

ತರೀಕೆರೆ: ಅಮೃತಾಪುರ ಹೋಬಳಿ ಕಂದಾಯ ನಿರೀಕ್ಷಕ ಆರ್.ಕಾಂತರಾಜ್ ಗುರುವಾರ ರೈತನಿಂದ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾರೆ.
ಹುಣಸಘಟ್ಟ ಸಮೀಪದ ಹೊಸಳ್ಳಿ ತಾಂಡದ ರೈತ ಆರ್.ಕುಮಾರನಾಯ್ಕ ಪಿತ್ರಾರ್ಜಿತ ಸ್ವತ್ತಿನ ಆರ್‌ಟಿಸಿ ತಿದ್ದುಪಡಿಗೆ ಸೆಪ್ಟೆಂಬರ್‌ನಲ್ಲಿ ತಾಲೂಕು ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಅಂದಿನಿಂದ ಸತಾಯಿಸುತ್ತಿದ್ದ ಕಂದಾಯ ನಿರೀಕ್ಷಕ ಆರ್.ಕಾಂತರಾಜ್ ಪಹಣಿ ತಿದ್ದುಪಡಿ ಮಾಡಿಕೊಡಲು ಕುಮಾರನಾಯ್ಕ ಅವರ ಬಳಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ತಾಲೂಕು ಕಚೇರಿಯಲ್ಲಿ ಗುರುವಾರ ರೈತನಿಂದ 5 ಸಾವಿರ ರೂ. ಲಂಚ ಪಡೆಯುವಾಗ ಲೋಕಾಯುಕ್ತ ಡಿವೈಎಸ್ಪಿ ಜೆ.ಜೆ.ತಿರುಮಲೇಶ್ ನೇತೃತ್ವದಲ್ಲಿ ದಾಳಿ ನಡೆಸಿದ ಪೊಲೀಸರ ತಂಡ ಆರ್.ಕಾಂತರಾಜ್ ಅವರನ್ನು ನಗದು ಸಹಿತ ವಶಕ್ಕೆ ಪಡೆಯಿತು.
ನಾಲ್ಕು ವರ್ಷಗಳಿಂದ ಹುಣಸಘಟ್ಟ ನಾಡ ಕಚೇರಿಯಲ್ಲೇ ಪ್ರಭಾವ ಬಳಸಿ ಉಳಿದುಕೊಂಡಿರುವ ಆರ್‌ಐ ಆರ್.ಕಾಂತರಾಜ್, ಸಣ್ಣಕೆಲಸಕ್ಕೂ ಕೆಲವು ರೈತರಿಂದ ಹಣ ಪಡೆಯುತ್ತಿದ್ದರು ಎಂಬ ದೂರು ವ್ಯಾಪಕವಾಗಿ ಕೇಳಿಬಂದಿದೆ.
ಕಾರ್ಯಾಚರಣೆಯಲ್ಲಿ ಇನ್ಸ್‌ಪೆಕ್ಟರ್‌ಗಳಾದ ಸಿ.ಎಲ್.ಚಂದ್ರಶೇಖರ್, ಮಲ್ಲಿಕಾರ್ಜುನ, ಸಿಬ್ಬಂದಿ ಸವಿನಯ್, ಲೋಕೇಶ್, ಪ್ರಸಾದ್, ವಿ.ಸಿ.ಶ್ರೀಧರ್, ವಿಜಯಭಾಸ್ಕರ್, ರವಿಚಂದ್ರ, ಗಿರೀಶ್, ಮುಜೀಬ್ ಖಾನ್ ಇದ್ದರು.