ವಕ್ಫ್ ಆಸ್ತಿ ವಿಚಾರ ಸೌಹಾರ್ದತೆಯಿಂದ ಪರಿಹರಿಸಲಿ: ಚಿಂತಕ ಶಿವಸುಂದರ್

mysore
Published on

ಮೈಸೂರು: ವಕ್ಫ್ ಆಸ್ತಿ ವಿಚಾರವನ್ನು ಕಾನೂನಿನ ಚೌಕಟ್ಟಿನಲ್ಲಿ ಸೌಹಾರ್ದತೆಯಿಂದ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಚಿಂತಕ ಶಿವಸುಂದರ್ ಹೇಳಿದರು.

ಅಬ್ದುಲ್ ಖಾದರ್ ಶಾಹೀದ್ ಗೆಳೆಯರ ಬಳಗದಿಂದ ನಗರದ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ವಕ್ಫ್ ಮಂಡಳಿಯ ಕುರಿತ ವಿಚಾರಸಂಕಿರಣದಲ್ಲಿ ಮಾತನಾಡಿದರು.

ವಕ್ಫ್ ಆಸ್ತಿಯನ್ನು ಕಳೆದ ಮೂರ‌್ನಾಲ್ಕು ತಲೆಮಾರುಗಳಿಂದ ರೈತರು ಅನುಭವಿಸಿಕೊಂಡು ಉಳುಮೆ ಮಾಡಿಕೊಂಡು ಜೀವನ ರೂಪಿಸಿಕೊಂಡಿದ್ದಾರೆ. ಅವರ ಪರಿಸ್ಥಿತಿಯ ಕುರಿತು ಸರ್ಕಾರ ಆಲೋಚಿಸಬೇಕು. ರೈತರು ಉಳುಮೆ ಮಾಡುತ್ತಿರುವ ಕೃಷಿ ಜಮೀನನ್ನು ಕಾಯ್ದೆ ಪ್ರಕಾರ ವಕ್ಫ್ ಆಸ್ತಿಯಾಗಿಯೇ ಉಳಿಸಿಕೊಂಡು ಶಾಶ್ವತವಾಗಿ ರೈತರಿಗೆ ಗೇಣಿಗೆ ಕೊಟ್ಟರೆ ಇಬ್ಬರ ಆತಂಕವೂ ದೂರಾಗುತ್ತದೆ ಎಂದು ಸಲಹೆ ನೀಡಿದರು.

ಧಾರ್ಮಿಕ ಕಾರ್ಯಕ್ಕೆ, ದಾನ ಅಥವಾ ಪರೋಪಕಾರಿ ಉದ್ದೇಶಕ್ಕಾಗಿ ಶಾಶ್ವತವಾಗಿ ಕೊಟ್ಟಿರುವ ಆಸ್ತಿಯೇ ವಕ್ಫ್ ಆಸ್ತಿ. ಇದು ದತ್ತಿಯಾಗಿರುತ್ತದೆ. ಒಮ್ಮೆ ವಕ್ಫ್ ಆಸ್ತಿಯೆಂದು ಘೋಷಿತವಾದ ಆಸ್ತಿಗಳು ಶಾಶ್ವತವಾಗಿ ವಕ್ಫ್ ಆಸ್ತಿಯಾಗಿಯೇ ಉಳಿಯುತ್ತವೆ. ಇನಾಮ್ ಕಾಯ್ದೆಯಡಿ ಫಲಾನುಭವಿಗಳ ಹೆಸರಿನಲ್ಲಿ ಪಟ್ಟಾ ಕೊಟ್ಟ ಮಾತ್ರಕ್ಕೆ ಅದು ಆ ಆಸ್ತಿಯ ಮೂಲ ವಕ್ಫ್ ಸ್ವರೂಪವನ್ನು ಪ್ರಭಾವಿಸುವುದಿಲ್ಲ. ಇದನ್ನು ಸುಪ್ರೀಂಕೋರ್ಟ್ ಸಹ ಎತ್ತಿಹಿಡಿದಿದೆ ಎಂದರು.

ರಾಜ್ಯದಲ್ಲಿ ವಕ್ಫ್ ಆಸ್ತಿ ವಿಚಾರದಲ್ಲಿ ರೈತರು ಮತ್ತು ಮುಸ್ಲಿಮರ ನಡುವೆ ಉಂಟಾಗಿರುವ ಆತಂಕವನ್ನು ಸೌಹಾದರ್ತೆಯಿಂದ ತಿಳಿಗೊಳಿಸಬೇಕು. ಅದನ್ನು ಬಿಟ್ಟು ಬಿಜೆಪಿ ಇದಕ್ಕೆ ಕೋಮು ಬಣ್ಣ ಹಚ್ಚಿ ರಾಜಕೀಯ ಮಾಡುತ್ತಿದೆ ಎಂದು ಹರಿಹಾಯ್ದರು.

ವಿಜಯಪುರ ಜಿಲ್ಲೆಯಲ್ಲಿ 1400 ಎಕರೆ ಜಮೀನನ್ನು ವಕ್ಫ್ ಆಸ್ತಿ ಎಂದು ಪರಿಗಣಿಸಿ ರೈತರಿಂದ ಕಿತ್ತುಕೊಳ್ಳಲಾಗುತ್ತಿದೆ ಎಂದು ಸುಳ್ಳು ಹರಡಲಾಗುತ್ತಿದೆ. ಆದರೆ, ವಿವಾದದಲ್ಲಿರುವುದು 10 ಎಕರೆ ಜಮೀನು ಮಾತ್ರ. ರೈತರ ಸಮಸ್ಯೆಗಳನ್ನು ಮುಸ್ಲಿಮರೂ ಮತ್ತು ಮುಸ್ಲಿಮರ ಸಮಸ್ಯೆಗಳನ್ನು ರೈತರೂ ಅರ್ಥ ಮಾಡಿಕೊಳ್ಳಬೇಕು. ಈ ಮೂಲಕ ಇದನ್ನು ಕಾನೂನಿನ ಚೌಕಟ್ಟಿನಲ್ಲಿ ಬಗೆಹರಿಸಿಕೊಳ್ಳಬೇಕು ಎಂದರು.

ವಕ್ಫ್ ಆಸ್ತಿಯನ್ನು ರೈತರು ಮಾತ್ರ ಒತ್ತುವರಿ ಮಾಡಿಕೊಂಡಿಲ್ಲ. ಹೆಚ್ಚಿನ ಪಾಲು ಮುಸ್ಲಿಮರೂ ಒತ್ತುವರಿ ಮಾಡಿಕೊಂಡಿದ್ದು, ಅದನ್ನೂ ಸಮುದಾಯದ ಮುಖಂಡರು ಗಮನದಲ್ಲಿಟ್ಟುಕೊಳ್ಳಬೇಕು. ಬೆಂಗಳೂರಿನ ವಿಂಡ್ಸರ್ ಮ್ಯಾನರ್ ಹೋಟೆಲ್ ಕೂಡ ವಕ್ಫ್ ಆಸ್ತಿಯಾಗಿದೆ. ಇದಕ್ಕೆ ತಿಂಗಳಿಗೆ 50 ಸಾವಿರ ರೂ.ಬಾಡಿಗೆ ನೀಡಲಾಗುತ್ತಿದೆ. ಆದರೆ, ಇದರ ವಾರ್ಷಿಕ ವಹಿವಾಟು 500 ಕೋಟಿ ರೂ. ಇದೆ. ಮಾಹಿತಿ ಪ್ರಕಾರ ಮಧ್ಯವರ್ತಿಗಳು ಇದರ ಲಾಭ ಪಡೆಯುತ್ತಿದ್ದಾರೆ. ಸಾಕಷ್ಟು ವಕ್ಫ್ ಆಸ್ತಿಗಳನ್ನು ಮುಸ್ಲಿಂ ಮುಖಂಡರೇ ಒತ್ತುವರಿ ಮಾಡಿಕೊಂಡಿದ್ದಾರೆ ಎಂದರು.

ದೇಶದಲ್ಲಿ ರಕ್ಷಣಾ ಇಲಾಖೆ ಬಳಿ 35 ಲಕ್ಷ ಎಕರೆ, ರೈಲ್ವೆ ಇಲಾಖೆ ಬಳಿ 16 ಲಕ್ಷ ಎಕರೆ ಜಮೀನು ಇದ್ದರೆ ವಕ್ಫ್‌ಬೋರ್ಡ್ ಬಳಿ 9 ಲಕ್ಷ ಎಕರೆ ಆಸ್ತಿ ಇದೆ ಎನ್ನುವುದು ಬಿಜೆಪಿ ಹಬ್ಬಿಸಿರುವ ಸುಳ್ಳಿನ ಸಂಗತಿ. ವಿಭಜಿತ ಆಂಧ್ರಪ್ರದೇಶದ ದೇವಾಲಯಗಳ ಹೆಸರಲ್ಲಿ 4.85 ಲಕ್ಷ ಎಕರೆ ಜಮೀನು ಇದ್ದರೆ, ತಮಿಳುನಾಡಿನಲ್ಲಿ 5.25 ಲಕ್ಷ ಎಕರೆ ಜಮೀನು ದೇವಾಲಯಗಳ ಒಡೆತನದಲ್ಲಿದೆ.

ಈ ನಡುವೆ ಆಂಧ್ರ ಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು, ಆಂಧ್ರಪ್ರದೇಶದಲ್ಲಿ ರೈತರು ಒತ್ತುವರಿ ಮಾಡಿಕೊಂಡು ಕೃಷಿ ಚಟುವಟಿಕೆ ನಡೆಸುತ್ತಿರುವ 83 ಸಾವಿರ ಎಕರೆ ಜಮೀನನ್ನು ರೈತರಿಂದ ಕಿತ್ತುಕೊಳ್ಳಲು ಹೊರಟಿರುವುದು ಬಿಜೆಪಿಯವರಿಗೆ ಕಾಣುತ್ತಿಲ್ಲ. ಇಲ್ಲಿ ರೈತಪರ ಹೋರಾಟ ಮಾಡುವವರು ಅಲ್ಲಿಗೂ ಹೋಗಿ ರೈತರ ಪರವಾಗಿ ಹೋರಾಟ ಮಾಡಬೇಕು ಎಂದು ಸವಾಲು ಹಾಕಿದರು.

ನಿವೃತ್ತ ಪ್ರಾಧ್ಯಾಪಕ ಪ್ರೊ.ಶಬ್ಬೀರ್ ಮು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net