ಲೋಕ್ ಅದಾಲತ್ ನಲ್ಲಿ 61,962 ಪ್ರಕರಣಗಳು ಇತ್ಯರ್ಥ

IMG-20241218-WA0035
Published on

ಚಾಮರಾಜನಗರ: ಸರ್ವರಿಗೂ ನ್ಯಾಯ ಎಂಬ ಪರಿಕಲ್ಪನೆಯಡಿಯಲ್ಲಿ ಜನ ಸಾಮಾನ್ಯರ ಅನುಕೂಲಕ್ಕಾಗಿ ತ್ವರಿತವಾಗಿ ಪ್ರಕರಣಗಳು ಇತ್ಯರ್ಥವಾಗಬೇಕೆಂಬ ಉದ್ದೇಶದಿಂದ ಕಳೆದ ಡಿಸೆಂಬರ್ 14ರ ಶನಿವಾರದಂದು ಜಿಲ್ಲಾದ್ಯಂತ ಹಮ್ಮಿಕೊಳ್ಳಲಾಗಿದ್ದ ಮೆಗಾ ಲೋಕ್ ಅದಾಲತ್ ನಲ್ಲಿ ಒಟ್ಟು 61,962 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ.

ನಗರದ ಜಿಲ್ಲಾ ನ್ಯಾಯಾಲಯದ ಆವರಣದ ವ್ಯಾಜ್ಯ ಪೂರ್ವ ಪರಿಹಾರ ಕೇಂದ್ರದಲ್ಲಿಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಬಿ.ಎಸ್. ಭಾರತಿ ಅವರು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ರಾಷ್ಟ್ರೀಯ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಮೇರೆಗೆ ಜಿಲ್ಲೆಯ ನಾಲ್ಕು ತಾಲೂಕಿನ ನ್ಯಾಯಾಲಯಗಳಲ್ಲಿ ಮೆಗಾ ಲೋಕ್ ಅದಾಲತ್ ಅನ್ನು ನಡೆಸಲಾಗಿದೆ. ಎಲ್ಲಾ ರೀತಿಯ ಸಿವಿಲ್ ಹಾಗೂ ರಾಜಿಯಾಗಬಲ್ಲ ಕ್ರಿಮಿನಲ್ ಪ್ರಕರಣಗಳು ಮತ್ತು ಇನ್ನಿತರ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಗೊಳಿಸಲು ಲೋಕ್ ಅದಾಲತ್ ಏರ್ಪಡಿಸಲಾಗಿತ್ತು ಎಂದರು.

ಒಟ್ಟು 1,229 ನ್ಯಾಯಾಲಯದ ಪ್ರಕರಣಗಳು, 60,463 ವ್ಯಾಜ್ಯ ಪೂರ್ವ ಪ್ರಕರಣಗಳು ಸೇರಿದಂತೆ ಒಟ್ಟಾರೆ 61,692 ಪ್ರಕರಣಗಳು ಶನಿವಾರ ನಡೆದ ಲೋಕ್ ಅದಾಲತ್ ನಲ್ಲಿ ಬಗೆಹರಿದಿವೆ. ಒಟ್ಟು 11,89,33,373 ರೂ.ಗಳಷ್ಟು ಮೌಲ್ಯದ ಪ್ರಕರಣಗಳು ಇತ್ಯರ್ಥಗೊಂಡಿವೆ ಎಂದು ತಿಳಿಸಿದರು.

ಚಾಮರಾಜನಗರ ತಾಲೂಕಿನಲ್ಲಿ 346 ನ್ಯಾಯಾಲಯದ ಪ್ರಕರಣಗಳು, 40,342 ವ್ಯಾಜ್ಯ ಪೂರ್ವ ಪ್ರಕರಣಗಳು ಸೇರಿ 40,688 ಪ್ರಕರಣಗಳು, ಯಳಂದೂರು ತಾಲೂಕಿನಲ್ಲಿ 187 ನ್ಯಾಯಾಲಯದ ಪ್ರಕರಣಗಳು, 3,677 ವ್ಯಾಜ್ಯ ಪೂರ್ವ ಪ್ರಕರಣಗಳು ಸೇರಿ 3,864 ಪ್ರಕರಣಗಳು, ಕೊಳ್ಳೇಗಾಲ ತಾಲೂಕಿನಲ್ಲಿ 521 ನ್ಯಾಯಾಲಯದ ಪ್ರಕರಣಗಳು, 10,585 ವ್ಯಾಜ್ಯ ಪೂರ್ವ ಪ್ರಕರಣಗಳು ಸೇರಿ 11,106 ಪ್ರಕರಣಗಳು, ಗುಂಡ್ಲುಪೇಟೆ ತಾಲೂಕಿನಲ್ಲಿ 175 ನ್ಯಾಯಾಲಯದ ಪ್ರಕರಣಗಳು, 5,859 ವ್ಯಾಜ್ಯ ಪೂರ್ವ ಪ್ರಕರಣಗಳು ಸೇರಿ 60,034 ಪ್ರಕರಣಗಳು ಬಗೆಹರಿದಿವೆ ಎಂದು ಹೇಳಿದರು.

ಈ ವರ್ಷದಲ್ಲಿ ಮಾ.13, ಜು.13, ಸೆ.14 ಹಾಗೂ ಡಿ.14ರಂದು ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ನಡೆದ ಲೋಕ್ ಅದಾಲತ್‍ಗಳಲ್ಲಿ ರಾಜೀ ಯೋಗ್ಯ ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳ ಪಕ್ಷಕಾರರು ಲೋಕ್ ಅದಾಲತ್ ಬಗ್ಗೆ ಅರಿವು ಪಡೆದುಕೊಂಡು ನ್ಯಾಯಾಧೀಶರು, ವಕೀಲರು ಮತ್ತು ವಕೀಲ ಸಂಧಾನಕಾರರ ಸಲಹೆ ಪಡೆದು 10 ರಿಂದ 15 ವರ್ಷಗಳಿಂದ ಬಾಕಿ ಇದ್ದಂತಹ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಂಡಿದ್ದಾರೆ ಎಂದರು.

85 ವರ್ಷದ ಮಹಾದೇವಮ್ಮ ಎಂಬ ವಯೋವೃದ್ದೆಯೋರ್ವರು ಆಸ್ತಿ ವಿಭಾಗಕ್ಕೆ ಸಂಬಂಧಿಸಿದಂತೆ ಎರಡು ವರ್ಷಗಳ ಹಿಂದೆಯಷ್ಟೇ ಹೂಡಲಾಗಿದ್ದ ಮೂಲ ದಾವೆ ಪ್ರಕರಣ ಒಮ್ಮತದಿಂದ ಲೋಕ್ ಅದಾಲತ್‍ನಲ್ಲಿ ತೀರ್ಮಾನವಾಗಿದೆ. ಇದು ಈ ಬಾರಿಯ ಲೋಕ್ ಅದಾಲತ್‍ನ ವಿಶೇಷತೆಗಳಲ್ಲಿ ಒಂದಾಗಿದೆ ಎಂದು ಜಿಲ್ಲಾ ನ್ಯಾಯಾಧೀಶರಾದ ಬಿ.ಎಸ್. ಭಾರತಿ ಅವರು ತಿಳಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಈಶ್ವರ ಅವರು ಮಾತನಾಡಿ ನ್ಯಾಯಾಲಯದಲ್ಲಿ ದಾಖಲಾದ ಪ್ರಕರಣಗಳಿಗೆ ಶೀಘ್ರಗತಿಯಲ್ಲಿ ನ್ಯಾಯ ಒದಗಿಸಿಕೊಡುವುದು, ಸಮಯ, ಕೋರ್ಟ್ ಫೀ ಉಳಿತಾಯವಾಗುವಂತೆ ಮಾಡುವುದು ಲೋಕ್ ಅದಾಲತ್‍ನ ಉದ್ದೇಶವಾಗಿದೆ. ಲೋಕ್ ಅದಾಲತ್ ಯಶಸ್ಸಿಗೆ ನ್ಯಾಯಾಧೀಶರು, ವಕೀಲರು, ನ್ಯಾಯಾಲಯದ ಸಿಬ್ಬಂದಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪೊಲೀಸ್ ಇಲಾಖೆ, ಕಾರ್ಮಿಕ, ಅಬಕಾರಿ, ಕಂದಾಯ ಇಲಾಖೆ, ಬ್ಯಾಂಕುಗಳು, ಮಾಧ್ಯಮ ಪ್ರತಿನಿಧಿಗಳು ನೀಡಿದ ಸಹಕಾರ ಕಾರಣವಾಗಿದೆ ಎಂದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಎಸ್. ನಂಜಯ್ಯ ಅವರು ಮಾತನಾಡಿ ಲೋಕ್ ಅದಾಲತ್‍ನಲ್ಲಿ ರಾಜೀ ಸಂಧಾನದ ಮೂಲಕ ವ್ಯಾಜ್ಯಗಳನ್ನು ಬಗೆ ಹರಿಸಲು ವಕೀಲರು ಶ್ರಮವಹಿಸಿದ್ದಾರೆ. ಲೋಕ್ ಅದಾಲತ್‍ನಲ್ಲಿ ಪ್ರಕರಣಗಳು ಇತ್ಯರ್ಥಗೊಳ್ಳುವುದರಿಂದ ಕಕ್ಷಿದಾರರಲ್ಲಿ ಬಾಂಧವ್ಯ ಉಂಟಾಗಿ ಪ್ರೀತಿ, ವಿಶ್ವಾಸ, ನಂಬಿಕೆ ಉಳಿಯುತ್ತದೆ. ದ್ವೇಷ ಭಾವನೆ ಹೋಗುತ್ತದೆ ಎಂದರು.

ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿಗಳಾದ ರಂಗಸ್ವಾಮಿ, ಜಂಟಿ ಕಾರ್ಯದರ್ಶಿಗಳಾದ ಮೋಹನ್ ಜಗದೀಶ್ ಸುದ್ದಿಗೋಷ್ಠಿಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net