ವಕೀಲರ ಬೌಲಿಂಗ್‌ಗೆ ಬ್ಯಾಟ್ ಬೀಸಿದ ನ್ಯಾಯಾಧೀಶರು!

12-pnp 1
Published on

ಪಾಂಡವಪುರ: ತಾಲೂಕಿನ ದೇವೇಗೌಡನಕೊಪ್ಪಲು ಸಮೀಪದ ಜ್ಞಾನಬಂಧು ಶಿಕ್ಷಣ ಸಂಸ್ಥೆಯ ಮೈದಾನದಲ್ಲಿ ತಾಲೂಕು ವಕೀಲರ ಸಂಘದಿಂದ ಭಾನುವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪಾಂಡವ ವಕೀಲರ ಕಪ್-2023 ಕ್ರಿಕೆಟ್ ಪಂದ್ಯಾವಳಿಯಲ್ಲಿ ಜೆಎಂಫ್‌ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶರು ಮೈದಾನಕ್ಕಿಳಿದು ಸಾಮಾನ್ಯರಂತೆ ಕ್ರಿಕೆಟ್ ಆಡಿದರು.
ನ್ಯಾಯಾಧೀಶರು ಮತ್ತು ನ್ಯಾಯಾಲಯದ ಸಿಬ್ಬಂದಿ ಪ್ರತ್ಯೇಕ ತಂಡ ರಚಿಸಿಕೊಂಡು ವಕೀಲರ ತಂಡದೊಂದಿಗೆ ಸೆಣಸಾಟ ನಡೆಸಿದರು. ಮಂಡ್ಯ, ಮದ್ದೂರು, ಶ್ರೀರಂಗಪಟ್ಟಣ, ಮಳವಳ್ಳಿ, ನಾಗಮಂಗಲ ಮತ್ತು ಕೆ.ಆರ್.ಪೇಟೆಯ ವಕೀಲರ ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು.
ಹಿರಿಯ ಸಿವಿಲ್ ನ್ಯಾಯಾಧೀಶ ಎಸ್.ಮಹೇಶ್ ಹಾಗೂ ಅಪರ ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಮಂಜುನಾಥ್ ಅವರು ಸಹೊದ್ಯೋಗಿ ನ್ಯಾಯಾಧೀಶ ಕಿಶೋರ್ ಕುಮಾರ್ ಅವರ ಬೌಲಿಂಗ್‌ನಲ್ಲಿ ಲೀಲಾಜಾಲವಾಗಿ ಬ್ಯಾಟ್ ಬೀಸಿ ಬಾಲನ್ನು ಬೌಂಡರಿಗೆ ಅಟ್ಟುವ ಮೂಲಕ ಪಂದ್ಯಾವಳಿ ಉದ್ಘಾಟಿಸಿದರು.
ನ್ಯಾ.ಎಸ್.ಮಹೇಶ್ ಮಾತನಾಡಿ, ಕ್ರಿಕೆಟ್ ಭಾರತ ಮಣ್ಣಿನಲ್ಲಿ ಹುಟ್ಟಿಲ್ಲದ ಕ್ರೀಡೆಯಾದರೂ ದೇಶದ ಎಲ್ಲ ಜನರ ಮನಸ್ಸನ್ನು ಗೆದ್ದಿರುವ ಆಟವಾಗಿದೆ. ಕ್ರಿಕೆಟ್ ದೇಶ -ದೇಶಗಳು, ರಾಜ್ಯ ಹಾಗೂ ಮನಸ್ಸುಗಳನ್ನು ಬೆಸೆಯುವ ಮತ್ತು ಅತಿ ಹೆಚ್ಚು ಜನರಿಂದ ಪ್ರೀತಿಸಲ್ಪಡುವ ಕ್ರೀಡೆಯಾಗಿದೆ. ಹೀಗಾಗಿ ಕ್ರಿಕೆಟ್ ಜಂಟಲ್‌ಮನ್ ಆಟ ಎಂದು ಕರೆಯುತ್ತೇವೆ ಎಂದು ಹೇಳಿದರು.
ಅಪರ ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಮಂಜುನಾಥ್ ಮಾತನಾಡಿ, ಬಿಡುವಿಲ್ಲದ ಕೆಲಸದಲ್ಲಿ ತೊಡಗಿಕೊಳ್ಳುವ ನ್ಯಾಯಾಧೀಶರು ಮತ್ತು ವಕೀಲರು ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ಒತ್ತಡ ಕಡಿಮೆ ಮಾಡಿಕೊಳ್ಳಬಹುದು. ಜತೆಗೆ ವಕೀಲರ ನಡುವೆ ಒಡನಾಟ ಬೆಳೆಯುತ್ತದೆ ಎಂದು ಹೇಳಿದರು.
ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶ ಕಿಶೋರ್‌ಕುಮಾರ್ ಮಾತನಾಡಿದರು. ಸಹಾಯಕ ಸರ್ಕಾರಿ ಅಭಿಯೋಜಕ ಎಂ.ಮಹೇಶ್, ರಾಜ್ಯ ಉಚ್ಚ ನ್ಯಾಯಾಲಯದ ವಕೀಲ ಅನಿಲ್‌ಕುಮಾರ್, ತಾಲೂಕು ವಕೀಲರ ಸಂಘದ ಅಧ್ಯಕ್ಷ ಕೆ.ಕಾಳೇಗೌಡ, ಉಪಾಧ್ಯಕ್ಷ ಎಲ್.ಸಿ.ಪ್ರಕಾಶ್, ಕಾರ್ಯದರ್ಶಿ ಕೆ.ಎನ್.ನಾಗರಾಜು, ಸಹಕಾರ್ಯದರ್ಶಿ ಕೆ.ವಿ.ಅರುಣ್‌ಕುಮಾರ್, ಖಜಾಂಚಿ ಎಲ್.ಸಿ.ಶಶಿಕುಮಾರ್, ವಕೀಲ ಕಣಿವೆ ಯೋಗೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net