ವಂದೇ ವಿಷ್ಣುಂ ಭವಭಯಹರಂ ಸರ್ವಲೋಕೈಕನಾಥಮ್

Vaikunta Ekadashi
Published on

ಚಿತ್ರದುರ್ಗ: ಜಿಲ್ಲಾದ್ಯಂತ ಇರುವ ಲಕ್ಷ್ಮೀ ವೆಂಕಟೇಶ್ವರ, ತಿಮ್ಮಪ್ಪ, ಉಗ್ರನರಸಿಂಹ, ವೆಂಕಟರಮಣ, ಗೋಪಾಲಸ್ವಾಮಿ, ಶ್ರೀರಾಮ, ಪಾಂಡುರಂಗ ಸೇರಿ ಶ್ರೀಮನ್ ನಾರಾಯಣ ಸ್ವಾಮಿಯ ಹಲವು ದೇಗುಲಗಳಲ್ಲಿ ವೈಕುಂಠ ಏಕಾದಶಿ ಮಹೋತ್ಸವ ಶುಕ್ರವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವೈಭವದಿಂದ ಜರುಗಿತು.

ಮುಂಜಾನೆಯಿಂದಲೇ ದೇಗುಲಗಳಲ್ಲಿ ವಿಷ್ಣು ಸಹಸ್ರನಾಮ, ಲಕ್ಷ್ಮೀ ಸಹಸ್ರನಾಮ, ರಾಮಸ್ತೋತ್ರ, ಸುಪ್ರಭಾತ, ಪಂಚಫಲ ಅಭಿಷೇಕ, ವಿವಿಧ ಬಗೆಯ ಪುಷ್ಪಗಳಿಂದ ವಿಶೇಷ ಅಲಂಕಾರ ಸೇವೆ ನೆರವೇರಿದವು. ಸ್ವಾಮಿಗೆ ಪ್ರಿಯವಾದ ತುಳಸಿ ಮಾಲೆ ಸಮರ್ಪಿಸುವ ಮೂಲಕ ಭಕ್ತಿಯ ಪರಕಾಷ್ಠೆಯಲ್ಲಿ ಭಕ್ತರು ಮಿಂದೆದ್ದರು. ಪಾರಾಯಣ, ಕೀರ್ತನೆ, ಭಜನೆಗಳು ಗಮನ ಸೆಳೆದವು. ವೈಭವೋಪೇತವಾಗಿ ನಡೆದ ಏಕಾದಶಿಗೆ ಕೋಟೆನಗರಿ ಕೂಡ ಸಾಕ್ಷಿಯಾಯಿತು.

ವಾಮನ ಅವತಾರ ವಿಶೇಷ: ವಾಸವಿ ಮಹಲ್‌ನ ಕನ್ಯಕಾಪರಮೇಶ್ವರಿ ದೇವಿಯ ದೇಗುಲದಲ್ಲಿ ಆರ್ಯವೈಶ್ಯ ಸಂಘದಿಂದ ಏಕಾದಶಿ ಅಂಗವಾಗಿ ಇದೇ ಪ್ರಥಮ ಬಾರಿ ನಿರ್ಮಿಸಿದ್ದ ವಾಮನ ಅವತಾರ ಮಾದರಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ನಗರದಲ್ಲೇ ಅತ್ಯಂತ ವಿಶಿಷ್ಟ, ಆಕರ್ಷಕವಾಗಿದ್ದ ಇದನ್ನು ಅನೇಕ ಭಕ್ತರು ದೇಗುಲಕ್ಕೆ ಭೇಟಿ ನೀಡಿ ಕಣ್ತುಂಬಿಕೊಂಡರು.

ಇದರ ಜತೆಯಲ್ಲಿಯೇ ಉತ್ತರ ದಿಕ್ಕಿನ ಮಹಾದ್ವಾರದ ಮೂಲಕ ದೇಗುಲ ಪ್ರವೇಶಿಸಿ ಶ್ರೀಲಕ್ಷ್ಮೀ, ಪದ್ಮಾವತಿ ಸಮೇತ ಶ್ರೀನಿವಾಸ ಸ್ವಾಮಿಯ ಪರಿವಾರ ಪ್ರತಿಷ್ಠಾಪಿಸಿದ್ದ ತೊಟ್ಟಿಲ ಕೆಳಗಿನಿಂದ ಸಾಗಿದರು. ನಂತರ ಸುವರ್ಣ ಹಾಗೂ ವಜ್ರಾಂಗಿ ಆಭರಣಗಳಿಂದ ಅಲಂಕರಿಸಿದ್ದ ಕನ್ಯಕಾಪರಮೇಶ್ವರಿ, ನಗರೇಶ್ವರ ಸ್ವಾಮಿ, ಜನಾರ್ಧನಸ್ವಾಮಿಯ ಮೂರ್ತಿಯ ದರ್ಶನ ಪಡೆದರು. ಇದೇ ವೇಳೆ ಸಂಕಲ್ಪಕ್ಕೂ ಪ್ರತ್ಯೇಕ ವ್ಯವಸ್ಥೆ ಮಾಡಿಕೊಡಲಾಗಿತ್ತು. ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿಕೊಂಡರು.

ತಿಪ್ಪಜ್ಜಿ ಸರ್ಕಲ್ ಬಳಿ ಇರುವ ವೆಂಕಟೇಶ್ವರ ಸ್ವಾಮಿ, ಮಾರುತಿ ನಗರದ ಬಲಮುರಿ ಗಣಪತಿ ಲಕ್ಷ್ಮೀ ವೆಂಕಟೇಶ್ವರ ದೇಗುಲದಲ್ಲೂ ಸ್ವಾಮಿಗೆ ವಿಶೇಷ ಪೂಜೆ, ಅಲಂಕಾರ ಸೇವೆ ನೆರವೇರಿದವು. ಸಪ್ತ ಮಹಾ ವೈಕುಂಠ ದ್ವಾರ ಮಾದರಿ ಹಲವರನ್ನು ಆಕರ್ಷಿಸಿತು.

ಮೆದೇಹಳ್ಳಿ ರಸ್ತೆಯ ಅಯ್ಯಪ್ಪಸ್ವಾಮಿ ಸನ್ನಿಧಾನದಲ್ಲಿ ವೈಕುಂಠ ಏಕಾದಶಿ ಅಂಗವಾಗಿ ದೇಗುಲದ ಪ್ರಧಾನ ಅರ್ಚಕ ಸತೀಶ್ ಸ್ವಾಮಿ, ಆನಂದಸ್ವಾಮಿ ನೇತೃತ್ವದಲ್ಲಿ ಬೆಳಗ್ಗೆ 6ರಿಂದ ಪ್ರಕಾರೋತ್ಸವ, ಉತ್ತರ ದಿಕ್ಕಿನ ಬಾಗಿಲು ಪೂಜೆ, ಸತ್ಯನಾರಾಯಣ ಸ್ವಾಮಿಗೆ ಅಲಂಕಾರ, ಅಭಿಷೇಕ ಸೇವೆ ನೆರವೇರಿದವು.

ಆನೆಬಾಗಿಲು ಸೇವಾ ಸಮಿತಿಯ ಶ್ರೀಲಕ್ಷ್ಮೀ ವೆಂಕಟೇಶ್ವರ ಸ್ವಾಮಿ, ತುರುವನೂರು ರಸ್ತೆಯ ಐತಿಹಾಸಿಕ ಪ್ರಸನ್ನ ವೆಂಕಟರಮಣ ಸ್ವಾಮಿ ದೇಗುಲಗಳಲ್ಲಿ ಸ್ವಾಮಿಯ ಪುಷ್ಪಾಲಂಕಾರ ಸೇವೆ ಕಣ್ಮನ ಸೆಳೆಯಿತು. ದೇಗುಲಗಳಲ್ಲಿ ಭಕ್ತರಿಗೆ ಮಹಾಮಂಗಳಾರತಿ, ತೀರ್ಥ, ಪ್ರಸಾದ ವಿತರಿಸಲಾಯಿತು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆ ಹಿನ್ನೆಲೆಯಲ್ಲಿ ಸರತಿ ಸಾಲಿನಲ್ಲಿ ಸುಗಮವಾಗಿ ಬಂದು ದರ್ಶನ ಪಡೆಯಲು ಹಲವೆಡೆ ಬ್ಯಾರಿಕೇಡ್ ವ್ಯವಸ್ಥೆ ಕಲ್ಪಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net