ವಂಚಕನ ಬಂಧನ

28kls1 web
Published on

ಕಳಸ: ಗಂಟು ನೋವು, ಮಂಡಿ ನೋವು, ಮೈಕೈ ನೋವು, ಸಂಧಿವಾತ ಮುಂತಾದ ಕಾಯಿಲೆಗಳನ್ನು ನಿವಾರಣೆ ಮಾಡುವ ಉಪಕರಣ ಕೊಡುವುದಾಗಿ ಹೇಳಿ ಜನರಿಂದ ಹಣ ಪಡೆದು ವಂಚಿಸುತ್ತಿದ್ದವನನ್ನು ಪಟ್ಟಣ ಪೊಲೀಸರು ಬಂಧಿಸಿದ್ದಾರೆ. ಆತನಿಂದ 20 ಸಾವಿರ ರೂಪಾಯಿ, ಎರಡು ಮೊಬೈಲ್, ಬೈಕ್ ವಶಪಡಿಸಿಕೊಂಡಿದ್ದಾರೆ. ಹಾಸನ ಜಿಲ್ಲೆ ಜಾವಗಲ್ ಎಸ್.ರವಿ ಬಂಧಿತ ಆರೋಪಿ. ತನೂಡಿ ಗ್ರಾಮದ ಅಳಗೋಡಿನ ಶ್ರೀನಿವಾಸ ಎಂಬುವವರ ಮನೆಗೆ ಎಸ್.ರವಿ ಬಂದು ದೇಹದ ಯಾವುದೇ ಭಾಗದ ನೋವುಗಳನ್ನು ನಿವಾರಣೆ ಮಾಡುವ ಉಪಕರಣ ಮಾರುವ ಕಂಪನಿಯ ಮಾರಾಟ ಪ್ರತಿನಿಧಿ ಎಂದು ಪರಿಚಯಿಸಿಕೊಂಡ. ಯಂತ್ರವನ್ನು ಕೆಲವೇ ದಿನದಲ್ಲಿ ನೀಡುವುದಾಗಿ ತಿಳಿಸಿ 35 ಸಾವಿರ ರೂಪಾಯಿ ಪಡೆದು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದ. ವಂಚನೆ ಕುರಿತು ಕಳಸ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪೊಲೀಸರು ಬುಧವಾರ ಹಾಸನ ಜಿಲ್ಲೆ ಜಾವಗಲ್​ನಲ್ಲಿ ಆರೋಪಿಯನ್ನು ಬಂಧಿಸಿದರು. ಆರೋಪಿ ಹಾಸನ, ಚಿಕ್ಕಮಗಳೂರು, ಮೈಸೂರು ಜಿಲ್ಲೆಗಳಲ್ಲೂ ಆರೋಪಿ ಇಂಥದೇ ಕೃತ್ಯ ಎಸಗಿರುವುದು ತಿಳಿದು ಬಂದಿದೆ.  ಕಾರ್ಯಾಚರಣೆಯಲ್ಲಿ ಕಳಸ ಎಸ್​ಐ ಹರ್ಷವರ್ಧನ್, ಸಿಬ್ಬಂದಿ ಜಯಕುಮಾರ್, ಉಮೇಶ್, ಮಲ್ಲೇಶ್, ಅನಿಲ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net