

ಮಸ್ಕಿ: ಪಟ್ಟಣದ ವಾರ್ಡ್ ನಂ.23 ರ ಸರ್ವೇ ನಂ. 7/1 ಕ್ಷೇತ್ರ 7 ಸ್ಲಂ ಬೋರ್ಡ್‌ಗೆ ಸೇರಿದ ಜಾಗದ ಪಹಣಿಯಲ್ಲಿ ಇತ್ತೀಚಿಗೆ ಏಕಾಏಕಿ ವಕ್ಫ್ ಎಂದು ನಮೂದಾಗಿರುವುದನ್ನು ಖಂಡಿಸಿ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.
ಕಳೆದ 30ರಿಂದ 35 ವರ್ಷಗಳಿಂದ ಭೂ ಮಾಲೀಕರಾದ ಖಾದರ ಬೀ ಶ್ಯಾಮಿದ್ ಸಾಬ್ ಖಾಜಾ ಅವರು ಜಮೀನು ಮಾರಾಟ ಮಾಡಿದ್ದಾರೆ. ಈ ಸ್ಥಳದಲ್ಲಿ ಸುಮಾರು ತಲಾ 50 ಪಕ್ಕ ಹಾಗೂ ಕಚ್ಚಾ ಮನೆಗಳು, ಗುಡಿಸಲು ಇವೆ. ಜಿಲ್ಲಾ ವಕ್ಫ್ ಮಂಡಳಿ ಅಧಿಕಾರಿಗಳು ವಸತಿ ಮತ್ತು ವಕ್ಫ್ ಸಚಿವರಿಗೆ ತಪ್ಪು ಮಾಹಿತಿ ನೀಡಿ ಕೊಳೆಗೇರಿ ನಿವಾಸಿಗಳಿಗೆ ಹಕ್ಕುಪತ್ರ ಕೊಡುವುದನ್ನು ಸ್ಥಗಿತಗೊಳಿಸಿದ್ದಾರೆ. ಕೂಡಲೇ ಪಹಣಿಯಲ್ಲಿ ವಕ್ಫ್ ಹೆಸರು ತೆಗೆದು ಕೊಳೆಗೇರಿ ಅಭಿವೃದ್ಧಿ ಮಂಡಳಿಯಿಂದ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಬೇಕೆಂದು ಒತ್ತಾಯಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್ ರಾಜ್ಯದ ಜನರಿಗೆ ಅನ್ಯಾಯ ಮಾಡುತ್ತಿದ್ದಾರೆ. ಈ ಅನ್ಯಾಯ ಸರಿಪಡಿಸದಿದ್ದರೆ ಬಿಜೆಪಿಯಿಂದ ಜನರಲ್ಲಿ ಜಾಗೃತಿ ಮೂಡಿಸಿ ಸರ್ಕಾರದ ವಿರುದ್ಧ ಪ್ರತಿಭಟನೆ ತೀವ್ರಗೊಳಿಸುವುದಾಗಿ ಪ್ರತಾಪಗೌಡ ಪಾಟೀಲ ತಿಳಿಸಿದರು.
ಪ್ರಮುಖರಾದ ರವಿಗೌಡ ಪಾಟೀಲ, ಪ್ರಸನ್ನ ಪಾಟೀಲ, ಯಲ್ಲೋಜಪ್ಪ ಕೊರೆಕರ್, ಮಸೂದ ಪಾಷಾ, ಯಮನಪ್ಪ ಭೋವಿ, ಕೊಳೆಗೇರಿ ಪ್ರದೇಶದ ನಿವಾಸಿಗಳಿದ್ದರು.