

ಹುಬ್ಬಳ್ಳಿ : ಬೆಂಗಳೂರು-ಧಾರವಾಡ ಮಧ್ಯದ ಮಾರ್ಗ ದ್ವಿಪಥಗೊಳಿಸುವ ಕಾಮಗಾರಿ ಫೆಬ್ರುವರಿಯಲ್ಲಿ ಪೂರ್ಣಗೊಳ್ಳಲಿದ್ದು, ಮಾರ್ಚ್ ವೇಳೆಗೆ ಈ ಮಾರ್ಗದ ಇಲೆಕ್ಟ್ರಿಫಿಕೇಶನ್ ಕೆಲಸ ಮುಗಿಯುತ್ತದೆ. ನಂತರ ಬೆಂಗಳೂರು - ಧಾರವಾಡ ಮಧ್ಯೆ ವಂದೇ ಭಾರತ್ ರೈಲು ಸಂಚಾರ ಪ್ರಾರಂಭಗೊಳ್ಳುವ ಸಾಧ್ಯತೆ ಇದ್ದು, ಈ ರೈಲು ಸಂಚಾರ ಬೆಳಗಾವಿವರೆಗೂ ವಿಸ್ತರಣೆಗೊಳ್ಳಬಹುದು ಎಂದು ನೈಋತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಸಂಜೀವ ಕಿಶೋರ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧಾರವಾಡ - ಬೆಳಗಾವಿ ಮಧ್ಯೆ ಹೊಸ ರೈಲು ಮಾರ್ಗ ನಿರ್ವಣಕ್ಕಾಗಿ ರಾಜ್ಯ ಸರ್ಕಾರದಿಂದ ಭೂಮಿ ವಶಪಡಿಸಿಕೊಳ್ಳುವ ಕಾರ್ಯ ಪ್ರಗತಿಯಲ್ಲಿದೆ. ಈ ಕುರಿತು ರಾಜ್ಯ ಸರ್ಕಾರದೊಂದಿಗೆ ಪ್ರತಿ ತಿಂಗಳು ಸಭೆ ನಡೆಸಲಾಗುತ್ತಿದೆ. ಭೂಮಿ ಹಸ್ತಾಂತರದ ನಂತರ ಒಂದು ತಿಂಗಳಲ್ಲಿ ಟೆಂಡರ್ ಪ್ರಕ್ರಿಯೆ ಪ್ರಾರಂಭಿಸಲಾಗುತ್ತದೆ ಎಂದು ತಿಳಿಸಿದರು.
ಬರುವ ರೈಲ್ವೆ ಬಜೆಟ್ನಲ್ಲಿ ನೈಋತ್ಯ ರೈಲ್ವೆಗಾಗಿ ಹಲವಾರು ಬೇಡಿಕೆಗಳ ಪ್ರಸ್ತಾವನೆಗಳನ್ನು ರೈಲ್ವೆ ಮಂಡಳಿಗೆ ಸಲ್ಲಿಸಲಾಗಿದೆ. ಇದರಲ್ಲಿ ರೈಲ್ವೆ ಮೇಲ್ಸೇತುವೆ, ಆಟೋಮೆಟಿಕ್ ಸಿಗ್ನಲ್ ಯುನಿಟ್, ಬೆಂಗಳೂರು - ಹುಬ್ಬಳ್ಳಿ ಮಧ್ಯದ ರೈಲುಗಳ ವೇಗವನ್ನು ಪ್ರತಿ ಗಂಟೆಗೆ 220 ಕಿಮೀ ಗೆ ಹೆಚ್ಚಿಸುವುದು ಸೇರಿದಂತೆ ವಿವಿಧ ಪ್ರಸ್ತಾವನೆಗಳು ಇವೆ ಎಂದರು.
ಬೆಳಗಾವಿ ರೈಲು ನಿಲ್ದಾನವನ್ನು 200 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಹೊಸಪೇಟೆ ನಿಲ್ದಾಣ 12 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಗೊಂಡಿದೆ. ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣವನ್ನು 400 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಗೊಳಿಸುತ್ತಿದ್ದು, ಇನ್ನೂ ಎರಡು ತಿಂಗಳಲ್ಲಿ ನಾಲ್ಕು ಸಬರ್ಬನ್ ಪ್ಲಾಟ್ಫಾಮರ್್ಗಳು ಉದ್ಘಾಟನೆಗೊಳ್ಳಲಿವೆ ಎಂದು ತಿಳಿಸಿದರು.
2023ರಲ್ಲಿ ಗಿಣಿಗೇರಾ-ರಾಯಚೂರು, ಬಾಗಲಕೋಟ - ಕುಡಚಿ, ತುಮಕೂರು- ದಾವಣಗೆರೆ, ಖಚ್ಚಿದೋಣಿ- ಲೋಕಾಪುರ ಮಧ್ಯೆ ಹೊಸ ರೈಲು ಮಾರ್ಗಗಳನ್ನು ನಿರ್ವಿುಸಲಾಗುವುದು. ಲೋಂಡಾ -ಮಿರಜ್ ಮಾರ್ಗ ದ್ವಿಪಥಗೊಳಿಸುವ ಕಾಮಗಾರಿ ಇದೇ ಮಾರ್ಚ್ನಲ್ಲಿ ಹಾಗೂ ಹುಬ್ಬಳ್ಳಿ - ಚಿಕ್ಕಜಾಜೂರು ಮಧ್ಯದ ಮಾರ್ಗ ದ್ವಿಪಥಗೊಳಿಸುವ ಕಾಮಗಾರಿ ಇದೇ ಫೆಬ್ರುವರಿಯಲ್ಲಿ ಪೂರ್ಣಗೊಳ್ಳಿದೆ. ಹುಬ್ಬಳ್ಳಿ - ಬೆಂಗಳೂರು ಮಧ್ಯದ ಮಾರ್ಗ ದ್ವಿಪಥಗೊಳಿಸುವ ಕಾಮಗಾರಿ ಇನ್ನೂ 154 ಕಿಮೀ ಬಾಕಿ ಇದೆ ಎಂದು ವಿವರಿಸಿದರು.
2022ರಲ್ಲಿ ನೈಋತ್ಯ ರೈಲ್ವೆಗೆ ಬಂದಿರುವ ಆದಾಯದ ಬಗ್ಗೆ ವಿವರ ನೀಡಿದ ಸಂಜೀವ ಕಿಶೋರ, ಪ್ರಯಾಣಿಕರ ರೈಲುಗಳಿಂದ 2,354 ಕೋಟಿ ರೂ. ಆದಾಯ ಬಂದಿದೆ. ನೈಋತ್ಯ ರೈಲ್ವೆ ಒಟ್ಟು 7,509 ಕೋಟಿ ಆದಾಯ ಗಳಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 34ರಷ್ಟು ಆದಾಯ ಹೆಚ್ಚಳವಾಗಿದೆ. ಇದುವರೆಗಿನ ಅತಿ ಹೆಚ್ಚು ಆದಾಯ ಇದಾಗಿದೆ. ಶೇ. 94ರಷ್ಟು ಸಮಯ ಪಾಲನೆ ಸಾಧಿಸಿದ್ದು, ದೇಶದ ಇತರ ವಲಯಗಳಿಗೆ ಹೋಲಿಸದರೆ ನೈಋತ್ಯ ರೈಲ್ವೆ 3ನೇ ಸ್ಥಾನದಲ್ಲಿದೆ ಎಂದು ತಿಳಿಸಿದರು.
22 ಕಿಮೀ ಹೊಸ ಮಾರ್ಗ ನಿರ್ವಿುಸಲಾಗಿದೆ. 210 ಕಿಮೀ ಮಾರ್ಗ ದ್ವಿಪಥಗೊಳಿಸಲಾಗಿದೆ. 712 ಕಿಮೀ ಇಲೆಕ್ಟ್ರಿಫಿಕೇಶನ್ ಕಾಮಗಾರಿ ಪೂರ್ಣಗೊಂಡಿದೆ. 19 ರೈಲ್ವೆ ಮೇಲ್ಸೇತುವೆ ನಿರ್ವಿುಸಲಾಗಿದೆ. 252 ವಿಶೇಷ ರೈಲುಗಳು ಸಂಚರಿಸಿವೆ. ಹಾವೇರಿಯಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನ ಸೇರಿದಂತೆ ಹಬ್ಬ ಹಾಗೂ ವಿಶೇಷ ದಿನಗಳಂದು ವಿಶೇಷ ರೈಲುಗಳು ಸಂಚಾರ ನಡೆಸಿವೆ. ಹೆಚ್ಚುವರಿಯಾಗಿ 244 ಬೋಗಿಗಳನ್ನು ಕಾಯಂ ಆಗಿ ಹಾಗೂ 221 ಬೋಗಿಗಳನ್ನು ತಾತ್ಕಾಲಿಕವಾಗಿ ಅಳವಡಿಸಲಾಗಿದೆ. 91 ರೈಲುಗಳ ವೇಗ ಹೆಚ್ಚಿಸಲಾಗಿದೆ. ಪಾರ್ಸಲ್ಗಳ ಸಾಗಾಟದಿಂದಾಗಿ 106.41 ಕೋಟಿ ರೂ. ಆದಾಯವಾಗಿದ್ದು, ಕಳೆದ ವರ್ಷಕ್ಕಿಂತ ಶೇ. 17.9ರಷ್ಟು ಆದಾಯ ಹೆಚ್ಚಳವಾಗಿದೆ ಎಂದು ತಿಳಿಸಿದರು.
ಸಾರ್ವಜನಿಕ ಮುಖ್ಯ ಸಂಪರ್ಕ ಅಧಿಕಾರಿ ಅನೀಶ ಹೆಗಡೆ ಹಾಗೂ ಇತರ ಹಿರಿಯ ಅಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.