ವಕೀಲರ ಮೇಲೆ ಹಲ್ಲೆ ಕ್ರಮಕ್ಕೆ ಆಗ್ರಹ

Lawyers
Published on

ಚಿತ್ರದುರ್ಗ: ಚಿಕ್ಕಮಗಳೂರಿನಲ್ಲಿ ನ. 30ರಂದು ಪೊಲೀಸರು ವಕೀಲ ಪ್ರೀತಮ್ ಅವರ ಮೇಲೆ ಹಲ್ಲೆ ಮಾಡಿರುವುದನ್ನು ವಿರೋಧಿಸಿ ವಕೀಲರ ಸಂಘದ ಪದಾಧಿಕಾರಿಗಳು, ನೂರಾರು ವಕೀಲರು ಶನಿವಾರ ಪ್ರತಿಭಟನೆ ನಡೆಸಿದರು.

ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು. ಅಲ್ಲಿನ ಪೊಲೀಸರ ವರ್ತನೆ ಖಂಡಿಸಿ, ಧಿಕ್ಕಾರ ಕೂಗಿದರು. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ರವಾನಿಸಿದರು.

ಪ್ರೀತಮ್ ಹೆಲ್ಮೆಟ್ ಧರಿಸದೆ, ಅಲ್ಲಿನ ಮಾರುಕಟ್ಟೆ ರಸ್ತೆಯಲ್ಲಿ ಸಂಚರಿಸಿದ ವೇಳೆ ಸಂಚಾರಿ ಪೊಲೀಸರು ದ್ವಿಚಕ್ರ ವಾಹನ ತಡೆದು ಏಕಾಏಕಿ ಕೀ ತೆಗೆದುಕೊಂಡಿದ್ದಾರೆ. ದಂಡ ಹಾಕಿ ಸ್ಥಳದಲ್ಲೇ ಕಟ್ಟುವುದಾಗಿ ತಿಳಿಸಿದರೂ ಠಾಣೆಯಲ್ಲೇ ಪಾವತಿಸುವಂತೆ ಕರೆದುಕೊಂಡು ಹೋಗಿ ಏಳೆಂಟು ಮಂದಿ ಪೊಲೀಸರು ಮಾರಣಾಂತಿಕ ಹಲ್ಲೆ ನಡೆಸಿದ್ದು, ಕಾನೂನು ಬಾಹಿರ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಲ್ಲೆ ನಡೆಸಿದ ಪೊಲೀಸರನ್ನು ಕರ್ತವ್ಯದಿಂದ ವಜಾ ಮಾಡಬೇಕು. ಬಂಧಿಸಿ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕು. ಸರ್ಕಾರದಿಂದ ಪ್ರೀತಮ್ ಅವರಿಗೆ ಪರಿಹಾರ ನೀಡಬೇಕು. ಬೆಳಗಾವಿ ಅಧಿವೇಶನದಲ್ಲಿ ವಕೀಲರ ಸಂರಕ್ಷಣಾ ಕಾಯ್ದೆ ಜಾರಿಗೊಳಿಸಬೇಕು ಎಂದು ಸರ್ಕಾರಕ್ಕೆ ಕೋರಿದರು.

ವಕೀಲರ ಸಂಘದ ಅಧ್ಯಕ್ಷ ವೈ.ತಿಪ್ಪೇಸ್ವಾಮಿ, ಉಪಾಧ್ಯಕ್ಷ ಬಿ.ಎಂ.ಅನಿಲ್‌ಕುಮಾರ್, ಪ್ರಧಾನ ಕಾರ್ಯದರ್ಶಿ ಆರ್.ಗಂಗಾಧರ್, ಪದಾಧಿಕಾರಿಗಳಾದ ಬಿ.ಇ.ಪ್ರದೀಪ್, ಬಿ.ಗಿರೀಶ್, ಪಿ.ದಾಸಪ್ಪ, ಎಸ್.ಕೆ.ಸುರೇಶ, ಎಚ್.ಮಹಮ್ಮದ್ ಇಮ್ರಾನ್, ಎನ್.ಹರೀಶ್, ಬಿ.ಎ.ರಾಜೀವ್, ಆರ್.ಧನಂಜಯ, ಎನ್.ಎಸ್.ವರುಣ, ಆರ್.ರವಿ, ಬಿ.ಎನ್.ರೂಪಾದೇವಿ, ಪಿ.ಶೀಲಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net