

ಬಾಗಲಕೋಟೆ: ಜಮೀನಿನ ಪಿ.ಟಿ.ಶೀಟ್ ಮಾಡಿಕೊಡಲು ಲಂಚ ಪಡೆಯುವಾಗ ಬೀಳಗಿ ಎಡಿಎಲ್‌ಆರ್ ಸರ್ವೇಯರ್ ಸೋಮವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಜಿಲ್ಲೆಯ ಬೀಳಗಿ ತಾಲೂಕಿನ ಸುನಗ ಎಲ್‌ಟಿ 1ರಲ್ಲಿ ಅಣ್ಣೇಶಿ ಲಮಾಣಿ ಎನ್ನುವವರಿಗೆ ಪಿ.ಟಿ.ಶೀಟ್ ಮಾಡಿಕೊಡಲು ಲಂಚದ ಬೇಡಿಕೆ ಇಟ್ಟಿದ್ದ ಸರ್ವೇಯರ್ ಮಹಾಂತೇಶ ಕವಳಿಕಟ್ಟಿ ಹಣ ಪಡೆಯುವಾಗಲೇ ಸಿಕ್ಕು ಬಿದ್ದಿದ್ದಾರೆ.
8 ಎಕರೆ ಜಮೀನಿಗೆ ಸಂಬಂಧಿಸಿದಂತೆ ಪಿ.ಟಿ.ಶೀಟ್ ಮಾಡಿಕೊಡಬೇಕಿತ್ತು. ಇದಕ್ಕಾಗಿ ಮಹಾಂತೇಶ ಮೊದಲು 28 ಸಾವಿರ ರೂ. ಶುಲ್ಕ ಎಂದು ಪಡೆದುಕೊಂಡಿದ್ದರೂ ಕೆಲಸ ಮಾಡಿ ಕೊಟ್ಟಿರಲಿಲ್ಲ.
ಈ ಬಗ್ಗೆ ಅಣ್ಣೇಶಿ ಮತ್ತೆ ಕೆಲಸ ಮಾಡಿಕೊಡಲು ಕೋರಿದಾಗ 37 ಸಾವಿರ ರೂ. ಲಂಚದ ಬೇಡಿಕೆ ಇಟ್ಟಿದ್ದರು. ಸೋಮವಾರ 15 ಸಾವಿರ ರೂ. ತಂದು ಕೊಡಲು ಸೂಚಿಸಿದ್ದರು. ಅಣ್ಣೇಶಿ ಲೋಕಾಯುಕ್ತರಿಗೆ ದೂರು ನೀಡಿದ್ದರು.
ಸೋಮವಾರ ಸಂಜೆ ಬೀಳಗಿ ಎಡಿಎಲ್‌ಆರ್ ಕಚೇರಿಯಲ್ಲಿ 15 ಸಾವಿರ ರೂ. ಲಂಚ ಪಡೆದುಕೊಳ್ಳುವಾಗ ಲೋಕಾಯುಕ್ತರು ದಾಳಿ ನಡೆಸಿ ಆರೋಪಿಯನ್ನು ದಸ್ತಗಿರಿ ಮಾಡಿದ್ದಾರೆ. ಲೋಕಾಯುಕ್ತ ಎಸ್ಪಿ ಹನುಮಂತರಾಯ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಪುಷ್ಪಲತಾ ನೇತೃತ್ವದಲ್ಲಿ ಲೋಕಾಯುಕ್ತ ತಂಡ ದಾಳಿ ನಡೆಸಿದ್ದು, ತನಿಖೆ ಮುಂದುವರಿದಿದೆ.