ಲ್ಯಾಂಡ್ ಜಿಹಾದ್ ಮೂಲಕ ವಕ್ಫ್ ಭೂಕಬಳಿಕೆ

BJP
Published on

ಚಿತ್ರದುರ್ಗ: ವಕ್ಫ್ ಬೋರ್ಡ್ ಬಳಸಿಕೊಂಡು ಲ್ಯಾಂಡ್ ಜಿಹಾದ್‌ಗೆ ಮುಂದಾಗಿ, ರಾಜ್ಯದ ರೈತರ ಭೂಮಿ ಕಬಳಿಸಲು ಬಹುದೊಡ್ಡ ಸಂಚು ರೂಪಿಸಲಾಗಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.

ಸಂಚಿನ ರೂವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಅವರನ್ನು ಕೂಡಲೇ ಸಚಿವ ಸಂಪುಟದಿಂದ ವಜಾಗೊಳಿಸಿ, ರಾಜ್ಯದಿಂದ ಗಡಿಪಾರು ಮಾಡಬೇಕು ಎಂದು ಸಿಎಂಗೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಿದರು.

ಕಾರ್ಯದರ್ಶಿ ಜಿಂಕಲ್ ಬಸವರಾಜ್ ಮಾತನಾಡಿ, ನೂರಾರು ವರ್ಷಗಳಿಂದ ಉಳುಮೆ ಮಾಡುತ್ತಿರುವ ರೈತರ ಜಮೀನುಗಳನ್ನು ವಶಪಡಿಸಿಕೊಳ್ಳಲು ರಾಜ್ಯದ ಸಿಎಂ ಸಿದ್ದರಾಮಯ್ಯ, ವಸತಿ ಸಚಿವ ಜಮೀರ್ ಹೊರಟಿದ್ದಾರೆ. ಮಠ ಮಾನ್ಯ, ಚರ್ಚ್ ಸೇರಿ ಧಾರ್ಮಿಕ ಕೇಂದ್ರಗಳು, ಸ್ಮಾರಕಗಳಿರುವ ಸಾವಿರಾರು ಎಕರೆ ಭೂಮಿ ಕಬಳಿಸಿ ವಕ್ಫ್ ಎಂದು ನಮೂದಿಸುವ ಹುನ್ನಾರಕ್ಕೆ ಕೈಹಾಕಿದ್ದಾರೆ ಎಂದು ಆರೋಪಿಸಿದರು.

1974ರ ವಕ್ಫ್ ಕಾಯ್ದೆಯನ್ನು ಕೂಡಲೇ ರದ್ದುಪಡಿಸಬೇಕು. ಇಲ್ಲದಿದ್ದರೆ, ಬಿಜೆಪಿಯ ಪ್ರತಿಭಟನೆ ತೀವ್ರ ಸ್ವರೂಪ ಪಡೆಯಲಿದೆ ಎಂದು ಎಚ್ಚರಿಸಿದರು.

ಚಳ್ಳಕೆರೆ ಎಂ.ಶಿವಮೂರ್ತಿ ಮಾತನಾಡಿ, ಚಳ್ಳಕೆರೆ ತಾಲೂಕಿನಲ್ಲಿ ಎಸ್ಸಿ-ಎಸ್ಟಿ ಸಮುದಾಯದವರಿಗೆ ಸೇರಿದ ಭೂಮಿಯನ್ನು ವಕ್ಫ್ ತನ್ನ ಸುಪರ್ದಿಗೆ ತೆಗೆದುಕೊಳ್ಳಲು ಹೊರಟಿದೆ. ವಕ್ಫ್ ಬೋರ್ಡ್‌ಗೂ ಮುಂಚೆ ರೈತರಿಗೆ ಜಮೀನು ನೀಡಿದ್ದು, ಯಾವ ಕಾರಣಕ್ಕೂ ಒಂದಿಂಚು ಜಾಗ ಬಿಟ್ಟುಕೊಡೆವು. ಸಿಎಂ ಸಿದ್ದರಾಮಯ್ಯ ಒಂದೊಂದೆಡೆ ವಿಭಿನ್ನ ಹೇಳಿಕೆ ನೀಡುವುದನ್ನು ಬಿಟ್ಟು ವಶಕ್ಕೆ ಪಡೆಯುವುದಿಲ್ಲವೆಂದು ಗೆಜೆಟ್ ನೋಟಿಫಿಕೇಷನ್ ಹೊರಡಿಸಬೇಕು ಎಂದು ಒತ್ತಾಯಿಸಿದರು.

ಮುಖಂಡ ಜಿ.ಎಸ್.ಅನಿತ್‌ಕುಮಾರ್ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಒಂದಲ್ಲೊಂದು ಹಗರಣದಲ್ಲೇ ಮುಳುಗಿದೆ. ಜನರ ದಿಕ್ಕು ತಪ್ಪಿಸಲು ಲ್ಯಾಂಡ್ ಜಿಹಾದ್ ಕೈಗೆತ್ತಿಕೊಂಡಿದೆ. ಜನವಿರೋಧಿ ಸರ್ಕಾರವನ್ನು ಅಧಿಕಾರದಿಂದ ಕಿತ್ತೊಗೆಯಬೇಕಿದೆ ಎಂದರು.

ಪಕ್ಷದ ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ್ ಮಾತನಾಡಿ, ದೇಶದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇರುವೆಡೆ ಎಸ್ಸಿ-ಎಸ್ಟಿ, ಹಿಂದುಳಿದವರು, ರೈತರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ರೈತರು ತಮ್ಮ ಪಹಣಿಗಳನ್ನು ಮೊದಲು ಪರಿಶೀಲಿಸಿಕೊಂಡು ಬಂದೋಬಸ್ತ್ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಪ್ರಧಾನ ಕಾರ್ಯದರ್ಶಿ ಸಂಪತ್‌ಕುಮಾರ್ ಮಾತನಾಡಿ, ಸಿಎಂ ತಮಗೆ ಬೆಂಬಲವಾಗಿ ನಿಂತ ಸಮುದಾಯಗಳಿಗೆ ಅನ್ಯಾಯ ಮಾಡಲು ಹೊರಟಿದ್ದಾರೆ. ತಮ್ಮ ಸಮಾಜದ ಬೀರಲಿಂಗೇಶ್ವರ (ಬೀರಪ್ಪ) ದೇಗುಲಗಳಿಗೆ ನೋಟಿಸ್ ಹೋಗಿದ್ದರೂ ಮೌನ ವಹಿಸಿದ್ದಾರೆ. ಚಿತ್ರದುರ್ಗದ ಜಿ.ಆರ್.ಹಳ್ಳಿ ಸಮೀಪದ ವಿವಿ ಜಾಗವನ್ನು ವಕ್ಫ್‌ಗೆ ಸೇರಿಸಿಕೊಳ್ಳಲಾಗಿದೆ. ಜನರ ಹಿತಕಾಯಲು ಸಾಧ್ಯವಾಗದಿದ್ದರೆ ರಾಜೀನಾಮೆ ನೀಡಿ, ಅಧಿಕಾರದಿಂದ ಕೆಳಗಿಳಿಯಿರಿ ಎಂದು ಒತ್ತಾಯಿಸಿದರು.

ಡಿಸಿಗೆ ಮನವಿ ಸಲ್ಲಿಸಲು ತೆರಳುವ ವೇಳೆ ಬ್ಯಾರಿಕೇಡ್‌ಗಳನ್ನು ಅಡ್ಡವಿಟ್ಟು ತಡೆಯಲು ಮುಂದಾದ ಪೊಲೀಸರು ಮತ್ತು ಕಮಲ ಪಾಳಯದ ನಡುವೆ ವಾಗ್ವಾದ ನಡೆಯಿತು. ಕೊನೆಗೆ ಬ್ಯಾರಿಕೇಡ್ ದಾಟಿ ಮುನ್ನುಗ್ಗಲು ಯತ್ನಿಸಿದರು. ಬಂಧಿಸಿದರು ಅದಕ್ಕೂ ಸಿದ್ಧರಾಗಿಯೇ ಬಂದಿದ್ದೇವೆ ಎಂದರು.

ಮುಖಂಡರಾದ ಬಾಳೇಕಾಯಿ ರಾಂದಾಸ್, ನವೀನ್ ಚಾಲುಕ್ಯ, ಕಲ್ಲೇಶಯ್ಯ, ರಾಮು, ಭಾರ್ಗವಿ ದ್ರಾವಿಡ್, ದಗ್ಗೆ ಶಿವಪ್ರಕಾಶ್, ನಾಗರಾಜ್ ಬೇದ್ರೆ, ಡಾ.ಮಂಜುನಾಥ್, ಶೈಲೇಶ್, ಶಾಂತಮ್ಮ, ಯರ್ರಿಸ್ವಾಮಿ, ಲೋಕೇಶ್, ಚಂದ್ರು, ಸಿಂಧುತನಯ, ಪರಶುರಾಮ್, ಕಲ್ಲಂಸೀತಾರಾಮರೆಡ್ಡಿ, ಮೋಹನ್, ನರೇಂದ್ರ ಹೊನ್ನಾಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net