

ಚಿತ್ರದುರ್ಗ: ಚಿತ್ರದುರ್ಗ ಲೋಕಸಭಾ ಎಸ್‌ಸಿ ಮೀಸಲು ಕ್ಷೇತ್ರಕ್ಕೆ ಏಪ್ರಿಲ್ 26ರಂದು ಮತದಾನವಾಗಿದ್ದು, ನಗರದ ಸರ್ಕಾರಿ ವಿಜ್ಞಾನ ಕಾಲೇಜು ಹೊಸ ಕಟ್ಟಡದಲ್ಲಿ ಜೂ.4ರಂದು ಮತ ಎಣಿಕೆ ನಡೆಯಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಟಿ.ವೆಂಕಟೇಶ್ ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮತ ಎಣಿಕೆ ಸಮರ್ಪಕ ನಡೆಸಲು ಜಿಲ್ಲಾ ಚುನಾವಣಾ ಆಯೋಗ ಸಜ್ಜಾಗಿದ್ದು, ಅಂದು ಮಧ್ಯಾಹ್ನ 12.30ರೊಳಗೆ ಅಧಿಕೃತ ಫಲಿತಾಂಶ ಪ್ರಕಟವಾಗುವ ನಿರೀಕ್ಷೆ ಇದೆ ಎಂದರು.
3 ಹಂತದ ಭದ್ರತೆ, 86 ಸಿಸಿ ಕ್ಯಾಮರಾಗಳ ಕಣ್ಗಾವಲು ಹಾಗೂ ನಿತ್ಯ ನಾನು ಹಾಗೂ ಎಸ್‌ಪಿ, ಎಡಿಸಿ ಮತ್ತಿತರ ಹಿರಿಯ ಅಧಿಕಾರಿಗಳು ಇವಿಎಂ ದಾಸ್ತಾನಿರುವ ಎಣಿಕೆ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸುತ್ತಿದ್ದೇವೆ. ಅಭ್ಯರ್ಥಿಗಳು, ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಕೇಂದ್ರದ ಭೇಟಿಗೆ ಅವಕಾಶವಿತ್ತು. ದಿನದ 24 ಗಂಟೆಯೂ ಪತ್ರಾಂಕಿತ ಅಧಿಕಾರಿಗಳನ್ನು ಕೇಂದ್ರದ ಉಸ್ತುವಾರಿಗೆ ನಿಯೋಜಿಸಲಾಗಿದೆ ಎಂದು ಹೇಳಿದರು.
ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಪ್ರತ್ಯೇಕವಾಗಿ ಮತ ಎಣಿಕೆ ನಡೆಯಲಿದ್ದು, ಏಜೆಂಟರನ್ನು ನೇಮಿಸಿಕೊಳ್ಳುವಂತೆ ಅಭ್ಯರ್ಥಿಗೆ ಸೂಚಿಸಲಾಗಿದೆ. ಏಜೆಂಟರು ಪೆನ್, ಬಿಳಿ ಹಾಳೆ ಹೊರತಾಗಿ ಮೊಬೈಲ್ ಮತ್ತಿತರ ಯಾವುದೇ ವಸ್ತುಗಳನ್ನು ತರುವಂತಿಲ್ಲ. ತಮಗೆ ನಿಗದಿಪಡಿಸಿದ ಟೇಬಲ್, ಕ್ಷೇತ್ರದ ಕೌಂಟಿಂಗ್ ಕೊಠಡಿ ಬಿಟ್ಟು ಬೇರೆಡೆಗೆ ತೆರಳುವಂತಿಲ್ಲ ಎಂದು ಸೂಚಿಸಿದರು.
ಎಂಟು ಕೊಠಡಿಗಳಲ್ಲಿ ಎಣಿಕೆ ನಡೆಯಲಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 14 ಟೇಬಲ್ ಹಾಗೂ ಪ್ರತ್ಯೇಕ ಒಂದು ಕೊಠಡಿಯಲ್ಲಿ ನಡೆಯಲಿರುವ ಅಂಚೆ ಮತಪತ್ರಗಳು, ಇಟಿಪಿಎಸ್ ಎಣಿಕೆಗೆ 12 ಟೇಬಲ್‌ಗಳಿರುತ್ತವೆ. ಬೆಳಗ್ಗೆ 7.30ಕ್ಕೆ ಭದ್ರತಾ ಕೊಠಡಿಗಳನ್ನು ಏಕಕಾಲಕ್ಕೆ ತೆರೆಯಲಾಗುವುದು. ಬೆಳಗ್ಗೆ 8ರಿಂದ ಅಂಚೆ ಮತ ಎಣಿಕೆ ಮತ್ತು ಇವಿಎಂ ಮತ ಎಣಿಕೆ ಆರಂಭಿಸಲಾಗುವುದು ಎಂದರು.
ಕೇಂದ್ರದ ನೆಲಮಹಡಿಯಲ್ಲಿ ಚಳ್ಳಕೆರೆ, ಹೊಸದುರ್ಗ, ಪಾವಗಡ ವಿಧಾನಸಭಾ ಕ್ಷೇತ್ರಗಳ ಎಣಿಕೆ, ಮೊದಲ ಮಹಡಿಯಲ್ಲಿ ಮೊಳಕಾಲ್ಮೂರು, ಹಿರಿಯೂರು, ಶಿರಾ ಹಾಗೂ 2ನೇ ಮಹಡಿಯಲ್ಲಿ ಚಿತ್ರದುರ್ಗ, ಹೊಳಲ್ಕೆರೆ ವಿಧಾನಸಭಾ ಕ್ಷೇತ್ರಗಳ ಮತಎಣಿಕೆ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಮೊಳಕಾಲ್ಮೂರು ಕ್ಷೇತ್ರದ 285 ಮತಗಟ್ಟೆಗಳ ಎಣಿಕೆಯು 21 ಸುತ್ತುಗಳಲ್ಲಿ, ಚಳ್ಳಕೆರೆ 260-19, ಚಿತ್ರದುರ್ಗ 288-21, ಹಿರಿಯೂರು 287-21, ಹೊಸದುರ್ಗ 242-18, ಹೊಳಲ್ಕೆರೆ 299-22, ಶಿರಾ 267-20, ಪಾವಗಡ ಕ್ಷೇತ್ರದ 240 ಮತಗಟ್ಟೆಗಳ ಎಣಿಕೆಯು 18 ಸುತ್ತುಗಳಲ್ಲಿ ಪೂರ್ಣಗೊಳ್ಳಲಿದೆ. ಪ್ರತಿ ಟೇಬಲ್‌ಗೆ ಎಣಿಕೆ ಸಹಾಯಕರು, ಮೇಲ್ವಿಚಾರಕರು ಹಾಗೂ ಮೈಕ್ರೋ ವೀಕ್ಷಕರ ಸಹಿತ 3 ಜನರ ತಂಡವಿರುತ್ತದೆ. ಮತ ಎಣಿಕೆ ದಿನದಂದು ಜಿಲ್ಲಾದ್ಯಂತ 144 ಸೆಕ್ಷನ್ ಜಾರಿಯಾಗಲಿದೆ. ಜೂ.1ರಿಂದ 4ರ ವರೆಗೆ ಮದ್ಯ ಮಾರಾಟ ಮತ್ತು ಸಾಗಾಣಿಕೆ ನಿಷೇಧಿಸಲಾಗಿದೆ. ಅಂದು ವಿಜಯೋತ್ಸವ, ಸಭೆ-ಸಮಾರಂಭಗಳನ್ನು ನಡೆಸುವಂತಿಲ್ಲ ಎಂದು ಹೇಳಿದರು.
*ಬಿಗಿ ಬಂದೋಬಸ್ತ್: ಮತ ಎಣಿಕೆ ದಿನದಂದು ಜಿಲ್ಲಾದ್ಯಂತ, ನಗರ ಹಾಗೂ ಎಣಿಕೆ ಕೇಂದ್ರದ ಬಳಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ ಎಂದು ಎಸ್‌ಪಿ ಧರ್ಮೇಂದರ್ ಕುಮಾರ್ ಮೀನಾ ಹೇಳಿದರು.
ಜಿಲ್ಲಾದ್ಯಂತ 1800 ಹಾಗೂ ಎಣಿಕೆ ಕೇಂದ್ರ ಸೇರಿ ಚಿತ್ರದುರ್ಗ ನಗರದಲ್ಲಿ 900 ಪೊಲೀಸ್ ಅಧಿಕಾರಿ, ಸಿಬ್ಬಂದಿ ಹಾಗೂ ಗೃಹರಕ್ಷಕದಳದವರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಕೇಂದ್ರದ ಬಳಿ ಏಜೆಂಟರು, ಅಧಿಕಾರಿಗಳಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಇರುತ್ತದೆ ಎಂದರು.
ಎಡಿಸಿ ಬಿ.ಟಿ.ಕುಮಾರಸ್ವಾಮಿ, ಜಿಪಂ ಸಿಇಒ ಎಸ್.ಜೆ.ಸೋಮಶೇಖರ್, ಎಸಿ ಎಂ.ಕಾರ್ತಿಕ್ ಇದ್ದರು.