ವಂಚಕರೂ ಕೇಳುತ್ತಾರೆ ಲಂಚ..!

4Ravig5_Web
Published on

ಬೆಳಗಾವಿ: ಬ್ಯಾಂಕ್ ಖಾತೆ, ಎಟಿಎಂ, ಆಧಾರ್ ಇಲ್ಲವೇ ಪಾನ್‌ಕಾರ್ಡ್ ಹಾಗೂ ವಿಮೆ ಪಾಲಿಸಿಗಳ ಹೆಸರಲ್ಲಿ ಒಟಿಪಿ ಕೇಳುತ್ತಿದ್ದ ವಂಚಕರು, ಇದೀಗ ಅಧಿಕಾರಿಗಳ ಹೆಸರಲ್ಲೇ ಲಕ್ಷಾಂತರ ರೂ. ಲಂಚದ ಬೇಡಿಕೆ ಇಟ್ಟು ಸದ್ದಿಲ್ಲದೆ ಹಣ ದೋಚುತ್ತಿದ್ದಾರೆ.

ಲಾಕ್‌ಡೌನ್‌ನಿಂದಾಗಿ ಮನೆಯಲ್ಲಿ ಬಂಧಿಯಾಗಿರುವ ಜನತೆ ಆನ್‌ಲೈನ್‌ನಲ್ಲೇ ಹೆಚ್ಚಿನ ಕಾಲ ಕಳೆಯುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಖದೀಮರು, ಹಣವಂತರ ಜತೆಗೆ ಸಲುಗೆ ಬೆಳೆಸಿ ಚಾಟಿಂಗ್ ಮಾಡುತ್ತಾರೆ. ನಂತರ ಅವರಿಗೆ ಗ್‌ಟಿ ಕಳುಹಿಸುತ್ತಾರೆ. ಬಳಿಕ ಅದರಲ್ಲಿ ವಿದೇಶಿ ಹಣ ಇದೆ ಎಂದು ಕಸ್ಟಮ್ಸ್ ಅಧಿಕಾರಿಗಳಾಗಿ ಮತ್ತೊಂದು ಸಂಖ್ಯೆಯಿಂದ ತಾವೇ ಕರೆ ಮಾಡಿ, ‘ಕಾನೂನು ಬಾಹಿರವಾಗಿ ಹಣ ಪಡೆಯುತ್ತಿರುವುದಕ್ಕೆ 10-15 ವರ್ಷ ಶಿಕ್ಷೆ ಇದೆ. ನಮಗೆ ಲಂಚ ನೀಡಿದರೆ ನಿಮಗಾಗುವ ಶಿಕ್ಷೆ ತಪ್ಪಿಸುತ್ತೇವೆ’ ಎಂದು ಬೇಡಿಕೆ ಇಟ್ಟು ಸುಲಭವಾಗಿ ಹಣ ಪೀಕುತ್ತಿದ್ದಾರೆ.

ತಾವು ಗ್‌ಟಿ ಪಡೆದದ್ದೇ ಮಹಾಪರಾಧವೇನೋ ಎಂದು ಆತಂಕಕ್ಕೊಳಗಾಗುವ ಮೋಸ ಹೋದವರು, ಲಂಚ ನೀಡುತ್ತಿದ್ದಾರೆ. ಅಲ್ಲದೆ, ಅವರಿಗೆ ಹಣ ನೀಡಿದ್ದೇಕೆ ಎಂಬುದನ್ನು ಬಹಿರಂಗ ಪಡಿಸಲಾಗದೆ ಸುಮ್ಮನಾಗುತ್ತಿದ್ದು, ಲಕ್ಷಾಂತರ ರೂ. ಕಳೆದುಕೊಂಡು ಚಡಪಡಿಸುತ್ತಿದ್ದಾರೆ.

ಪ್ರಕರಣ ದಾಖಲು: ‘ನಿಮಗೆ ಬಂದಿರುವ ಗಿಫ್ಟ್‌ನಲ್ಲಿ 20 ಸಾವಿರ ಫೌಂಡ್ ನಗದು ಇದೆ. ಹೀಗೆ ಹಣ ಪಡೆಯುವುದು ಕಾನೂನು ಬಾಹಿರ. ಅದನ್ನು ಮುಚ್ಚಿಹಾಕಲು ನಮಗೆ 5 ಲಕ್ಷ ಹಣ ನೀಡಬೇಕು’ ಎಂದ ವಂಚಕರಿಗೆ ಬೆಳಗಾವಿಯ ವ್ಯಾಪಾರಿ ಲಕ್ಷಾಂತರ ರೂ. ಜಮಾ ಮಾಡಿ ಮೋಸ ಹೋಗಿದ್ದಾರೆ. ಈ ಬಗ್ಗೆ ನಗರದ ಸಿಇಎನ್ ಪೊಲೀಸ್ ಠಾಣೆಯಲ್ಲಿ ವಿಜಯಕುಮಾರ ಎಂಬುವರು ದೂರು ನೀಡಿದ್ದು, ಫೇಸ್‌ಬುಕ್‌ನಲ್ಲಿ ಐಶಾ ಲಿಯೋ ಎಂಬ ಹೆಸರಿನಿಂದ ಪರಿಚಯಿಸಿಕೊಂಡವರು ಈ ಕೃತ್ಯ ಎಸಗಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.

ಪೊಲೀಸರಿಗೆ ಕೂಡಲೇ ಮಾಹಿತಿ ನೀಡಲು ಸಲಹೆ

ಆನ್‌ಲೈನ್ ಇಲ್ಲವೇ ನ್‌ಟೆ ಮೂಲಕ ಹಣ ಹಾಕಿರುವುದು ಮೋಸ ಎಂದು ತಿಳಿದ ತಕ್ಷಣವೇ ಪೊಲೀಸ್ ಕಂಟ್ರೋಲ್ ರೂಂ 112 ಇಲ್ಲವೇ 100 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಬೇಕು. ಎಷ್ಟು ಬೇಗ ಪೊಲೀಸರಿಗೆ ಮಾಹಿತಿ ಲಭಿಸುವುದೋ ಅಷ್ಟೇ ಸುಲಭವಾಗಿ ನಿಮ್ಮ ಹಣ ವಾಪಸ್ ಕೈಸೇರುತ್ತದೆ. ಹಣ ವರ್ಗಾವಣೆಯಾದ ಕೆಲವೇ ಗಂಟೆಗಳಲ್ಲಿ ಅಥವಾ ಒಂದು ದಿನದೊಳಗೆ ಪೊಲೀಸರಿಗೆ ಎಲ್ಲ ಮಾಹಿತಿ ನೀಡಿದರೆ, ಹಣ ವರ್ಗಾಯಿಸಿಕೊಂಡಿರುವ ಬ್ಯಾಂಕ್ ಖಾತೆಯನ್ನು ‘ಗೋಲ್ಡನ್ ಹವರ್’ ಬಳಸಿ ಬ್ಲಾಕ್ ಮಾಡಬಹುದು. ಹೀಗೆ ಮಾಡುವುದರಿಂದ ನಿಮ್ಮ ಹಣ ವರ್ಗಾವಣೆಗೊಂಡಿರುವ ದಾಖಲೆ ತೋರಿಸಿ, ಬ್ಯಾಂಕ್‌ಗಳಿಂದ ಅಷ್ಟೇ ಸುಲಭವಾಗಿಯೇ ಹಣ ವಾಪಸ್ ಪಡೆಯಬಹುದು ಎನ್ನುತ್ತಾರೆ ‘ಸೈಬರ್ ಕ್ರೈಂ, ಎಕನಾಮಿಕ್ಸ್ ಅಫೆನ್ಸ್ ಆ್ಯಂಡ್ ನಾರ್ಕೋಟಿಕ್ಸ್’ ಪೊಲೀಸ್ ಅಧಿಕಾರಿಗಳು.

ಕಸ್ಟಮ್ಸ್ ಅಧಿಕಾರಿ ಎಂದು ನಂಬಿಸಿ ಹಣ ಪಡೆದಿರುವ ವಂಚನೆ ಕುರಿತು ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣದ ತನಿಖೆ ನಡೆಯುತ್ತಿದೆ. ವಂಚಕರ ಖಾತೆ ಸೀಜ್ ಮಾಡಿಸಿ, ಹಣ ಮರಳಿ ಕೊಡಿಸಲು ಕ್ರಮ ಜರುಗಿಸಲಾಗಿದೆ. ಹೀಗೆ ವಂಚನೆಗೊಳಗಾದವರು ದೂರು ನೀಡಲು ಹಿಂದೇಟು ಹಾಕದೆ ತಪ್ಪದೇ ಮಾಹಿತಿ ನೀಡಬೇಕು.| ಡಾ. ವಿಕ್ರಂ ಆಮ್ಟೆ ಡಿಸಿಪಿ, ಬೆಳಗಾವಿ

| ರವಿ ಗೋಸಾವಿ, ಬೆಳಗಾವಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net