

ಚಾಮರಾಜನಗರ: ವಿವಾಹನ ವಿಚ್ಛೇಧನ, ಜೀವನಾಂಶ ಹಾಗೂ ಗಂಡನಿಂದ ರಕ್ಷಣೆಯನ್ನು ಕೋರಿ ನ್ಯಾಯಾಲಯದ ಮೊರೆ ಹೋಗಿ ದೂರಾಗಿದ್ದ 3 ಜೋಡಿಗಳು ಶನಿವಾರ ನಡೆದ ಲೋಕ್ ಅದಾಲತ್‌ನಲ್ಲಿ ಮತ್ತೆ ಒಂದಾದರು.
ನಗರದ ಜಿಲ್ಲಾ ನ್ಯಾಯಾಲದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಆಯೋಜಿಸಿದ್ದ ಲೋಕ್ ಅದಾಲತ್‌ನಲ್ಲಿ ಹಿಂದೂ ವಿವಾಹ ಕಾಯ್ದೆಯಡಿಯಲ್ಲಿ ವಿವಾಹ ವಿಚ್ಛೇಧನ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದ ದಂಪತಿಗಳಾದ ಎಸ್.ವಿ.ನಾಗೇಂದ್ರ ಮತ್ತು ಪುಷ್ಪಲತಾ ಅವರು ಮನಸ್ತಾಪಗಳನ್ನು ಮರೆತು ನ್ಯಾಯಾಧೀಶರು ಮತ್ತು ವಕೀಲರ ಸಮ್ಮುಖದಲ್ಲಿ ಒಂದಾದರು. ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯಡಿಯಲ್ಲಿ ತನ್ನ ಗಂಡನಿಂದ ರಕ್ಷಣೆಯನ್ನು ಕೋರಿ ಜೆಎಂಎ್ಸಿ ನ್ಯಾಯಾಲಯದ ಮೊರೆ ಹೋಗಿದ್ದ ಸುಮಿತಾ ಅವರು ಮತ್ತೆ ತನ್ನ ಪತಿ ವೆಂಕಟೇಶ್ ನಾಯಕ ಅವರೊಂದಿಗೆ ಜತೆಯಾದರು. ಮತ್ತೊಂದು ಪ್ರಕರಣದಲ್ಲಿ ಜಯಶೀಲಾ ಎಂಬುವವರು ತನ್ನ ಪತಿ ಮಾದೇಶ ಎಂಬುವವರಿಂದ ಜೀವನಾಂಶವನ್ನು ಕೋರಿ ಕೊಳ್ಳೇಗಾಲ ಜೆಎಂಎ್ಸಿ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ ಮತ್ತೆ ಒಂದಾಗಿ ಜೀವನ ನಡೆಸಲು ಲೋಕ್‌ಅದಾಲತ್‌ನಲ್ಲಿ ಪರಸ್ಪರ ಒಪ್ಪಿಕೊಂಡರು.
ಸಂಸಾರದಲ್ಲಿ ಉಂಟಾದ ಯಾವುದೋ ಕೆಟ್ಟ ಘಳಿಗೆಯಿಂದ ದೂರಾಗಿದ್ದ ದಂಪತಿಗಳು ಲೋಕ್ ಅದಾಲತ್‌ನಲ್ಲಿ ಮತ್ತೆ ಒಂದಾಗುವ ಮೂಲಕ ದಾಂಪತ್ಯ ಜೀವನದ ಮಹತ್ವವನ್ನು ಅರಿತುಕೊಂಡರು. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಜಿ.ಪ್ರಭಾವತಿ ಅವರ ನೇತೃತ್ವದಲ್ಲಿ ಒಂದಾದ ಜೋಡಿಗಳು ಪರಸ್ಪರ ಹೂವಿನ ಹಾರ ಬದಲಾಯಿಸಿಕೊಂಡು, ಸಿಹಿ ತಿನಿಸಿ ಹರ್ಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮತ್ತು ಹಿರಿಯ ಸಿವಿಲ್ ನ್ಯಾಯಾಧೀಶ ಈಶ್ವರ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ನಂಜಯ್ಯ, ಪ್ರಧಾನ ಕಾರ್ಯದರ್ಶಿ ದೊಡ್ಡಮೋಳೆ ರಂಗಸ್ವಾಮಿ ಹಾಗೂ ಇತರರು ಹಾಜರಿದ್ದರು.
ಹಲವು ಪ್ರಕರಣ ಇತ್ಯರ್ಥ:
ಜಿಲ್ಲೆಯ ಚಾಮರಾಜನಗರ, ಕೊಳ್ಳೇಗಾಲ, ಯಳಂದೂರು ಹಾಗೂ ಗುಂಡ್ಲುಪೇಟೆ ವ್ಯಾಪ್ತಿಯ ಒಟ್ಟು 13 ನ್ಯಾಯಾಲಯದಲ್ಲಿ ನಡೆದ ಲೋಕ್ ಅದಾಲತ್‌ನಲ್ಲಿ ಮತ್ತಷ್ಟು ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಯಿತು. ಚೆಕ್‌ಬೌನ್ಸ್, ಬ್ಯಾಂಕ್ ವಸೂಲಾತಿ, ಕೌಟುಂಬಿಕ ವಿವಾದಗಳು, ವಾಹನ ಅಪಘಾತ, ರಾಜೀಯೋಗ್ಯ ಕ್ರಿಮಿನಲ್ ಪ್ರಕರಣ, ಕಾರ್ಮಿಕ ಕಾಯ್ದೆಯಡಿಯಲ್ಲಿ ಬರುವಂತಹ ಪ್ರಕರಣಗಳು ಹಾಗೂ ಇನ್ನಿತರೆ ರಾಜೀಯೋಗ್ಯ ಪ್ರಕರಣಗಳನ್ನು ನ್ಯಾಯಾಧೀಶರು, ಕಕ್ಷಿದಾರರು ಮತ್ತು ವಕೀಲರ ಸಮ್ಮುಖದಲ್ಲಿ ಮುಕ್ತಾಯಗೊಳಿಸಲಾಯಿತು. ಇದರಿಂದಾಗಿ ಕಳೆದ ಹಲವು ವರ್ಷಗಳಿಂದ ನ್ಯಾಯಾಲಯದಲ್ಲಿ ಬಾಕಿಇದ್ದ ಪ್ರಕರಣಗಳು ಸುಖಾಂತ್ಯ ಕಂಡಿತು. ಸಾರ್ವಜನಿಕರಿಗೆ ಹಣ ಮತ್ತು ಸಮಯವೂ ಉಳಿತಾಯವಾಯಿತು.