

ಆಲೂರು: ವಕೀಲರ ಮೇಲಿನ ಹಲ್ಲೆ ಖಂಡಿಸಿ, ವಕೀಲರ ಸಂರಕ್ಷಣಾ ಕಾಯ್ದೆ ಜಾರಿಗೆ ತರುವಂತೆ ಒತ್ತಾಯಿಸಿ ಶುಕ್ರವಾರ ವಕೀಲರ ಸಂಘದ ವತಿಯಿಂದ ತಹಸೀಲ್ದಾರ್ ಸೌಮ್ಯಾ ಅವರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ವಕೀಲರ ಸಂಘದ ತಾಲೂಕು ಅಧ್ಯಕ್ಷ ಮಧು ಮಾತನಾಡಿ, ನ್ಯಾಯಾಲಯದ ಭಾಗವಾಗಿರುವ ವಕೀಲರ ಮೇಲೆ ಇತ್ತೀಚಿನ ದಿನಗಳಲ್ಲಿ ಹಲ್ಲೆ ನಡೆಸಲಾಗುತ್ತಿದೆ. ಇಂತಹ ಘಟನೆಗಳಿಂದ ವಕೀಲರು ನಿರ್ಭೀತಿಯಿಂದ ಕಾನೂನು ಬದ್ಧವಾಗಿ ಕರ್ತವ್ಯ ಮಾಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಹಲ್ಲೆ ಮಾಡಿದ ವ್ಯಕ್ತಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು. ಇಂತಹ ಘಟನೆಗಳು ನಡೆಯದಂತೆ ವಕೀಲರ ಸಂರಕ್ಷಣಾ ಕಾಯ್ದೆಯನ್ನು ರಾಜ್ಯ ಸರ್ಕಾರ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಸಂಘದ ಉಪಾಧ್ಯಕ್ಷ ಟಿ.ಎಸ್ ಶಂಕರ್, ಕಾರ್ಯದರ್ಶಿ ಆರ್.ಬಿ ಸುರೇಶ್, ಖಜಾಂಚಿ ಬಿ.ಎಸ್ ಶಿವರಾಜು, ವಕೀಲರಾದ ಕೆ.ಜಿ. ನಾಗರಾಜ್, ಮಂಜೇಗೌಡ, ಕೀರ್ತಿ ಕುಮಾರ್, ದರ್ಶನ್, ಪ್ರೀತಂ, ಪುಟ್ಟಸ್ವಾಮಿ ಇತರರು ಇದ್ದರು.