ಲೋಕ್ ಅದಾಲತ್‌ನಿಂದ ಸಮಯ, ಹಣ ಉಳಿತಾಯ

nrp loakada
ಎನ್.ಆರ್.ಪುರ ತಾಲೂಕು ಜೆಎಂಎ್ಸಿ ನ್ಯಾಯಾಲಯದಲ್ಲಿ ರಾಷ್ಟ್ರೀಯ ಲೋಕ್ ಅದಾಲತ್ ನಡೆಯಿತು. ಕೆ.ಟಿ.ರಘುನಾಥ್ ಗೌಡ, ಕೆ.ಎಸಾಜು, ಎಂ.ಆರ್.ಶಿವಕುಮಾರ್, ಜಯಪ್ರಕಾಶ್, ಎಚ್.ಆರ್.ವೆಂಕಟೇಶ್‌ಮೂರ್ತಿ, ಜಿ.ಎಂ.ವಿಶ್ವನಾಥ್, ಸುಜಯ್ ಇತರರಿದ್ದರು.
Published on

ಎನ್.ಆರ್.ಪುರ: ನ್ಯಾಯಾಲಯದಲ್ಲಿರುವ ಪ್ರಕರಣವನ್ನು ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ ರಾಜಿ ಮಾಡಿಕೊಂಡರೆ ಇಬ್ಬರೂ ಕಕ್ಷಿದಾರರ ಬಾಂಧವ್ಯ ಹಾಗೂ ಹಣ ಉಳಿಯಲಿವೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಕೆ.ಟಿ.ರಘುನಾಥ ಗೌಡ ತಿಳಿಸಿದರು.

ಶನಿವಾರ ನ್ಯಾಯಾಲಯದ ಆವರಣದಲ್ಲಿ ನಡೆದ ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ ಮಾತನಾಡಿ, 2-3 ತಿಂಗಳಿಗೊಮ್ಮೆ ಲೋಕ್ ಅದಾಲತ್ ನಡೆಸುತ್ತೇವೆ. ಕಂದಾಯ ವಸೂಲಿಗೆ ಪಿಡಿಒಗಳು ನೋಟಿಸ್ ನೀಡಿರುವ ಪ್ರಕರಣ, ಬ್ಯಾಂಕಿನ ಚೆಕ್ ಬೌನ್ಸ್ ಪ್ರಕರಣಗಳನ್ನು ಬಗೆಹರಿಸಿಕೊಳ್ಳಬಹುದು ಎಂದರು.

ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಚ್.ಎ.ಸಾಜು ಮಾತನಾಡಿ, ಲೋಕ್ ಅದಾಲತ್‌ನಲ್ಲಿ ಕಕ್ಷಿದಾರರು ರಾಜಿ ಮಾಡಿಕೊಂಡರೆ ಸಮಯ ಹಾಗೂ ಹಣ ಉಳಿಯುತ್ತದೆ. ಮೇಲ್ಮನವಿ ಸಲ್ಲಿಸಲು ಅವಕಾಶವಿಲ್ಲ. ಇಬ್ಬರಿಗೂ ಗೆಲುವು ಸಿಕ್ಕಂತಾಗುತ್ತದೆ ಎಂದು ತಿಳಿಸಿದರು.

ಕಡಹಿನಬೈಲು ಪಿಡಿಒ ವಿಂದ್ಯಾ ಮಾತನಾಡಿ, ನ್ಯಾಯಾಲಯದಿಂದ ನೋಟಿಸ್ ಜಾರಿ ಮಾಡಿದ್ದರಿಂದ ತೆರಿಗೆ ವಸೂಲಾತಿ ಆಗಿದೆ. ಇದರಿಂದ ಗ್ರಾಮ ಪಂಚಾಯಿತಿಗೆ ತುಂಬ ಅನುಕೂಲವಾಗಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಮೊಬೈಲ್ ಟವರ್ ಇರುವ ಕಂಪನಿಗಳು ಗ್ರಾಪಂಗೆ ಸ್ಪಂದಿಸುತ್ತಿಲ್ಲ. ಟವರ್ ತೆರಿಗೆ ಪಾವತಿಯಾದರೆ ಇನ್ನೂ ಬಹಳ ಅನುಕೂಲವಾಗಲಿದೆ ಎಂದು ಹೇಳಿದರು.

ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ ಕಿರಿಯ ನ್ಯಾಯಾಲಯದ ಕಂದಾಯ ವಸೂಲಾತಿಯ 568 ಪ್ರಕರಣಗಳಲ್ಲಿ 242 ಪ್ರಕರಣ ಇತ್ಯರ್ಥವಾದವು. ಬ್ಯಾಂಕುಗಳ 600 ಪ್ರಕರಣಗಳಲ್ಲಿ 15 ಪ್ರಕರಣ ಮುಕ್ತಾಯಗೊಳಿಸಲಾಯಿತು. ಜತೆಗೆ ಚೆಕ್‌ಬೌನ್ಸ್, ಪೊಲೀಸ್ ಠಾಣೆಯ ಕೆಲವು ಪ್ರಕರಣ ಇತ್ಯರ್ಥಗೊಳಿಸಲಾಯಿತು.

ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ ವಕೀಲರಾ ಚಂದ್ರಶೇಖರ್, ವಿಶ್ವನಾಥ್, ಶಿವಕುಮಾರ್, ವೆಂಕಟೇಶಮೂರ್ತಿ, ಸುಜಯ್, ಜಯಪ್ರಕಾಶ್, ಬಸವರಾಜ್, ಎಂ.ಆರ್.ಶಿವಕುಮಾರ್, ಪಿಡಿಒಗಳು, ಬ್ಯಾಂಕುಗಳ ವ್ಯವಸ್ಥಾಪಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net