ವಂಚಿತರಿಗೆ ಉನ್ನತ ಶಿಕ್ಷಣ ಪೂರೈಸಲು ಅವಕಾಶ

4
Published on

ಮೈಸೂರು: ವಂಚಿತರು ಉನ್ನತ ಶಿಕ್ಷಣ ಪೂರೈಸಲು ದೂರ ಶಿಕ್ಷಣ ಅನೇಕ ಅವಕಾಶ ಕಲ್ಪಿಸಿಕೊಟ್ಟಿದೆ ಎಂದು ರಾಜ್ಯಪಾಲ ಥಾವರಚಂದ್ ಗೆಹಲೋತ್ ಹೇಳಿದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಭಾನುವಾರ ಮಾತನಾಡಿದ ಅವರು, ಸಾಮಾಜಿಕ, ಆರ್ಥಿಕವಾಗಿ ವಂಚಿತರಾದವರು ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣ ಪಡೆಯಲು ಕಷ್ಟಕರವಾಗಿದೆ. ಅದಕ್ಕೆ ಅನೇಕ ಅಡೆತಡೆಗಳು ಇವೆ. ಆದರೆ, ಇದನ್ನೆಲ್ಲ ನಿವಾರಣೆ ಮಾಡುವ ದೂರ ಶಿಕ್ಷಣ ಪದ್ಧತಿ ಇಂಥವರಿಗೆ ಉನ್ನತ ಶಿಕ್ಷಣ ಕಲಿಯಲು ವೇದಿಕೆ ಒದಗಿಸುತ್ತಿದೆ. ಇಂತಹ ಅನೇಕ ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ಮುಕ್ತ ವಿಶ್ವವಿದ್ಯಾಲಯಗಳು ಕಾರಣವಾಗಿವೆ ಎಂದು ತಿಳಿಸಿದರು.


ದೂರ ಶಿಕ್ಷಣ ಪ್ರಸ್ತುತ ಭಾರತೀಯ ಶೈಕ್ಷಣಿಕ ವ್ಯವಸ್ಥೆಯ ಮೇಲೆ ಉತ್ತಮ ಪರಿಣಾಮ ಬೀರಿದೆ. ಇಂದು ಮಹಿಳೆಯರು ಹೆಚ್ಚು ಪದಕಗಳನ್ನು ಪಡೆದಿರುವುದು ಮಹಿಳಾ ಸಬಲೀಕರಣದ ಪ್ರತೀಕವಾಗಿದೆ ಎಂದರು.

ಸ್ವಾಮಿ ವಿವೇಕಾನಂದರು ಯುವಕರಿಗೆ ‘ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ’ ಎಂದು ನೀಡಿದ ಕರೆಯಂತೆ ಎಲ್ಲರೂ ದೇಶದ ಸರ್ವತೋಮುಖ ಪ್ರಗತಿಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.


ಗುಣಮಟ್ಟದ ಶಿಕ್ಷಣ, ಮಾರ್ಗದರ್ಶನ, ಕೌಶಲ, ಗುಣಾತ್ಮಕ ಚಿಂತನೆ ವ್ಯಕ್ತಿಯ ಸವಾರ್ಂಗೀಣ ಅಭಿವೃದ್ಧಿಗೆ ಕಾರಣವಾಗುತ್ತದೆ. ರಾಷ್ಟ್ರದ ಪ್ರಗತಿಯಲ್ಲಿ ಪ್ರತಿಯೊಬ್ಬರ ಕೊಡುಗೆ ಅಗತ್ಯ. ಭಾರತ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಸಾರ್ವಭೌಮ ರಾಷ್ಟ್ರ. ವಿಶ್ವಕಲ್ಯಾಣ ಮತ್ತು ವಿಶ್ವಶಾಂತಿಯನ್ನು ಭಾರತ ದೇಶ ಸಾರುತ್ತಿದೆ ಎಂದರು.


ಪ್ರಸ್ತುತ ಇಡೀ ವಿಶ್ವವೇ ಪರಿಸರದ ಸಮಸ್ಯೆಗಳನ್ನು ಎದುರಿಸುತ್ತಿದೆ. ಪರಿಸರವನ್ನು ಸಂರಕ್ಷಣೆ ಮಾಡುವ ಜವಾಬ್ದಾರಿ ಎಲ್ಲರ ಮೇಲಿದೆ. ಪ್ಲಾಸ್ಟಿಕ್‌ಮುಕ್ತ ವಲಯಗಳ ನಿರ್ಮಾಣ, ಮಳೆ ನೀರು ಸಂಗ್ರಹ ಪದ್ಧತಿ ಅಳವಡಿಸಿಕೊಳ್ಳಬೇಕಿದೆ. ಈ ಮೂಲಕ ಪರಿಸರ ಸಂರಕ್ಷಣೆ ಆದ್ಯ ಕರ್ತವ್ಯವಾಗಿದೆ. ಅದಕ್ಕಾಗಿ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಈ ಕುರಿತು ಅಭಿಯಾನ ಕೈಗೊಳ್ಳಲು ಸೂಚಿಸಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net