ವಂದಾರಗುಪ್ಪೆ ಬಾಲಮಂದಿರ ಎಷ್ಟು ಸುರಕ್ಷಿತ ?

IMG-20200620-WA0027
Published on

ರಾಮನಗರ : ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ವಂದಾರಗುಪ್ಪೆಯಲ್ಲಿರುವ ಬಾಲಕಿಯರ ಬಾಲ ಮಂದಿರದಲ್ಲಿರುವ ಮಕ್ಕಳ ರಕ್ಷಣೆ ಈಗ ಅಧಿಕಾರಿಗಳ ಪಾಲಿಗೆ ತಲೆನೋವಾಗಿದ್ದು, ಇಲ್ಲಿರುವ ಮಕ್ಕಳು ಆಗಾಗ್ಗೆ ಕಾಣೆಯಾಗುವುದು ಆತಂಕ ಹೆಚ್ಚಿಸಿದೆ.

ಬಾಲ್ಯ ವಿವಾಹ ಸೇರಿ ವಿವಿಧ ಪ್ರಕರಣಗಳಲ್ಲಿ ವಶಕ್ಕೆ ಪಡೆದ ಬಾಲಕಿಯರನ್ನು ಬಾಲಮಂದಿರದಲ್ಲಿ ಇರಿಸಲಾಗುತ್ತದೆ. ಆದರೆ, ಕೆಲವೊಮ್ಮೆ ಇಲ್ಲಿರುವ ಸಿಬ್ಬಂದಿ ಕಣ್ತಪ್ಪಿಸಿ ಪರಾರಿಯಾಗುತ್ತಿದ್ದು, ಇಲ್ಲಿನ ರಕ್ಷಣಾ ವ್ಯವಸ್ಥೆ ಬಗ್ಗೆ ಪ್ರಶ್ನೆ ಮೂಡುವಂತೆ ಮಾಡಿದೆ. ಅದೇ ರೀತಿ ಶುಕ್ರವಾರ ಸಹ ಇಬ್ಬರು ಹೆಣ್ಣು ಮಕ್ಕಳು ಅಲ್ಲಿಂದ ಪರಾರಿಯಾಗಿದ್ದು, ಇವರಿಗಾಗಿ ಹುಡುಕಾಟ ನಡೆದಿದೆ.

ಸ್ವಂತ ಕಟ್ಟಡವಿಲ್ಲ: ಜಿಲ್ಲಾ ಕೇಂದ್ರವಾಗಿ 17 ವರ್ಷ ಕಳೆದರೂ ಬಾಲಮಂದಿರಕ್ಕೆ ಸ್ವಂತ ಕಟ್ಟಡವಿಲ್ಲ. 8 ವರ್ಷಗಳಿಂದಲೂ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಕರೊನಾ ಆರಂಭಕ್ಕೂ ಮುನ್ನಾ 57 ಬಾಲಕಿಯರು ಇದ್ದರು. ಕರೊನಾ ಸಂದರ್ಭದಲ್ಲಿ 20 ಮಕ್ಕಳನ್ನು ಪಾಲಕರ ವಶಕ್ಕೆ ನೀಡಲಾಗಿದ್ದು, ಉಳಿದ 37 ಮಂದಿ ಇಲ್ಲಿಯೇ ಉಳಿದಿದ್ದರು. ಆದರೆ ಇದೀಗ ಇವರಲ್ಲಿ ಇಬ್ಬರು ಪರಾರಿಯಾಗಿದ್ದಾರೆ.

ಕಾಯಂ ಸಿಬ್ಬಂದಿಯೂ ಇಲ್ಲ: ಬಾಲ ಮಂದಿರಕ್ಕೆ ಕಾಯಂ ಸಿಬ್ಬಂದಿಯೂ ಸಹ ಇಲ್ಲ. ಮಕ್ಕಳ ರಕ್ಷಣಾ ಘಟಕದ ಮೇಲುಸ್ತುವಾರಿಯಲ್ಲಿ ನಡೆಯುತ್ತಿರುವ ಮಂದಿರದ ಜವಾಬ್ದಾರಿ ನಿವೃತ್ತ ಸಿಡಿಪಿಒ ಅವರ ಹೆಗಲ ಮೇಲಿದೆ. ವಾರ್ಡನ್, ಮೂವರು ಗೃಹರಕ್ಷಕ ಸಿಬ್ಬಂದಿ, ಒಬ್ಬ ಆಪ್ತ ಸಮಾಲೋಚಕರು ಹಾಗೂ ಒಬ್ಬ ಡಿ ಗ್ರೂಪ್ ಸಿಬ್ಬಂದಿಯೂ ಸಹ ಹೊರಗುತ್ತಿಗೆ ಆಧಾರದ ಮೇಲೆಯೇ ಕಾರ್ಯನಿರ್ವಹಿಸುತ್ತಿರುವರು. ಬಾಲಕಿಯರಿಬ್ಬರೂ ಪರಾರಿಯಾದ ಸಂದರ್ಭದಲ್ಲಿ ಯಾರು ರಕ್ಷಣಾ ಕರ್ತವ್ಯದಲ್ಲಿದ್ದರು ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ.

ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕಿದೆ: ಪದೇಪದೆ ಮಕ್ಕಳು ಪರಾರಿ ಆಗುತ್ತಿರುವುದಕ್ಕೆ ಸೂಕ್ತ ರಕ್ಷಣೆ ಇಲ್ಲದಿರುವ ಕಾರಣ ಮೇಲ್ನೋಟಕ್ಕೆ ಸಾಬೀತಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಟ್ಟಡವನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕು ಎನ್ನುವ ಕೂಗು ವ್ಯಾಪಕವಾಗಿದೆ. ಇದರಿಂದ ರಕ್ಷಣೆಗಾಗಿಯೇ ಬರುವ ಅಪ್ರಾಪ್ತರ ರಕ್ಷಣೆ ಸಾಧ್ಯ ಎನ್ನುವ ಮಾತುಗಳು ಕೇಳಿ ಬಂದಿವೆ.

ಈ ಹಿನ್ನೆಲೆಯಲ್ಲಿ ಬಾಲಮಂದಿರವನ್ನು ರಾಮನಗರದ ಐಜೂರಿನ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಸಿದ್ಧತೆ ಸಹ ನಡೆಸಲಾಗಿದೆ ಎಂದು ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಐಜೂರಿನ ಕಲ್ಯಾಣ ಮಂಟಪವೊಂದಕ್ಕೆ ಬಾಲಮಂದಿರ ಸ್ಥಳಾಂತರ ಮಾಡಲಾಗುತ್ತದೆ ಎಂದು ಹೇಳಲಾಗಿದ್ದು, ಇನ್ನೊಂದು ವಾರದಲ್ಲಿ ಸ್ಥಳಾಂತರ ಕಾರ್ಯ ನಡೆಯಲಿದೆ. ಈ ಕಟ್ಟಡದಲ್ಲಿ ಅಗತ್ಯ ಸೌಲಭ್ಯಗಳ ಜತೆಗೆ ಸೂಕ್ತ ರಕ್ಷಣೆಯೂ ಇದೆ ಎನ್ನುವುದು ಅಧಿಕಾರಿಗಳ ವಾದ.

ಸ್ವಂತ ಕಟ್ಟಡಬೇಕಿದೆ: ಖಾಸಗಿ ಕಟ್ಟಡವನ್ನು ಬಾಡಿಗೆ ಪಡೆಯುವುದು ಸುಲಭದ ಮಾತಲ್ಲ. ಬಾಡಿಗೆ ಹೆಚ್ಚಿದ್ದು, ದೊಡ್ಡಮೊತ್ತ ಪಾವತಿಸಿ ಕಟ್ಟಡವನ್ನು ಬಾಡಿಗೆ ಪಡೆಯುವುದಕ್ಕಿಂತ ಹೊಸ ಕಟ್ಟಡ ಹೊಂದುವುದು ಸೂಕ್ತ. ಸರ್ಕಾರ ರಾಮನಗರದ ಚಾಮುಂಡಿ ಪುರ ಬಡಾವಣೆಯಲ್ಲಿ ನಿವೇಶನ ನೀಡಿ ವರ್ಷಗಳೇ ಕಳೆದಿದ್ದರೂ ಕಟ್ಟಡ ನಿರ್ಮಾಣ ಕಾರ್ಯ ಆರಂಭಗೊಂಡಿಲ್ಲ. ಈ ಮೊದಲು 1.25 ಕೋಟಿ ರೂ.ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಮಾಡಲು ಯೋಜನೆ ಸಲ್ಲಿಸಲಾಗಿತ್ತು. ಆದರೆ ಪ್ರಸ್ತುತ ಇದರ ವೆಚ್ಚ 1.75 ಕೋಟಿ ರೂ.ಗೆ ಏರಿಕೆ ಆಗಿದ್ದು, ಹೊಸ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ ಹಣ ಇನ್ನೂ ಬಿಡುಗಡೆ ಆಗಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net