತಿ ಅಲ್ಲ. ಇದು ದೇವರ ಆಸ್ತಿಯಾಗಿದೆ. ಮುಸಲ್ಮಾನ್ ಧರ್ಮದ ಜನರ ಅಭಿವೃದ್ಧಿಗೆ ಪೂರ್ವಜರು ನೀಡಿರುವ ಆಸ್ತಿಯನ್ನು ನಮಗೆ ಮೀಸಲಾಗಿ ಇಟ್ಟು ಅಭಿವೃದ್ಧಿ ಪಡಿಸಬೇಕಿರುವ ಸರ್ಕಾರ ಇದೀಗ ಅದನ್ನು ಕಬಳಿಸಲು ಮುಂದಾಗಿದೆ. ಕೂಡಲೇ ಈ ನಿರ್ಧಾರದಿಂದ ಕೇಂದ್ರ ವಾಪಸ್ ಬರಬೇಕು. ಇಲ್ಲವಾದರೆ ದೇಶಾದ್ಯಂತ ಉಗ್ರ ಹೋರಾಟಗಳು ನಡೆಲಿವೆ ಎಂದು ಎಚ್ಚರಿಕೆ ನೀಡಿದರು.

ದೇಶಾದ್ಯಂತ ಈ ಬಗ್ಗೆ ತೀವ್ರ ವಿರೋಧ ಇದ್ದರು ಒತ್ತಾಯ ಪೂರ್ವಕವಾಗಿ ಈ ಕಾಯ್ದೆ ಜಾರಿ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಇದು ಮುಸಲ್ಮಾನ್ ಸಮುದಾಯಕ್ಕೆ ಮಾಡಿದ ದ್ರೋಹ, ಕೂಡಲೇ ಇದರ ಬಗ್ಗೆ ಗಮನಹರಿಸಿ ಕೂಡಲೇ ಈ ಕಾಯ್ದೆಗೆ ಸರ್ಕಾರ ತಡೆ ಹಾಕಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಸರ್ಕಾರದ ವಿರುದ್ಧ ಬೃಹತ್ ಹೋರಾಟಗಳು ನಡೆಯಲಿವೆ ಎಂದರು.

ಪ್ರತಿಭಟನೆಯಲ್ಲಿ ಯುವ ಕಾಂಗ್ರೆಸ್ ತಾಲೂಕು ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net