ವಂಚನೆ ಪ್ರಮಾಣ ಹೆಚ್ಚಳ

14
Published on

ಮೈಸೂರು: ಗ್ರಾಹಕರು ಟಿವಿ ಜಾಹೀರಾತುಗಳಿಗೆ ಮಾರುಹೋಗಿ ವಂಚನೆಗೊಳಗಾಗುವ ಪ್ರಮಾಣ ಹೆಚ್ಚಾಗುತ್ತಿದೆ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಬಿ.ನಾರಾಯಣಪ್ಪ ಕಳವಳ ವ್ಯಕ್ತಪಡಿಸಿದರು.

ವಿದ್ಯಾವರ್ಧಕ ಕಾನೂನು ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಗ್ರಾಹಕರ ಹಕ್ಕುಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಮೋಡಿ ಮಾಡುವ ಟಿವಿ ಜಾಹೀರಾತುಗಳ ಸೆಳೆತಕ್ಕೆ ಗ್ರಾಹಕರು ಒಳಗಾಗಿ ತಾವು ಕೊಳ್ಳುವ ಸರಕು, ಸಾಮಗ್ರಿಗಳ ಆಯ್ಕೆಯನ್ನು ತಮ್ಮ ವಿವೇಕ, ವಿವೇಚನೆಗಳನ್ನು ಮೀರಿ ವಂಚನೆಗೆ ಒಳಗಾಗುತ್ತಿದ್ದು, ಈ ಕುರಿತು ನಿತ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ಬರುತ್ತಿವೆ ಎಂದರು.

ಗ್ರಾಹಕರು ಸ್ವಯಂ ಜಾಗೃತಿಯೊಂದಿಗೆ ತಾವು ಕೊಳ್ಳುವ ಪ್ರತಿಯೊಂದು ವಸ್ತುವಿನ ಗುಣಮಟ್ಟವನ್ನು ಪರಿಶೀಲಿಸಿ ಆಯ್ಕೆ ಮಾಡಿಕೊಳ್ಳಬೇಕು ಎಂದರು.

ವಂಚನೆಗೆ ಒಳಗಾದವರು ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ತಮ್ಮ ಅಹವಾಲನ್ನು ಸಲ್ಲಿಸಿ 50 ಲಕ್ಷ ರೂ.ವರೆಗೆ ಪರಿಹಾರ ಪಡೆಯಬಹುದು. ಗ್ರಾಹಕರು ತಾವು ಕೊಂಡ ವಸ್ತುಗಳಿಂದ ವಂಚನೆ, ಮೋಸಗಳಿಗೆ ಒಳಗಾದ ಎರಡು ವರ್ಷಗಳ ಕಾಲಮಿತಿಯಲ್ಲಿ ಆಯೋಗಕ್ಕೆ ದೂರು ಸಲ್ಲಿಸಬಹುದಾಗಿದೆ ಎಂದರು.

ಮೈಸೂರು ಗ್ರಾಹಕ ಪರಿಷತ್ತಿನ ಸ್ಥಾಪಕ ಡಾ.ಭಾಮಿ ವಿ ಶೆಣೈ ಮಾತನಾಡಿ, ಈಗ ಜಾರಿಯಲ್ಲಿರುವ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಗಳು ಸಿವಿಲ್ ನ್ಯಾಯಾಲಯಗಳ ಸ್ವರೂಪದಲ್ಲಿ ಕಾರ್ಯನಿರ್ವಹಿಸುತ್ತಿವೆ. ಹೀಗಾಗಿ ಇಲ್ಲಿನ ನಿಧಾನಗತಿಯ ಕಾರ್ಯನಿರ್ವಹಣೆಯಿಂದಾಗಿ ಗ್ರಾಹಕರಿಗೆ ಪರಿಹಾರ ಸಿಗುವುದರಲ್ಲಿ ಸಾಕಷ್ಟು ಕಾಲವ್ಯಯವಾಗುತ್ತಿದೆ. ಈ ನಿಟ್ಟಿನಲ್ಲಿ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಗಳು ತ್ವರಿತಗತಿಯ ನ್ಯಾಯಾಲಯದ ರೀತಿಯಲ್ಲಿ ವ್ಯಾಜ್ಯಗಳ ತುರ್ತು ವಿಚಾರಣೆ ಕೈಗೆತ್ತಿಕೊಂಡು ಪ್ರಕರಣ ಶೀಘ್ರವಾಗಿ ಇತ್ಯರ್ಥಪಡಿಸಬೇಕು ಎಂದು ಹೇಳಿದರು.

ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪಗೌಡ, ಕಾರ್ಯದರ್ಶಿ ಪಿ.ವಿಶ್ವನಾಥ್, ಖಜಾಂಚಿ ಶ್ರೀಶೈಲ ರಾಮಣ್ಣವರ್, ಪ್ರಾಂಶುಪಾಲ ಡಾ.ಪಿ.ದೀಪು, ಕಾನೂನು ಅಧ್ಯಯನದ ನಿರ್ದೇಶಕ ಪ್ರೊ.ಕೆ.ಬಿ.ವಾಸುದೇವ, ಕಾರ್ಯಕ್ರಮದ ಸಂಯೋಜಕ ಸಹಾಯಕ ಪ್ರಾಧ್ಯಾಪಕಿ ಡಾ.ಶ್ರೀದೇವಿ ಕೃಷ್ಣ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net