ವಕ್ಫ್ ತಿದ್ದುಪಡಿ ಬಿಲ್ ಪ್ರತಿ ಹರಿದು  ಎಸ್‌ಡಿಪಿಐ ಜಿಲ್ಲಾ ಸಮಿತಿ ವತಿಯಿಂದ ಪ್ರತಿಭಟನೆ

13_HSN_09
Published on

ಹಾಸನ: ರಾಜ್ಯಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ 2024 ಮಂಡನೆಯನ್ನು ವಿರೋಧಿಸಿ ಸೋಷಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಜಿಲ್ಲಾ ಸಮಿತಿ ವತಿಯಿಂದ ಗುರುವಾರ ಹಾಸನದ ಹೇಮಾವತಿ ವೃತ್ತದಲ್ಲಿ ಬಿಲ್‌ನ ಪ್ರತಿಯನ್ನು ಹರಿಯುವ ಮುಖಾಂತರ ಪ್ರತಿಭಟನೆ ನಡೆಸಲಾಯಿತು.

ಬಳಿಕ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ, ಈ ಮಸೂದೆ ಅಸಾಂವಿಧಾನಿಕ ಮಾತ್ರವಲ್ಲದೇ ವಕ್ಫ್ ಸಂಪತ್ತನ್ನು ಕಬಳಿಸುವ ಕೋಮುವಾದಿ ಸರ್ಕಾರದ ಹುನ್ನಾರವಾಗಿದೆ. ಜಿಲ್ಲಾಧಿಕಾರಿಗಳಿಗೆ ನ್ಯಾಯಾಂಗ ಅಧಿಕಾರ ನೀಡುವುದು ಸಂಪೂರ್ಣವಾಗಿ ಅನ್ಯಾಯ ಮತ್ತು ಸಂವಿಧಾನ ವಿರೋಧಿ. ಮೋದಿ ಸರ್ಕಾರ ಈ ಮಸೂದೆಯ ಮೂಲಕ ವಕ್ಫ್ ಬೋರ್ಡ್ ಮೇಲೆ ಹಿಂದುತ್ವ ಆದರ್ಶಗಳನ್ನು ಬಲವಂತವಾಗಿ ಹೇರಲು ಯತ್ನಿಸುತ್ತಿದೆ. ಇದು ಧಾರ್ಮಿಕ ಸ್ವಾತಂತ್ರ್ಯ ಮತ್ತು ಸ್ವಾಯತ್ತತೆಗೆ ವಿರುದ್ಧವಾಗಿದೆ. ಈ ಮಸೂದೆಯನ್ನು ಹಿಂದಕ್ಕೆ ತೆಗೆದುಕೊಳ್ಳದಿದ್ದರೆ, ದೇಶದಾದ್ಯಂತ ಸಿಎಎ, ಎನ್‌ಆರ್‌ಸಿ ಮಾದರಿಯ ಪ್ರತಿಭಟನೆಗಳು ನಡೆಯಲಿವೆ ಎಂದು ಎಚ್ಚರಿಕೆ ನೀಡಿದರು.

ವಕ್ಫ್ ಕಾಯ್ದೆಯ ಅನುಷ್ಠಾನವನ್ನು ಬಿಜೆಪಿ ತನ್ನ ಬಹುಮತದ ಬಲದಿಂದ ದುರುಪಯೋಗಪಡಿಸಿಕೊಂಡು ದೇಶವನ್ನು ಕೇಸರಿ ಬಣ್ಣದಿಂದ ಮುಚ್ಚಲು ಪ್ರಯತ್ನಿಸುತ್ತಿದೆ. ಈ ಮಸೂದೆ ಮುಸ್ಲಿಂ ಸಮುದಾಯದ ಹಕ್ಕುಗಳ ಮೇಲೆ ನೇರ ದಾಳಿ, ಹಾಗೆಯೇ ವಕ್ಫ್ ಸಂಸ್ಥೆಗಳ ಶಕ್ತಿಯನ್ನು ಕುಂದಿಸುತ್ತಿವೆ. ಈಗಿನ ಕಾನೂನುಗಳು ಹಿಂದು ಧಾರ್ಮಿಕ ಆಸ್ತಿಗಳನ್ನು ಹಿಂದು ಅಲ್ಲದವರಿಂದ ನಿರ್ವಹಿಸುವಂತಾಗಲು ನಿಬರ್ಂಧಿಸುತ್ತವೆ. ಆದರೆ ಹೊಸ ವಕ್ಫ್ ಮಸೂದೆಯಡಿಯಲ್ಲಿ, ವಕ್ಫ್ ಬೋರ್ಡ್ ಸದಸ್ಯರ ಬಹುಪಾಲು ಸಿಇಒ ಸಹ ಮುಸ್ಲಿಂ ಆಗಿರುವ ಅವಶ್ಯಕತೆ ಇಲ್ಲ. ಇದು ವಕ್ಫ್ ಆಡಳಿತವನ್ನು ಕಬಳಿಸಲು ಮಾಡಿದ ಸಂಚು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಿಭಟನೆಯಲ್ಲಿ ಹಾಸನ ವಿಧಾನಸಭಾ ಕ್ಷೇತ್ರ ಸಮಿತಿಯ ಅಧ್ಯಕ್ಷ ಶಜೀಲ್ ಅಹ್ಮದ್, ಎಸ್‌ಡಿಪಿಐ ಮುಖಂಡರಾದ ಫೈರೋಜ್ ಪಾಷ, ಸಫೀರ್, ಆಟೋ ಇರ್ಫಾನ್, ತನ್ವಿರ್, ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಸೈಯ್ಯದ್ ಅನ್ಸರ್, ಆಫ್ಸರ್ ಪಾಷ, ಜಮೀಲ್ ಬೇಗ್ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net