

ಹಾಸನ: ವಕೀಲರು ಧರಿಸುವ ಕಪ್ಪು ಬಟ್ಟೆಗೆ ವಿಶೇಷ ಸ್ಥಾನಮಾನವಿದೆ. ಅದಕ್ಕೆ ಚ್ಯುತಿ ಬರುವ ರೀತಿಯಲ್ಲಿ ಯಾರೂ ವರ್ತಿಸಬಾರದು ಎಂದು ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ಅವರು ಕಿವಿಮಾತು ಹೇಳಿದರು.
ರಾಜ್ಯ ವಕೀಲರ ಪರಿಷತ್, ಜಿಲ್ಲಾ ವಕೀಲರ ಸಂಘ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣದಲ್ಲಿ ಶನಿವಾರದಿಂದ ಹಮ್ಮಿಕೊಂಡಿರುವ ಐದು ದಿನಗಳ ಕಾನೂನು ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮನುಷ್ಯ ಹುಟ್ಟಿದಾಗಿನಿಂದ ಸಾಯುವ ತನಕ ಸದಾ ಕಲಿಯುತ್ತಿರುತ್ತಾನೆ. ವಕೀಲ ವೃತ್ತಿಯಲ್ಲಿಯೂ ನಿತ್ಯವೂ ಕಲಿಕೆಗೆ ಒಡ್ಡಿಕೊಳ್ಳಲೇಬೇಕು. ಅಲ್ಪಸ್ವಲ್ಪ ಓದಿಕೊಂಡ ತಕ್ಷಣ ನಾವೇ ಬ್ರಹ್ಮ ಎಂಬ ಅಹಂ ಬರಬಾರದು. ಸಮಾಜದ ಆಗು-ಹೋಗುಗುಳನ್ನು ಸೂಕ್ಷ್ಮವಾಗಿ ಅರಿಯಬೇಕು. ನಿರಂತರ ಅಧ್ಯಯನದಿಂದ ಕಾನೂನು ಜ್ಞಾನ ಅರಿತು ಕಕ್ಷಿದಾರರಿಗೆ ನ್ಯಾಯ ಒದಗಿಸಬೇಕು ಎಂದು ಸಲಹೆ ನೀಡಿದರು.
ವಕೀಲರು ದುಡ್ಡಿನಾಸೆಗೆ ವೃತ್ತಿಗೆ ಮೋಸ ಮಾಡಬಾರದು. ನ್ಯಾಯ ಸಿಗುತ್ತದೆ ಎಂಬ ನಂಬಿಕೆಯಿಂದ ಬರುವ ಕಕ್ಷಿದಾರರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು. ಅನ್ಯಾಯಕ್ಕೆ ಒಳಗಾದವರು ಮಾತ್ರ ನ್ಯಾಯಾಲಯಕ್ಕೆ ಬರುತ್ತಾರೆ. ಅವರ ಭಾವನೆ, ನಂಬಿಕೆ, ವಿಶ್ವಾಸಕ್ಕೆ ಧಕ್ಕೆಯಾಗದಂತೆ ನಾವು ವರ್ತಿಸಬೇಕು. ಸ್ವಾಮಿ ವಿವೇಕಾನಂದ, ಅಟಲ್ ಬಿಹಾರಿ ವಾಜಪೇಯಿ, ಲಾಲ್ ಬಹದ್ದೂರ್ ಶಾಸ್ತ್ರಿ ಅವರಂತಹ ಮಹಾನ್ ನಾಯಕರು ಇಂದಿಗೂ ನೆನಪಿನಲ್ಲಿರುವುದು ವ್ಯಕ್ತಿತ್ವದಿಂದಲೇ ಹೊರತು ಆರ್ಥಿಕ ಶ್ರೀಮಂತಿಕೆಯಿಂದಲ್ಲ. ಆದ್ದರಿಂದ ವಕೀಲರು ನೊಂದವರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದರು ಹೇಳಿದರು.
ಹೈಕೋರ್ಟ್‌ನ ಆಡಳಿತಾತಕ ನ್ಯಾಯಮೂರ್ತಿ ಎಚ್.ಟಿ.ನರೇಂದ್ರ ಪ್ರಸಾದ್ ಅವರು ಮಾತನಾಡಿ, ಗ್ರಾಮೀಣ ಭಾಗದ ವಕೀಲರು ನ್ಯಾಯಾಧೀಶರಾಗಿ ಬರಬೇಕು. ಕೇವಲ ದುಡ್ಡಿಗಾಗಿ ಈ ವೃತ್ತಿಗೆ ಸೇರಿದವರು ಯಶಸ್ಸು ಸಾಧಿಸಲು ಸಾಧ್ಯವಿಲ್ಲ. ನಮ್ಮ ಜ್ಞಾನ ವೃದ್ಧಿಗೆ ವಕೀಲ ವೃತ್ತಿ ನೆರವಾಗುತ್ತದೆ. ವಕೀಲರು ಮತ್ತು ನ್ಯಾಯಾಧೀಶರು ಎತ್ತಿನ ಗಾಡಿಯ ಎರಡು ಚಕ್ರಗಳಿದ್ದಂತೆ. ಇಬ್ಬರೂ ನ್ಯಾಯ ಮಾರ್ಗದಲ್ಲಿ ಸಾಗುವ ಮೂಲಕ ಅನ್ಯಾಯಕ್ಕೆ ಒಳಗಾದವರಿಗೆ ನೆರವಾಗಬೇಕು. ಬಹುತೇಕ ಯುವ ವಕೀಲರು ಯಾವುದಾದರು ಕಂಪನಿಗಳ ಕಾನೂನು ಸಲಹೆಗಾರರಾಗಿ ಅಲ್ಲಿಯೇ ಸೀಮಿತರಾಗುತ್ತಾರೆ. ಅದರಿಂದ ಯಾವ ಪ್ರಯೋಜನವಿಲ್ಲ. ದುಡಿಮೆಯೇ ಪ್ರಧಾನವಾದರೆ ಅದಕ್ಕಾಗಿ ಬೇರೆ ಕೆಲಸ ಮಾಡಬಹುದು. ಸಾಮಾಜಿಕ ಸೇವೆಯ ಉದ್ದೇಶದಿಂದ ವೃತ್ತಿಯಲ್ಲಿ ತೊಡಗಿದರೆ ಮಾತ್ರ ಕೆಲಸಕ್ಕೆ ಗೌರವ ನೀಡಿದಂತಾಗುತ್ತದೆ ಎಂದರು.
ಹೈಕೋರ್ಟ್ ನ್ಯಾಯಮೂರ್ತಿ ಟಿ.ಜಿ.ಶಿವಶಂಕರೇಗೌಡ ಅವರು ಮಾತನಾಡಿ, ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ನ್ಯಾಯಾಂಗದ ಪಾತ್ರ ಅಧಿಕವಾಗಿರುವುದರಿಂದ ವಕೀಲರು ಅಧ್ಯಯನಶೀಲರಾಗಬೇಕು. ಎಷ್ಟೋ ಜನ ವಕೀಲರು ತಾವು ತಿಳಿದಿದ್ದೆ ಸಂವಿಧಾನ ಅದೇ ಜನ್ಮ ಸಿದ್ಧ ಹಕ್ಕು ಎಂದು ವಾದಿಸುತ್ತಾರೆ. ಇಪ್ಪತ್ತು ವರ್ಷಗಳಿಂದ ವಕೀಲರಾದವರು ಇವತ್ತಿಗೂ ಒಂದೇ ಧಾಟಿಯಲ್ಲಿ ಮಾತನಾಡುತ್ತಾರೆ. ಹೈಕೋರ್ಟ್‌ನಲ್ಲಿ ವಾದ ಮಂಡಿಸುವ ಚಾಣಾಕ್ಷತೆ ಇನ್ನೂ ಬಂದಿಲ್ಲ. ಹೀಗಾದರೆ ಕೆಲಸಕ್ಕೆ ನ್ಯಾಯ ಒದಗಿಸಲು ಸಾಧ್ಯವಿಲ್ಲ. ಹಾಗೆಯೇ ಪ್ರೊಬೆಷನರಿ ನ್ಯಾಯಾಧೀಶರು ಸಹ ಪ್ರಚಲಿತ ವಿದ್ಯಮಾನಗಳ ಅರಿವು ಹೊಂದಬೇಕು. ಅಪರಾಧ ಪ್ರಕರಣಗಳಲ್ಲಿ ವಾದಿಸುವ ಬಗೆಯನ್ನು ಅರಿಯಬೇಕು. ಕಾಲ ಕಾಲಕ್ಕೆ ಕಾನೂನಿನಲ್ಲಾಗುವ ಬದಲಾವಣೆಗಳ ಮಾಹಿತಿ ಇರಬೇಕು. ಅದಕ್ಕೆ ನಿರಂತರ ಅಧ್ಯಯನಬೇಕೆಂದು ಹೇಳಿದರು.
ವೇದಿಕೆ ಕಾರ್ಯಕ್ರಮ ಬಳಿಕ ಭಾರತೀಯ ವಕೀಲರ ಅಧಿನಿಯಮ 1961 ಮತ್ತು ವಕೀಲರಿಗಾಗಿ ನೀತಿ ಶಾಸ್ತ್ರ ವಿಚಾರವಾಗಿ ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ಅವರು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಡಿ.ಟಿ.ಪ್ರಸನ್ನ, ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶೆ ಉಷಾರಾಣಿ, ರಾಜ್ಯ ವಕೀಲರ ಪರಿಷತ್ ಅಧ್ಯಕ್ಷ ಎಚ್.ಎಲ್.ವಿಶಾಲ್ ರಘು, ಸದಸ್ಯ ಎಂ.ಎನ್.ಮಧುಸೂದನ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಜಿ.ಕೆ.ದಾಕ್ಷಾಯಿಣಿ, ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎಂ.ಸಂತೋಷ್, ಉಪಾಧ್ಯಕ್ಷ ಎಚ್.ಎನ್.ಯೋಗೀಶ್, ಎಚ್.ಎನ್.ಪ್ರತಾಪ್, ಆರ್.ರೂಪಾ ಇತರರಿದ್ದರು.