ವಕ್ಫ್ ಕಾಯ್ದೆ ರದ್ಧತಿಗೆ ಆಗ್ರಹ

oplus_0
oplus_0
Published on

ಚಿತ್ರದುರ್ಗ: ವಕ್ಫ್ ಬೋರ್ಡ್ ಜಿಲ್ಲೆಯಲ್ಲೂ ಮನಸೋ ಇಚ್ಛೆ ರೈತರ ಜಮೀನುಗಳನ್ನು ವಕ್ಫ್ ಆಸ್ತಿ ಎಂಬುದಾಗಿ ವಶಪಡಿಸಿಕೊಳ್ಳಲು ಮುಂದಾಗುತ್ತಿದೆ ಎಂದು ಆರೋಪಿಸಿ ಭಾರತೀಯ ಕಿಸಾನ್ ಸಂಘ-ಕರ್ನಾಟಕ ದಕ್ಷಿಣ ಪ್ರಾಂತ ಜಿಲ್ಲಾ ಘಟಕದ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.

ಮಾನವ ಸರಪಳಿ ನಿರ್ಮಿಸಿ ಧಿಕ್ಕಾರ ಕೂಗಿದರು. ವಕ್ಫ್ ಸಚಿವರು ಈಚೆಗೆ ಅದಾಲತ್ ನಡೆಸಿ, ವಕ್ಫ್ ಆಸ್ತಿಯೆಂದು ನಮೂದಿಸಲು ಅಧಿಕಾರಿಗಳಿಗೆ ಸೂಚಿಸಿದ್ದರಿಂದಾಗಿ ಸೀಮಿತ ಅವಧಿಯಲ್ಲಿ ಸಾವಿರಾರು ರೈತರಿಗೆ ಅನ್ಯಾಯವಾಗಿದೆ. ಕೂಡಲೇ ವಕ್ಫ್ ಕಾಯ್ದೆ ರದ್ದುಗೊಳಿಸಬೇಕು ಎಂದು ಸಿಎಂಗೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಿದರು.

ಜಿಲ್ಲೆಯ ನಂದನಹೊಸೂರಿನ ರಿ.ಸರ್ವೆ ನಂಬರ್ 166ರ 5 ಎಕರೆ 35 ಗುಂಟೆ ಜಮೀನನ್ನು ಏಕಾಏಕಿ ಖಬರಸ್ಥಾನ್‌ಗೆ ನೀಡಲಾಗಿದೆ. 1922ರ ಮೂಲ ದಾಖಲೆಯಲ್ಲಿ ಇದ್ದಂತೆ ಸರಿಪಡಿಸಬೇಕು ಎಂದು ಆಗ್ರಹಿಸಿದರು.

ಎಂಎಲ್ಸಿ ಕೆ.ಎಸ್.ನವೀನ್ ಮಾತನಾಡಿ, ರಾಜ್ಯದ ರೈತರ, ಮಠ-ಮಾನ್ಯ, ಮಂದಿರಗಳ, ಜನಸಾಮಾನ್ಯರ ಜಮೀನುಗಳನ್ನು ವಕ್ಫ್ ಬೋರ್ಡ್ ಹೆಸರಿನಲ್ಲಿ ಕಬಳಿಸಲು ಮುಂದಾಗುತ್ತಿದ್ದು, ಸಿಎಂ ಸೂಚನೆ ಇಲ್ಲದೆ, ಸಂಬಂಧಿಸಿದ ಸಚಿವರು ಕಾರ್ಯಪ್ರವೃತ್ತರಾಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಮುಡಾ ಹಗರಣದಿಂದ ಹೊರಬರುವ ಪ್ರಯತ್ನದಲ್ಲಿ ಸಿಎಂ ಸಿದ್ದರಾಮಯ್ಯ ಮುಳುಗಿದ್ದಾರೆ. ರಾಜ್ಯದ ರೈತರ ಬಗ್ಗೆ ಕಾಳಜಿ ಇಲ್ಲ. ಅಧಿಕಾರ ಕೊಟ್ಟ ಜನರ ಸಮಸ್ಯೆಗಳಿಗೆ ಸ್ಪಂದಿಸದೆ, ಒಬ್ಬಿಬ್ಬರ ಓಲೈಕೆಗಾಗಿ ಅನ್ಯಾಯ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ವಕ್ಫ್ ರಾಜ್ಯದಲ್ಲಿ ದೊಡ್ಡ ಸಮಸ್ಯೆ ಸೃಷ್ಟಿಸಿದೆ. ಕಾಂಗ್ರೆಸ್ ಸರ್ಕಾರದ ಒಂದು ಸಮುದಾಯದ ತುಷ್ಟೀಕರಣ ಫಲವಾಗಿ ಸಾವಿರಾರು ಸಂಖ್ಯೆಯ ರೈತರು, ಮಠಾಧೀಶರು, ನಾಗರಿಕರು ಭೂಮಿ ನಮ್ಮದೆಂದು ಬೀದಿಗಿಳಿದು ಹೋರಾಟ ಮಾಡಬೇಕಾದ ವಾತಾವರಣ ಸೃಷ್ಟಿಸಿದೆ. ಯಾವ ಕಾರಣಕ್ಕೂ ಜಮೀನು ಬಿಟ್ಟುಕೊಡಲಾರೆವು ಎಂದು ತಿಳಿಸಿದರು.

ಮುಖಂಡರಾದ ವೆಂಕಟೇಶ್ ಯಾದವ್, ಕೆ.ಆರ್.ಜ್ಞಾನೇಶ್ವರ್, ಏಕಾಂತಪ್ಪ ಹೀರೆಮಧುರೆ, ತಿಪ್ಪೇಸ್ವಾಮಿ ಕರಿಕೆರೆ, ಮಂಜುನಾಥ್ ಕಾತ್ರಿಕೇನಹಳ್ಳಿ, ಸುರೇಶ್ ಚೀರನಹಳ್ಳಿ, ಹನುಮಂತಪ್ಪ, ಕುಮಾರ್, ಅಮೃತಾ, ರಮ್ಯಾ, ಸುಬ್ರಮಣ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net