ಲೋಕಾಯುಕ್ತ ಅಧಿಕಾರಿಗಳ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ: ಎಚ್. ವಿ.ರಾಜೀವ್

H V Rajeev
Published on

ಮೈಸೂರು:ಮುಡಾ ಪ್ರಕರಣ ಸಂಬಂಧ ಲೋಕಾಯುಕ್ತ ಅಧಿಕಾರಿಗಳು ಕೇಳಿದ್ದ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದೇನೆ. ಮುಂದೆ ಕರೆದಾಗಲೂ ಬಂದು ಮಾಹಿತಿ ಕೊಡುತ್ತೇನೆ ಎಂದು ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್ ಹೇಳಿದರು.

ನಗರದ ಲೋಕಾಯುಕ್ತ ಕಚೇರಿಯಲ್ಲಿ ಮೂರು ಗಂಟೆಗಳ ಕಾಲ ವಿಚಾರಣೆ ಎದುರಿಸಿ ಹೊರ ಬಂದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರ ಪತ್ನಿಗೆ ಮುಡಾದಿಂದ ನಿವೇಶನ ಕೊಡುವ ಬಗ್ಗೆ ಸಭೆಯಲ್ಲಿ ವಿಷಯ ಮಂಡಿಸಲಾಗಿತ್ತು. ಅಧಿಕಾರಿಗಳು ಶಿಫಾರಸು ಮಾಡಿದ ಹಿನ್ನೆಲೆ ಸಭೆಯಲ್ಲಿಟ್ಟು ನಿರ್ಣಯ ಮಾಡಲಾಗಿದೆ. ಆದರೆ, ನಿವೇಶನ ನೀಡುವಂತೆ ಸಿದ್ದರಾಮಯ್ಯ ನನಗೆ ಯಾವುದೆ ಕರೆ ಮಾಡಿರಲಿಲ್ಲ. ಜತೆಗೆ ನಮ್ಮ ಮೇಲೆ ಯಾವ ಪ್ರಭಾವವನ್ನೂ ಬೀರಿಲ್ಲ ಎಂದು ಹೇಳಿದರು.

ಶೇ.50:50ರ ಅನುಪಾತದಲ್ಲಿ ನಿವೇಶನ ನೀಡುವುದು ನನ್ನ ಕಾಲದಲ್ಲಿ ಮಾತ್ರವಲ್ಲ, ಈ ನಿಯಮ ಹಿಂದಿನಿಂದಲೂ ಜಾರಿಯಲ್ಲಿದೆ. ಪ್ರಕರಣ ಸಂಬಂಧ ಮುಖ್ಯಮಂತ್ರಿ ಕುಟುಂಬವನ್ನು ಅನವಶ್ಯಕವಾಗಿ ತೇಜೋವಧೆ ಮಾಡಲಾಗುತ್ತಿದೆ. ಇದು ಸರಿಯಲ್ಲ ಎಂದರು.

ನಿವೇಶನ ಹಂಚಿಕೆ ಸರಿ, ತಪ್ಪು ಎನ್ನುವುದನ್ನು ನ್ಯಾಯಾಲಯ ಹೇಳಬೇಕು. ಯಾರೋ ಹೇಳಿದರೆ ಅದನ್ನು ಒಪ್ಪಲು ಸಾಧ್ಯವಿಲ್ಲ. ಪ್ರಕರಣ ಸಂಬಂಧ ನನಗೆ ಇಡಿಯಿಂದ ಯಾವುದೆ ನೋಟಿಸ್ ಬಂದಿಲ್ಲ. ನೋಟಿಸ್ ಬಂದರೆ ವಿಚಾರಣೆಗೆ ಹಾಜರಾಗಿ ನನ್ನಲ್ಲಿರುವ ಮಾಹಿತಿ ಕೊಡುತ್ತೇನೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net