

ಕಲಬುರಗಿ: ಬಿಬಿಎಂಪಿ ಮಹದೇವಪುರ ವಿಭಾಗದ ಕಂದಾಯ ಅಧಿಕಾರಿ ಬಸವರಾಜ ಮಗಿ ಅವರ ಮನೆಗಳಲ್ಲಿ ಗುರುವಾರ ದಾಳಿ ನಡೆಸಿದ್ದ ಲೋಕಾಯುಕ್ತ ಪೊಲೀಸರ ಪರಿಶೀಲನೆ ಶುಕ್ರವಾರ ಬೆಳಗಿನ ಜಾವದವರೆಗೆ ಮುಂದುವರಿದಿದ್ದು, ಸುಮಾರು ೨೩ ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳು ಪತ್ತೆಯಾಗಿವೆ.
ಕಲಬುರಗಿ ನಗರ, ಪಾಳಾ ಗ್ರಾಮ ಸೇರಿದಂತೆ ಗುರುವಾರ ಲೋಕಾ ಪೊಲೀಸರು ದಾಳಿ ನಡೆಸಿ, ಪರಿಶೀಲನೆ ನಡೆಸಿದ್ದರು. ಪಾಳಾ ಗ್ರಾಮದ ಮನೆಯಲ್ಲಿನ ಅಲಮಾರಿಯ ಕೀ ಬೆಂಗಳೂರಿನಲ್ಲಿ ಇದ್ದಿದ್ದಕ್ಕೆ ಪರಿಶೀಲನೆ ವಿಳಂಬವಾಗಿತ್ತು. ಕೀ ತರದಿದ್ದರೆ ಅಲಮಾರಿ ಒಡೆಯುವುದಾಗಿ ಪಟ್ಟು ಹಿಡಿದಿದ್ದರಿಂದ ಬಸವರಾಜ ತಾಯಿ ಬೆಂಗಳೂರಿನಿAದ ಆಗಮಿಸಿ, ಕೀ ನೀಡಿದ್ದರು.
ಅಲಮಾರಿ ಕೀ ಬಂದ ತಕ್ಷಣ ಗುರುವಾರ ತಡರಾತ್ರಿ ೧೧ ಗಂಟೆಗೆ ಪರಿಶೀಲನೆ ಆರಂಭಿಸಿದ ಲೋಕಾ ಪೊಲೀಸರಿಗೆ ೨೦.೦೯ ಲಕ್ಷ ರೂ. ಮೌಲ್ಯದ ೩೫೨ ಗ್ರಾಂ ಬಂಗಾರ, ೨.೯೧ ಲಕ್ಷ ರೂ. ಮೌಲ್ಯದ ೪.೮೭ ಕೆ.ಜಿ.ಬೆಳ್ಳಿ ಸೇರಿ ಒಟ್ಟು ೨೩ ಲಕ್ಷ ರೂ. ಮೌಲ್ಯದ ಚಿನ್ನಾಭರಣ ಪತ್ತೆಯಾಗಿದೆ.
ರಾತ್ರಿ ಇಡೀ ಪರಿಶೀಲನೆ: ಪಾಳಾ ಗ್ರಾಮದ ಮನೆಯಲ್ಲಿನ ಅಲಮಾರಿಯ ಕೀ ಇಲ್ಲದ್ದಕ್ಕೆ ಪರಿಶೀಲನೆಗೆ ತೊಡಕಾಗಿತ್ತು. ಕೆಲಸಗಾರರೇ ಇರುವ ಮನೆಯಲ್ಲಿ ಅಲಮಾರಿ ಕೀ ಬೆಂಗಳೂರಿನಲ್ಲಿ ಬಸವರಾಜ ಮನೆಯಲ್ಲಿತ್ತು. ಕೀಯನ್ನು ಅವರ ತಾಯಿಯಿಂದ ತರಿಸಿಕೊಂಡ ಲೋಕಾ ಪೊಲೀಸರು ರಾತ್ರಿ ೧೧ಗಂಟೆಗೆ ಪರಿಶೀಲನೆ ಆರಂಭಿಸಿ, ೪.೩೦ ಗಂಟೆವರೆಗೆ ಪರಿಶೀಲಿಸಿದರು. ಆಭರಣ ತೂಗುವವರನ್ನು ಕರೆಸಿ, ಲೆಕ್ಕಾಚಾರ ನಡೆಸಲಾಯಿತು. ಇನ್‌ಸ್ಪೆಕ್ಟರ್ ಹಣಮಂತ ಸಣ್ಣಮನಿ, ಸಿಬ್ಬಂದಿಯಾದ ಸರಸ್ವತಿ, ಬಸವರಾಜ, ಜಯಶ್ರೀ ಇದ್ದರು.
ಗುರುವಾರ ದಾಳಿ ವೇಳೆ ಬೆಂಗಳೂರು, ಕಲಬುರಗಿ ನಗರ, ಪಾಳಾ ಗ್ರಾಮದ ಮನೆಗಳಲ್ಲಿ ದಾಳಿ ವೇಳೆ ೩,೩೧,೭೦,೮೩೦ ರೂ. ಅಕ್ರಮ ಆಸ್ತಿ ಪತ್ತೆಯಾಗಿತ್ತು. ಕಲಬುರಗಿ ಮನೆಯಲ್ಲಿ ೧೨.೫೦ ಲಕ್ಷ ರೂ. ಮೌಲ್ಯದ ಕ್ಯಾಸಿನೋ ಕಾಯಿನ್ಸ್ ಪತ್ತೆಯಾಗಿದ್ದವು.