ವಕ್ಫ್ ಅಧಿಕಾರಿಯಿಂದ ಸುಳ್ಳು ದೂರು

False complaint by waqf officer
ಮುದ್ದೇಬಿಹಾಳ ಪಟ್ಟಣದ ಪ್ರವಾಸಿಮಂದಿರದಲ್ಲಿ ಶನಿವಾರ ಅಂಜುಮನ್ ಇಸ್ಲಾಂ ಕಮೀಟಿ ನಿಕಟಪೂರ್ವ ಅಧ್ಯಕ್ಷ ಅಲ್ಲಾಭಕ್ಷೃ ನಾಯ್ಕೋಡಿ ಮಾತನಾಡಿದರು. ಹಿಂದಿನ ಆಡಳಿತ ಮಂಡಳಿ ಪದಾಧಿಕಾರಿಗಳು ಇದ್ದರು.
Published on

ಮುದ್ದೇಬಿಹಾಳ: ಪಟ್ಟಣದ ಅಂಜುಮನ್ ಎ ಇಸ್ಲಾಂ ಸಂಸ್ಥೆಗೆ ಸೇರಿದ ಬಿದರಕುಂದಿ ಗ್ರಾಮದ ರಿ.ಸ.ನಂ. 180/2 ಕ್ಷೇತ್ರ 3 ಎಕರೆ 12ಗುಂಟೆ ಜಮೀನಿನಲ್ಲಿ 1ಎಕರೆ 15ಗುಂಟೆ ಜಮೀನು ಹಿಂದಿನ ಆಡಳಿತ ಮಂಡಳಿಯವರು ಮಾರಾಟ ಮಾಡಿದ್ದಾರೆ ಎಂದು ವಕ್ಫ್ ಅಧಿಕಾರಿ ಯಾವುದೇ ದಾಖಲೆ, ಆಧಾರಗಳಿಲ್ಲದೇ ಪೊಲೀಸ್ ಠಾಣೆಗೆ ದಾಖಲಿಸಿರುವ ದೂರು ದುರುದ್ದೇಶಪೂರಿತವಾಗಿದೆ ಎಂದು ಅಂಜುಮನ್ ಇಸ್ಲಾಂ ಕಮೀಟಿ ಹಿಂದಿನ ಆಡಳಿತ ಮಂಡಳಿ ಪದಾಧಿಕಾರಿಗಳು ತಿಳಿಸಿದರು.

ಪಟ್ಟಣದ ಪ್ರವಾಸಿಮಂದಿರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸ್ಥೆಯ ಹಿಂದಿನ ಆಡಳಿತ ಮಂಡಳಿಯ ಪದಾಧಿಕಾರಿಗಳ ಬಗ್ಗೆ ನಡೆದಿರುವ ಷಡ್ಯಂತ್ರದ ಬಗ್ಗೆ ವಿವರಿಸಿದರು.

ನಿಕಟಪೂರ್ವ ಅಧ್ಯಕ್ಷ ಅಲ್ಲಾಭಕ್ಷೃ ನಾಯ್ಕೋಡಿ ಮಾತನಾಡಿ, ಪೊಲೀಸ್ ಠಾಣೆಯಲ್ಲಿ ನಿಕಟಪೂರ್ವ ಆಡಳಿತ ಮಂಡಳಿಯ 25 ಜನರು ಮತ್ತು ಆಸ್ತಿಯ ಮಾಲೀಕರಿಬ್ಬರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಎಫ್‌ಐಆರ್‌ನಲ್ಲಿ ಈ ಜಮೀನನ್ನು ವಕ್ಫ್ ಆಸ್ತಿಯೆಂದು ದೂರು ಕೊಟ್ಟಿರುವ ಜಿಲ್ಲಾ ವಕ್ಫ್ ಅಧಿಕಾರಿ ಮೋಹಸಿನ ಜಮಖಂಡಿ ಅದಕ್ಕೆ ಸಂಬಂಧಿಸಿದ ಯಾವುದೇ ಗೆಜೆಟ್ ನೋಟಿಫಿಕೇಶನ್ ಪ್ರತಿಯನ್ನು ಹಾಜರುಪಡಿಸಿಲ್ಲ. ಅಲ್ಲದೇ ಈ ಆಸ್ತಿಗೆ ಸಂಬಂಧಿಸಿದಂತೆ ಯಾವುದೇ ರೀತಿಯ ದಾಖಲೆಯನ್ನು ಪರಿಶೀಲನೆ ಮಾಡಿಲ್ಲ. ಈ ಆಸ್ತಿಗೆ ಸಂಬಂಧಿಸಿದಂತೆ ನ್ಯಾಯಾಲಯಗಳಲ್ಲಿ ಪ್ರಕರಣಗಳು ಚಾಲ್ತಿಯಲ್ಲಿದ್ದರೂ ಅದನ್ನು ಸಹ ಫಿರ್ಯಾದಿ ಕೊಟ್ಟವರು ತಮ್ಮ ಫಿರ್ಯಾದಿಯಲ್ಲಿ ಕಾಣಿಸಿಲ್ಲ ಎಂದರು.

ಮಾಜಿ ಸದಸ್ಯ ಅಯ್ಯೂಬ್ ಮನಿಯಾರ್ ಮಾತನಾಡಿ, ಸಂಸ್ಥೆಯ ಏಳಿಗೆಯನ್ನು ಬಯಸದ ಕೆಲವು ವ್ಯಕ್ತಿಗಳು ಸೇರಿಕೊಂಡು ಸಂಸ್ಥೆಯ ಪ್ರಾಮಾಣಿಕ ಚುನಾಯಿತ ಸದಸ್ಯರ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡಿದ್ದು, ಅವು ಸತ್ಯಕ್ಕೆ ದೂರವಾದವುಗಳಾಗಿವೆ. ಅಲ್ಲದೇ ಸಲಹಾ ಸಮಿತಿಯ ಸದಸ್ಯರ ಪೈಕಿ ಒಬ್ಬರ ಸದಸ್ಯರ ವಿರುದ್ಧ ಈ ಮುಂಚೆ ಸಂಸ್ಥೆಯ ಹಣವನ್ನು ದುರುಪಯೋಗಪಡಿಸಿಕೊಂಡಿದ್ದರ ಕುರಿತು ಪ್ರಕರಣ ಸಹ ದಾಖಲಾಗಿತ್ತು. ಈ ಎಲ್ಲ ವ್ಯಕ್ತಿಗಳು ಸಂಸ್ಥೆಗೆ ಯಾವುದೇ ತರಹದ ಒಂದು ನೈಯಾ ಪೈಸೆಯ ಕೊಡುಗೆಯನ್ನು ಸಹ ನೀಡಿರುವುದಿಲ್ಲ. ಅಂತಹ ವ್ಯಕ್ತಿಗಳು ಸಂಸ್ಥೆಯ ಬಗ್ಗೆ ಮಾತನಾಡುವ ನೈತಿಕತೆಯನ್ನು ಸಹ ಹೊಂದಿರುವುದಿಲ್ಲ. ಇಂತಹ ವ್ಯಕ್ತಿಗಳ ನೀಚ ಕಾರ್ಯದಿಂದ ದಾನ ನೀಡಿದ ವ್ಯಕ್ತಿಗಳು ಇಂದು ಪ್ರಕರಣದಲ್ಲಿ ಆರೋಪಿಗಳಾಗುವಂತಾಗಿದೆ. ಕೂಡಲೇ ಸಮಾಜದ, ನಿಕಟಪೂರ್ವ ಚುನಾಯಿತ ಸದಸ್ಯರ ಕ್ಷಮೆಯಾಚಿಸಬೇಕು. ಇದೇ ರೀತಿಯ ಕಾರ್ಯಗಳನ್ನು ಅವರು ಮುಂದುವರೆಸಿದಲ್ಲಿ ಕಾನೂನಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಲು ನಿಕಟಪೂರ್ವ ಆಡಳಿತ ಮಂಡಳಿಯವರು ಹಿಂದೇಟು ಹಾಕುವುದಿಲ್ಲ ಎಂದರು.

ಸುದ್ದಿಗೋಷ್ಠಿಯಲ್ಲಿ ಹಿಂದಿನ ಆಡಳಿತ ಮಂಡಳಿ ಪದಾಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net