

ದಾವಣಗೆರೆ: ಕರ್ನಾಟಕದಲ್ಲಿ ದುರ್ಬಳಕೆಯಾಗುತ್ತಿರುವ ವಕ್ಫ್ ಕಾನೂನನ್ನು ಹಿಂಪಡೆಯಲು ಆಗ್ರಹಿಸಿ ಹಿಂದು ರಾಷ್ಟ್ರ ಜಾಗೃತಿ ಸೇನೆ ಸಂಘಟನೆ ಪದಾಧಿಕಾರಿಗಳು ಶನಿವಾರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಡಿಸಿ ಶಿವಾನಂದ ಕಾಪಶಿ ಅವರ ಮೂಲಕ ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವರಿಗೆ ಮನವಿ ಸಲ್ಲಿಸಿದರು.
ರಾಜ್ಯದ ವಿವಿಧ ಜಿಲ್ಲೆಯಲ್ಲಿ ವಕ್ಫ್ ಮಂಡಳಿಯು, ಕಾನೂನು ದುರ್ಬಳಕೆ ಮಾಡಿಕೊಂಡು ಸರ್ಕಾರಿ ಹಾಗೂ ಖಾಸಗಿ ಜಮೀನುಗಳನ್ನು ವಶಕ್ಕೆ ಪಡೆಯುತ್ತಿದೆ. ದೇಶದಲ್ಲಿ 8 ಲಕ್ಷ ಎಕರೆ ಜಮೀನನ್ನು ಕಬಳಿಸಿದೆ. ಇದೊಂದು ದೊಡ್ಡ ಲ್ಯಾಂಡ್ ಜಿಹಾದ್ ಆಗಿದೆ. ಎಂದು ಪದಾಧಿಕಾರಿಗಳು ದೂರಿದರು.
ವಕ್ಫ್ ಬೋರ್ಡ್ ಘೋಷಿಸಿಕೊಂಡಿರುವ ಜಮೀನಿನ ನಿಜವಾದ ಮಾಲೀಕರಿಗೆ ಭೂಮಿ ನೀಡುವ ವ್ಯವಸ್ಥೆಯಾಗಬೇಕು. ಆ ಭೂಮಿ ಮೇಲಿನ ವಕ್ಫ್ ಮಂಡಳಿ ಅಧಿಕಾರ ರದ್ದುಪಡಿಸಬೇಕು.
ಕೊಲ್ಲಾಪುರದಲ್ಲಿ ಶಾಹು ಮಹಾರಾಜರು ಶೈಕ್ಷಣಿಕ ಉದ್ದೇಶಕ್ಕಾಗಿ ನೀಡಿದ ಭೂಮಿಯನ್ನು ಕಬಳಿಸುವ ವಕ್ಫ್ ಬೋರ್ಡ್ ಕಾಯ್ದೆಯನ್ನು ಸರ್ಕಾರ ವಿರೋಧಿಸಬೇಕು. ಈ ಮಂಡಳಿಯ ಎಲ್ಲ ಆಕ್ಷೇಪಣೆಗಳನ್ನು ಅಮಾನ್ಯಗೊಳಿಸಬೇಕು. ಕಬಳಿಕೆ ಪ್ರಕರಣದಲ್ಲಿ ಭಾಗಿಯಾದ ಸರ್ಕಾರಿ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.
ದೇಶದಲ್ಲಿ ಸಮಾನ ನಾಗರಿಕ ಕಾನೂನು ಜಾರಿಗೆ ತರುವ ಮೂಲಕ ಅಲ್ಪಸಂಖ್ಯಾತರ ಹೆಸರಿನಲ್ಲಿ ಜಾರಿಯಲ್ಲಿರುವ ಎಲ್ಲಾ ವಿಶೇಷ ಸೌಲಭ್ಯಗಳು, ಕಾನೂನುಗಳು, ಆಯೋಗಗಳು, ಮಂಡಳಿಗಳು, ಸರ್ಕಾರಿ ಇಲಾಖೆಗಳನ್ನು ರದ್ದುಪಡಿಸಬೇಕು. ಎಲ್ಲರಿಗೂ ಸಮಾನ ನಡವಳಿಕೆ ಅನ್ವಯವಾಗಬೇಕು ಎಂದು ಆಗ್ರಹಿಸಿದರು.
ಸಂಘಟನೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಸಂದೀಪ್, ಹಿಂದು ಜನಜಾಗೃತಿ ಸೇನಾ ಸಮಿತಿಯ ರಾಜ್ಯ ಪ್ರಮುಖ ಚೇತನ್ ಕನ್ನಡಿಗ, ವಿಜಯ ರೇವಣಕರ, ವಿಶ್ವ ಹಿಂದು ಪರಿಷತ್ತಿನ ಮುಖಂಡ ಮಲ್ಲೇಶ್ ಇತರರಿದ್ದರು.
* ಹಂತಕರ ಬಂಧನಕ್ಕೆ ಒತ್ತಾಯ
ಜೈನ ಮುನಿ ಆಚಾರ್ಯ ಕಾಮಕುಮಾರ ನಂದಿ ಮಹಾರಾಜರನ್ನು ಬರ್ಬರವಾಗಿ ಕೊಲೆಗೈದ ಹಂತಕರನ್ನು ಬಂಧಿಸಿ ಕಠಿಣ ಶಿಕ್ಷೆ ನೀಡುವಂತೆಯೂ ಸಂಘಟನೆಯಿಂದ ಡಿಸಿ ಮೂಲಕ ರಾಜ್ಯಪಾಲರಿಗೆ ಪ್ರತ್ಯೇಕ ಮನವಿ ಸಲ್ಲಿಸಲಾಯಿತು.
ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದ ನಂತರ ಹಿಂದು ಕಾರ್ಯಕರ್ತರ ಮೇಲೆ ಆಕ್ರಮಣಗಳು ಹೆಚ್ಚಾಗಿವೆ. ಸುಳ್ಳು ಕೇಸುಗಳನ್ನು ದಾಖಲಿಸಿ ಅವರಿಗೆ ಥಳಿಸುವ, ಭಯ ನಿರ್ಮಾಣ ಮಾಡುವ ಪ್ರಕ್ರಿಯೆ ನಡೆಯುತ್ತಿವೆ. ಹಿಂದುಗಳ ರಕ್ಷಣೆಯಲ್ಲಿ ಸರ್ಕಾರ ವಿಫಲವಾಗಿದೆ ಎಂದು ಪದಾಧಿಕಾರಿಗಳು ದೂರಿದರು.
ಹಿಂದು ಕಾರ್ಯಕರ್ತರಿಗೆ, ಹಿಂದು ಧರ್ಮದ ಪರ ಹೋರಾಟಗಾರರಿಗೆ ರಕ್ಷಣೆ ನೀಡಬೇಕು. ಹಿಂದುಗಳ ಮೇಲೆ ಆಕ್ರಮಣ ಮಾಡುವವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಲು ರಾಜ್ಯ ಸರ್ಕಾರಕ್ಕೆ ರಾಜ್ಯಪಾಲರು ನಿರ್ದೇಶನ ನೀಡಬೇಕೆಂದು ಮನವಿಯಲ್ಲಿ ಆಗ್ರಹಿಸಿದರು.