

ಮೈಸೂರು: ವಕೀಲರ ರಕ್ಷಣಾ ಕಾಯ್ದೆಯೊಂದಿಗೆ ಪ್ರತಿಯೊಬ್ಬ ವಕೀಲರಿಗೂ ವಿಮೆ ಸೌಲಭ್ಯ ಕಲ್ಪಿಸಿಕೊಡಬೇಕು ಎಂದು ಹಿಮಾಚಲಪ್ರದೇಶ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಲ್.ನಾರಾಯಣಸ್ವಾಮಿ ಒತ್ತಾಯಿಸಿದರು.
ಕರ್ನಾಟಕ ರಾಜ್ಯ ವಕೀಲರ ಪರಿಷತ್, ಮೈಸೂರು ವಕೀಲರ ಸಂಘದ ಸಹಯೋಗದಲ್ಲಿ ನಗರದ ದಸರಾ ವಸ್ತುಪ್ರದರ್ಶನ ಮೈದಾನದಲ್ಲಿ ರಾಜ್ಯ ಮಟ್ಟದ ವಕೀಲರ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಕಟ್ಟಡ ಕಾರ್ಮಿಕರಿಗೆ ವಿಮೆ ಸೇರಿದಂತೆ ಇನ್ನಿತರ ಸೌಲಭ್ಯಗಳಿವೆ. ಆದರೆ ವಕೀಲರಿಗೆ ಏನೂ ಇಲ್ಲ. ವಕೀಲ ವೃತ್ತಿಗೆ ನೋಂದಣಿಯಾದ ದಿನದಿಂದಲೇ ವಿಮೆ ಸೌಲಭ್ಯ ನೀಡುವಂತಾಗಬೇಕು. ಅದಕ್ಕಾಗಿ ರಾಜ್ಯ ಸರ್ಕಾರ 10-20 ಕೋಟಿ ರೂ. ಅನುದಾನ ಮೀಸಲಿಡಬೇಕು. ರಾಜ್ಯ ವಕೀಲರ ಪರಿಷತ್ ಸಹ ತನ್ನ ಪಾಲು ನೀಡಬೇಕು ಎಂದು ಸಲಹೆ ನೀಡಿದರು.
ವಕೀಲರ ರಕ್ಷಣಾ ಕಾಯ್ದೆ ಜಾರಿಗೆ ತರಬೇಕು. ಅದಕ್ಕಿಂತ ಮುಖ್ಯವಾದ ವಕೀಲರ ಜೀವ ರಕ್ಷಣೆಗಾಗಿ ವಿಮೆ ಮಾಡಿಸಬೇಕು. ವಿಮೆಯಿಂದಾಗಿ 50 ಲಕ್ಷ ರೂ.ನಿಂದ 1 ಕೋಟಿ ರೂ.ವರೆಗೆ ಹಣ ಸಿಕ್ಕರೆ ಅವರ ಕುಟುಂಬದವರಿಗೆ ಅನುಕೂಲ ಆಗಲಿದೆ ಎಂದರು.
ಕೋರ್ಟ್ ಕಲಾಪ ಬಹಿಷ್ಕರಿಸಿದರೆ ವಕೀಲರು ಎಲ್ಲಿಗೆ ಹೋಗಬೇಕು? ಹೀಗಾಗಿ, ಕಲಾಪ ಬಹಿಷ್ಕಾರಕ್ಕೆ ನನ್ನ ವಿರೋಧವಿದೆ. ಕೋರ್ಟ್‌ನ ಬಾಗಿಲು ಮುಚ್ಚಿದರೆ ವಕೀಲರು ಏನು ಮಾಡಬೇಕು? ಬಸ್ ನಿಲ್ದಾಣದಲ್ಲಿ ಮೂಟೆ ಹೊರಲು ಸಾಧ್ಯವೇ? ದಿನಗೂಲಿ ಕೆಲಸ ಮಾಡಲು ಆಗುತ್ತದೆಯೇ ಎಂದು ಪ್ರಶ್ನಿಸಿದರು.
ವಕೀಲರಿಗೆ ವಕೀಲಗಿರಿ ಬಿಟ್ಟು ಬೇರೆ ವೃತ್ತಿ ಗೊತ್ತಿಲ್ಲ. ಇಂತಹ ಸಂದರ್ಭದಲ್ಲಿ ವಕೀಲರು ಸಂಕಷ್ಟಕ್ಕೆ ಸಿಲುಕಿಕೊಂಡು ತೊಂದರೆ ಅನುಭವಿಸುತ್ತಾರೆ. ಆದ್ದರಿಂದ ಕೋರ್ಟ್ ಕಲಾಪ ಬಹಿಷ್ಕಾರಕ್ಕೆ ವಕೀಲರು ಮುಂದಾಗಬಾರದು ಎಂದು ಕಿವಿಮಾತು ಹೇಳಿದರು.
ದೇಶದ ಸಂವಿಧಾನ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕಾದರೆ ನ್ಯಾಯಾಂಗ ಪ್ರಬಲವಾಗಿರಬೇಕು. ನ್ಯಾಯಾಂಗ ಪ್ರಬಲವಾಗಿರಬೇಕಾದರೆ ವಕೀಲರು ಪ್ರಬಲವಾಗಿ ಇರಬೇಕು. ನಾಗರಿಕರ ಹಕ್ಕುಗಳ ರಕ್ಷಕರು ವಕೀಲರು ಎಂದು ಹೇಳಿದರು.
ಪ್ರಜೆಗಳ ಹಕ್ಕುಬಾಧ್ಯತೆಗಳಿಗೆ ಧಕ್ಕೆಯಾದಾಗ ಮೊದಲು ಧ್ವನಿ ಎತ್ತುವವರೇ ವಕೀಲರು. ಹೀಗಾಗಿ ಸಂವಿಧಾನ, ಮೂಲಭೂತ ಹಕ್ಕುಗಳು, ಪ್ರಜಾಪ್ರಭುತ್ವ ಆಶಯ ರಕ್ಷಣೆಯ ಸೇನಾನಿಗಳಾಗಿ ನ್ಯಾಯವಾದಿಗಳು ಕಾರ್ಯನಿರ್ವಹಿಸುತ್ತಾರೆ. ಆದ್ದರಿಂದ ವಕೀಲರ ವೃತ್ತಿ ದೇಶದ ಆಸ್ತಿಯಾಗಿದೆ ಎಂದು ಬಣ್ಣಿಸಿದರು.
ಸುಪ್ರಿಂಕೋರ್ಟ್‌ನ ಏಳು ಹಿರಿಯ ನ್ಯಾಯಮೂರ್ತಿಗಳು ಸುದ್ದಿಗೋಷ್ಠಿ ಮಾಡಿದ್ದರು. ಈ ಕುರಿತು ಪ್ರತಿಕ್ರಿಯೆ ನೀಡಲು ಬಹಳಷ್ಟು ಜನರು ಹಿಂದೇಟು ಹಾಕಿದ್ದರು. ಆದರೆ ಹಿರಿಯ ವಕೀಲ ಫಾಲಿ ಎಸ್.ನಾರಿಮನ್ ಅವರು ‘ಇದು ತಪ್ಪು, ಮಾಧ್ಯಮದ ಬಳಿ ನ್ಯಾಯಮೂರ್ತಿಗಳು ಹೋಗಿದ್ದು ಸರಿಯಲ್ಲ’ ಎಂದು ಖಡಕ್ ಆಗಿ ಹೇಳಿದ್ದರು. ಇದುವೇ ವಕೀಲರ ಶಕ್ತಿ ಎಂದರು.
ವಕೀಲರು ಸಾಮಾಜಿಕ ಇಂಜಿನಿಯರ್ ಆಗಿಯೂ ಕೆಲಸ ಮಾಡಬೇಕು. ವೈಚಾರಿಕತೆ, ಸೈದ್ಧಾಂತಿಕ ಆಧಾರದ ಮೇಲೆ ಸಮಾಜ ನಿರ್ಮಾಣ ಕಾಯಕದಲ್ಲೂ ತೊಡಗಿಸಿಕೊಳ್ಳಬೇಕು. ಜತೆಗೆ, ಅಧಿಕಾರ ಸಿಕ್ಕಾಗ ಸಮಯವನ್ನು ಹಾಳು ಮಾಡದೆ ಜನೋಪಯೋಗಿ ಕೆಲಸಕ್ಕೆ ಬಳಕೆ ಮಾಡಿಕೊಳ್ಳಬೇಕು. ಅಧಿಕಾರ ಮುಗಿದಾಗ ಏನೂ ಮಾಡಲು ಆಗುವುದಿಲ್ಲ ಎಂದರು.
ಅಕಾಡೆಮಿ ಸ್ಥಾಪಿಸುವುದು ಅಗತ್ಯ:
ಉಪ ಲೋಕಾಯುಕ್ತ ನ್ಯಾ.ಕೆ.ಎನ್. ಫಣೀಂದ್ರ ಮಾತನಾಡಿ, ವಕೀಲರಿಗೆ ತರಬೇತಿ ನೀಡಲು ವಕೀಲರ ಅಕಾಡೆಮಿ ಸ್ಥಾಪಿಸುವುದು ಅಗತ್ಯ ಇದೆ ಎಂದು ಸಲಹೆ ನೀಡಿದರು.
ಕಾನೂನು ಪದವಿ ಪಡೆದುಕೊಂಡು ವಕೀಲ ವೃತ್ತಿಗೆ ಪ್ರವೇಶಿಸುವವರಿಗೆ ಕೋರ್ಟ್ ಕಲಾಪದ ಅನುಭವ, ಕಚೇರಿ ಕೆಲಸ ಗೊತ್ತಿರುವುದಿಲ್ಲ. ಇಂತಹ ಸಂದರ್ಭದಲ್ಲಿ ಅವರಿಗೆ ಮುಜುಗರವಾಗುತ್ತದೆ. ಆದ್ದರಿಂದ ಕಿರಿಯ ವಕೀಲರಿಗೆ ತರಬೇತಿ ನೀಡಿ ತಯಾರು ಮಾಡಬೇಕಿದೆ. ಅದಕ್ಕಾಗಿ ವಕೀಲರ ಪರಿಷತ್ ಈ ಕುರಿತು ಕ್ರಿಯಾಯೋಜನೆ ಸಿದ್ಧಪಡಿಸಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಬೇಕು ಎಂದರು.
ರಾಷ್ಟ್ರ ಕಟ್ಟುವಲ್ಲಿ ವಕೀಲರು ಸದಾ ಮುಂಚೂಣಿಯಲ್ಲಿ ಇರುವವರು. ಆದ್ದರಿಂದ ಈಗಿನ ವಕೀಲರು ವೈಯಕ್ತಿಕ ಜೀವನದಲ್ಲೇ ಮುಳುಗಿ ಹೋಗದೆ ಸಾಮಾಜಿಕ ಜೀವನದ ಕಡೆಗೂ ಗಮನ ನೀಡಬೇಕು. ಈ ಮೂಲಕ ಸಮಾಜಮುಖಿ ಕೆಲಸ ಮಾಡಿ ಸಮಾಜದ ಋಣ ತೀರಿಸಬೇಕು ಎಂದು ಹೇಳಿದರು.
ರಕ್ಷಣಾ ಕಾಯ್ದೆ ಕುರಿತು ಚರ್ಚೆ
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿ, ವಕೀಲರ ರಕ್ಷಣಾ ಕಾಯ್ದೆ ಕುರಿತು ಚರ್ಚೆ ಮಾಡಲಾಗುತ್ತಿದೆ. ಇದನ್ನು ಜಾರಿಗೆ ತರಲು ರಾಜ್ಯ ಸರ್ಕಾರ ಸಿದ್ಧವಿದೆ. ಆದರೆ ಇಂತಹ ಸಂದರ್ಭದಲ್ಲಿ ಶೋಷಿತರು, ಅಸ್ಪಶ್ಯರು, ಅಲ್ಪಸಂಖ್ಯಾತರು, ಮಹಿಳೆಯರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದೆ. ಅವರ ಹಕ್ಕುಗಳು, ಹಿತರಕ್ಷಣೆ ಆಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಇವರ ಮೇಲೆ ಜಾತಿ ನಿಂದನೆ, ಶೋಷಣೆ, ದಾಳಿಗಳು ನಿರಾತಂಕವಾಗಿ ನಡೆಯುತ್ತಿವೆ. ಅವರ ರಕ್ಷಣೆಗೆ ವಕೀಲರು ಬರಬೇಕು. ಕಾನೂನು ಪ್ರಕಾರ ಇಂತಹ ಸಂತ್ರಸ್ತರಿಗೆ ನ್ಯಾಯ ಕಲ್ಪಿಸಿಕೊಡಬೇಕು ಎಂದು ಹೇಳಿದರು.
ಅಸ್ಪಶ್ಯತೆ, ಅಪೌಷ್ಟಿಕತೆ, ಮಾನವ ಹಕ್ಕುಗಳ ಉಲ್ಲಂಘನೆ ದೇಶಕ್ಕೆ ಅಂಟಿರುವ ಕಪ್ಪುಚುಕ್ಕೆ. ಇದನ್ನು ತೊಡೆದು ಹಾಕಲು ವಕೀಲರು ಕೈಜೋಡಿಸಬೇಕು. ಇದರೊಂದಿಗೆ ದೇಶದ ಸ್ವಾತಂತ್ರೃದ ಆಶಯಗಳು, ಸಂವಿಧಾನ, ಪ್ರಜಾಪ್ರಭುತ್ವದ ರಕ್ಷಣೆ ಮತ್ತು ಬಲವರ್ಧನೆಗೂ ವಕೀಲರು ಕೆಲಸ ಮಾಡಬೇಕು ಎಂದರು.
ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ, ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಜಿ.ಎಸ್.ಸಂಗ್ರೇಶಿ, ಭಾರತೀಯ ವಕೀಲರ ಪರಿಷತ್ ಮಾಜಿ ಉಪಾಧ್ಯಕ್ಷ, ಎಂಎಲ್‌ಸಿ ಎಸ್.ಎಲ್.ಬೋಜೇಗೌಡ, ರಾಜ್ಯ ವಕೀಲರ ಪರಿಷತ್ ಅಧ್ಯಕ್ಷ ಎಚ್.ಎಲ್.ವಿಶಾಲ್‌ರಘು, ಜಿಲ್ಲಾಧಿಕಾರಿ ಕೆ.ವಿ.ರಾಜೇಂದ್ರ, ನಗರ ಪೊಲೀಸ್ ಆಯುಕ್ತ ಬಿ.ರಮೇಶ್ ಇನ್ನಿತರರಿದ್ದರು.