

ಪಾಂಡವಪುರ: ತಾಲೂಕು ಮಟ್ಟದ ಅಧಿಕಾರಿಗಳ ಸಮಕ್ಷಮದಲ್ಲಿ ಹಲವು ಪ್ರಕರಣಗಳನ್ನು ವಿಚಾರಣೆ ನಡೆಸಿ ಸ್ಥಳದಲ್ಲೇ ಬಗೆಹರಿಸಲಾಗಿದೆ ಎಂದು ಲೋಕಾಯುಕ್ತ ಎಸ್‌ಪಿ ವಿ.ಜೆ.ಸಜಿತ್ ತಿಳಿಸಿದರು.
ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಸಾರ್ವಜನಿಕರ ಕುಂದುಕೊರತೆ ಸಭೆಯಲ್ಲಿ ದೂರುಗಳನ್ನು ಸ್ವೀಕರಿಸಿ ಮಾತನಾಡಿದರು. ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ಒಟ್ಟು 26 ದೂರುಗಳು ಸಲ್ಲಿಕೆಯಾಗಿವೆ. ಕೆಲವು ದೂರುಗಳನ್ನು ಸ್ಥಳದಲ್ಲೇ ಪರಿಹರಿಸಲಾಗಿದೆ. ಲೋಕಾಯುಕ್ತಕ್ಕೆ ದೂರು ನೀಡುವವರು ನಿಗದಿತ ನಮೂನೆಯಲ್ಲಿ ದಾಖಲೆ ಸಮೇತ ಸಲ್ಲಿಸಿದರೆ ತಕ್ಷಣ ವಿಚಾರಣೆ ಪ್ರಾರಂಭಿಸಲಾಗುವುದು. ಇಲ್ಲವಾದಲ್ಲಿ ಅದಕ್ಕೆ ಸಂಬಂಧಿಸಿದಂತೆ ಸಾಕ್ಷಿ ಮತ್ತು ದಾಖಲೆಗಳನ್ನು ಕಲೆ ಹಾಕಿದ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದು ವಿವರಿಸಿದರು.
ತಾಲೂಕು ಮಟ್ಟದಲ್ಲಿ ಹೆಚ್ಚಾಗಿ ಎಡಿಎಲ್‌ಆರ್ (ಭೂಮಾಪನ ಇಲಾಖೆ), ಕಂದಾಯ ಇಲಾಖೆಯಲ್ಲಿನ ಖಾತೆ ವರ್ಗಾವಣೆ, ಹದ್ದುಬಸ್ತ್, ಪೋಡಿ ಹಾಗೂ ಭೂ ವ್ಯಾಜ್ಯಗಳ ಆದೇಶಕ್ಕೆ ಸಂಬಂಧಿಸಿದಂತೆ ದೂರುಗಳು ಕೇಳಿಬಂದಿವೆ. ಎಲ್ಲವನ್ನೂ ಪರಿಶೀಲಿಸಿದ ಬಳಿಕ ಹಂತ ಹಂತವಾಗಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಲೋಕಾಯುಕ್ತ ಡಿವೈಎಸ್‌ಪಿ ಸುನೀಲ್‌ಕುಮಾರ್, ಇನ್ಸ್‌ಪೆಕ್ಟರ್ ಮೋಹನ್ ರೆಡ್ಡಿ, ಸಿಬ್ಬಂದಿ ಮಹದೇವಸ್ವಾಮಿ, ಶರತ್, ಎನ್.ಮಹದೇವ ಇದ್ದರು.