

ಮೈಸೂರು: ವಕೀಲರ ಸಂರಕ್ಷಣಾ ಕಾಯ್ದೆ ಜಾರಿಗೆ ಆಗ್ರಹಿಸಿ ಮೈಸೂರು ವಕೀಲರ ಸಂಘದ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಯಿತು.
ನಗರದ ನ್ಯಾಯಾಲಯದ ಎದುರಿನ ಗಾಂಧಿ ಪುತ್ಥಳಿ ಬಳಿ ಜಮಾವಣೆಗೊಂಡ ವಕೀಲರು ತಮ್ಮ ಹಕ್ಕಿಗಾಗಿ ಆಗ್ರಹಿಸಿದರು. ಬಳಿಕ ಜಾಥಾ ಹೊರಟ ಪ್ರತಿಟನಾಕಾರರು ರಾಮಸ್ವಾಮಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಗಮನ ಸೆಳೆದರು.
ಅಲ್ಲಿಂದ ಮುಡಾ ಕಚೇರಿಗೆ ತೆರಳಿ ಅಲ್ಲಿ ನಡೆಯುತ್ತಿದ್ದ ಸಭೆಯಲ್ಲಿ ಪಾಲ್ಗೊಂಡಿದ್ದ ಶಾಸಕರನ್ನು ಭೇಟಿ ಮಾಡಿ ಹಕ್ಕು ಮಂಡಿಸಲು ಪ್ರಯತ್ನಿಸಿದರು. ಇದಕ್ಕೆ ಅವಕಾಶ ಸಿಗಲಿಲ್ಲ. ಆದರೆ, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಬಂದು ಮನವಿ ಸ್ವೀಕರಿಸಿದರು.
ಕರ್ನಾಟಕ ವಕೀಲರ ಪರಿಷತ್ತು ವತಿಯಿಂದ ರಾಜ್ಯ ಸರ್ಕಾರಕ್ಕೆ ಒಂದು ವರ್ಷದ ಹಿಂದೆ ವಕೀಲರ ಸಂರಕ್ಷಣಾ ಕಾಯ್ದೆಯ ಕರಡು ಪ್ರತಿಯನ್ನು ಸಲ್ಲಿಸಲಾಗಿದೆ. ಆದರೆ ಈ ಬಗ್ಗೆ ಮುಖ್ಯಮಂತ್ರಿ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಕರಡು ಪ್ರತಿಯನ್ನು ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಮಂಡನೆ ಮಾಡಿ ಉಭಯ ಸದನಗಳ ಒಪ್ಪಿಗೆ ಪಡೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ತ್ವರಿತವಾಗಿ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಸಂಘದ ಅಧ್ಯಕ್ಷ ಮಹಾದೇವಸ್ವಾಮಿ, ಪದಾಧಿಕಾರಿಗಳಾದ ಪುಟ್ಟಸಿದ್ದೇಗೌಡ, ಉಮೇಶ್, ಭಾಗ್ಯಮ್ಮ, ಎಚ್.ಎಸ್. ಮಹದೇವಸ್ವಾಮಿ ಇನ್ನಿತರರು ಇದ್ದರು.