

ಕಲಬುರಗಿ: ನಗರದ ಬಡೇಪುರದ ಸರ್ವೇ ೧೨ರಲ್ಲಿನ ೮ ಎಕರೆ ೩೪ ಗುಂಟೆ ಜಮೀನು ವಕ್ಫ್ ಬೋರ್ಡ್ಗೆ ಸಂಬAಧಿಸಿದೆ. ಆದರೆ, ಈ ಭೂಮಿಯನ್ನು ಕಾನೂನು ಬಾಹಿರವಾಗಿ ವರ್ಗಾವಣೆ ಮಾಡಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಸರ್ಕಾರಿ ಭೂಮಿ ಪರಭಾರೆ ಮಾಡಿದ ವ್ಯಕ್ತಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಮಾಡಬೇಕು ಎಂದು ಹೋರಾಟಗಾರ ಶಿವಲಿಂಗ ಹಳಿಮನಿ ಆಗ್ರಹಿಸಿದರು.
ಈ ಕುರಿತು ನಡೆದ ವಿಚಾರಣೆಯಲ್ಲಿ ಈಗ ತಹಸೀಲ್ದಾರ್ ಆಗಿರುವ ನಿಸಾರ ಅಹ್ಮದ್ ವಜೀರ್ ಹಿಂದೆ ಬಡೇಪುರದ ಗ್ರಾಮ ಲೆಕ್ಕಾಧಿಕಾರಿ ಆಗಿದ್ದಾಗ ವಕ್ಫ್ ಬೋರ್ಡ್ ಜಮೀನು ಸಿಟಿಎಸ್ ಅಧಾರದಲ್ಲಿ ನಿವೇಶನಗಳನ್ನು ಹಾಕಿ ಮಾರಿರುವ ಆರೋಪ ಸಾಬೀತಾಗಿದೆ. ವಕ್ಫ್ ಬೋರ್ಡ್ ಎಸ್ಟೆಟ್ ಅಧಿಕಾರಿ ಹಾಗೂ ಕೆಎಎಸ್ ನಿವೃತ್ತ ಅಧಿಕಾರಿ ಮುಜಿಬುಲ್ಲಾ ಜಾÀರಿ ವಿಚಾರಣೆ ಮಾಡಿ, ವರದಿ ನೀಡಿರುವಂತೆ ನಿಸಾರ ಅಹ್ಮದ್ ವಜೀರ್ ಮಾಡಿದ ಬಹುತೇಕ ಕೆಲಸಗಳಲ್ಲಿ ಅವ್ಯವಹಾರಗಳು ಆಗಿವೆ. ಕಾನೂನು ಉಲ್ಲಂಘನೆ ಆಗಿವೆ ಎಂದು ತಿಳಿಸಿದ್ದಾರೆ. ಆದ್ದರಿಂದ ಈ ವರದಿಯನ್ನಾಧರಿಸಿ ಕ್ರಮ ಕೈಗೊಳ್ಳಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಕಮಲಾಪುರ ಉಪ ತಹಸೀಲ್ದಾರ್ ಇದ್ದಾಗ ಸರ್ಕಾರಿ ಹಣ ೧.೪೧ ಲಕ್ಷ ರೂ. ಸ್ವಂತಕ್ಕೆ ಬಳಸಿಡಿದ್ದರು. ಈ ಕುರಿತು ಜಿಲ್ಲಾಧಿಕಾರಿಗೆ ದೂರು ನೀಡಲಾಗಿತ್ತು. ೪೦ ದಿನದ ಬಳಿಕ ಹಣವನ್ನು ಅಂಚೆ ಕಚೇರಿಗೆ ಕಟ್ಟಿದ ಸಿಬ್ಬಂದಿಯನ್ನು ಅಮಾನತು ಮಾಡಿ ನಿಸಾರ್ ಅವರನ್ನು ಜಿಲ್ಲಾಧಿಕಾರಿ ಉಳಿಸಿದ್ದಾರೆ ಎಂದು ಆಪಾದಿಸಿದರು. ಮೂಲ ಜಾತಿ ಪ್ರಮಾಣ ಪತ್ರದಲ್ಲಿ ಕಬ್ಬಲಿಗ ಅಂತಾ ಇದ್ದರೂ, ಅವರಿಗೆ ತಳವಾರ ಎಂದು ಎಸ್‌ಟಿ ಪ್ರಮಾಣ ಪತ್ರ ನೀಡಿದ್ದಾರೆ ಎಂದು ಆರೋಪಿಸಿದರು.
ಮರಗಳ ಮಾರಾಟದ ಹಣ ದುರ್ಬಳಕೆ: ಹುಸೇನ್ ಪಾಶಾ ಎನ್ನುವ ತಹಸೀಲ ಕಚೇರಿ ಸಿಬ್ಬಂದಿ, ಬೀದಿಯಲ್ಲಿ ದೊಡ್ಡ ಮರಗಳನ್ನು ಕಡಿದ ಬಳಿಕ ಮಾರಾಟದಿಂದ ಬಂದ ಹಣವನ್ನು ಸರ್ಕಾರಕ್ಕೆ ಭರ್ತಿ ಮಾಡದೆ ದುರ್ಬಳಕೆ ಮಾಡಿಕೊಂಡಿದ್ದಾರೆ. ಜೇವರ್ಗಿ ತಹಸೀಲ್ ಕಚೇರಿಯಲ್ಲಿ ಕೆಲಸ ಮಾಡುವಾಗ ಎಪಿಎಲ್ ಬದಲಾಗಿ ಕೆಲವರಿಗೆ ಬಿಪಿಎಲ್ ಕಾರ್ಡ್ಗಳನ್ನು ವಿತರಿಸಿ ಸರ್ಕಾರಕ್ಕೆ ೧೫ ಲಕ್ಷ ರೂ.ವರೆಗೆ ನಷ್ಟ ಬರುವಂತೆ ಮಾಡಿರುವ ಕುರಿತು ಖುದ್ದು ತಹಸೀಲ್ದಾರ್ ವರದಿ ನೀಡಿದರೂ ಕ್ರಮ ಕೈಗೊಳ್ಳುವಲ್ಲಿ ಜಿಲ್ಲಾಧಿಕಾರಿ ಹಿಂಜರಿದಿದ್ದಾರೆ. ಇದೇ ವೇಳೆ ಇತರೆ ಅಧಿಕಾರಿಗಳ ಮೇಲೆ ದೂರು ಬಂದರೆ ಕೂಡಲೇ ಕ್ರಮ ಕೈಗೊಳ್ಳುವ ಜಿಲ್ಲಾಧಿಕಾರಿಗಳಿಗೆ ನಾವು ಹಲವು ಬಾರಿ ದೂರು ನೀಡಿದರೂ ಉಭಯ ಸರ್ಕಾರಿ ನೌಕರರ ವಿರುದ್ಧ ಕ್ರಮ ಕೈಗೊಂಡಿಲ್ಲ. ಆದ್ದರಿಂದ ನಾವು ರಾಜ್ಯಪಾಲರಿಗೆ ದೂರು ನೀಡುತ್ತಿದ್ದು, ಶೀಘ್ರವೇ ನ್ಯಾಯಾಲಯಕ್ಕೂ ಮೊರೆ ಹೋಗುವುದಾಗಿ ತಿಳಿಸಿದರು.
ಪ್ರಮುಖರಾದ ಸಂದೀಪ ಭರಣಿ, ಮಹೇಶ ಪಾಟೀಲ್, ಗಂಗಾಧರ ಪಾಟೀಲ್, ದಯಾನಂದ ಪಾಟೀಲ್, ಸತೀಶ ಮಾಹೂರ್ ಇದ್ದರು.