ಲೋಕಸಭೆ ಸವಾಲು ಎದುರಿಸಲು ಸನ್ನದ್ಧರಾಗಿ

H.C.Mahadevappa
Published on

ಚಿತ್ರದುರ್ಗ: ಲೋಕಸಭಾ ಚುನಾವಣೆ 2024ರ ಮೇ ತಿಂಗಳಲ್ಲಿ ನಡೆಯಲಿದ್ದು, ಈ ಸವಾಲು ಎದುರಿಸಲು ಸನ್ನದ್ಧರಾಗಿ. ಯಾರಿಗೆ ಟಿಕೆಟ್ ಸಿಕ್ಕರೂ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸಲಹೆ ನೀಡಿದರು.

ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಆಕಾಂಕ್ಷಿಗಳ ಪಟ್ಟಿ ಸ್ವೀಕರಿಸಲು ಕ್ಷೇತ್ರದ ವೀಕ್ಷಕರಾಗಿ ಆಗಮಿಸಿದ್ದ ವೇಳೆ ಕಾಂಗ್ರೆಸ್ ಜಿಲ್ಲಾ ಘಟಕದಿಂದ ಶನಿವಾರ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದರು.

ಚಿತ್ರದುರ್ಗ ಲೋಕಸಭೆ ಎಂಟು ವಿಧಾನಸಭಾ ಕ್ಷೇತ್ರ ಹೊಂದಿದ್ದು, ಎಲ್ಲಾ ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಅಭಿಪ್ರಾಯ ಸಂಗ್ರಹಿಸಲಾಗುವುದು. ಆಕಾಂಕ್ಷಿಗಳೊಂದಿಗೂ ಚರ್ಚಿಸಲಾಗುವುದು. ಎಲ್ಲವೂ ಪಾರದರ್ಶಕವಾಗಿ ನಡೆಯಲಿದೆ ಎಂದರು.

5 ಗ್ಯಾರಂಟಿಗಳ ಪೈಕಿ ನಾಲ್ಕನ್ನು ಈಡೇರಿಸಿದ್ದು, 1.32 ಕೋಟಿ ಕುಟುಂಬಗಳಿಗೆ ಪ್ರತಿ ತಿಂಗಳು ನಾಲ್ಕೈದು ಸಾವಿರ ರೂ. ಜಮಾ ಆಗುತ್ತಿದೆ. ಇದರಿಂದಾಗಿ ಅವರೆಲ್ಲರಿಗೂ ಜೀವನ ಭದ್ರತೆ ಸರ್ಕಾರ ಒದಗಿಸಿದೆ ಎಂದು ತಿಳಿಸಿದರು.

ಈ ಹಿಂದೆ ಕೋಟೆನಗರಿಯಲ್ಲಿ ನಡೆದ ಎಸ್ಸಿ, ಎಸ್ಟಿ ಸಮಾವೇಶ, ದಾವಣಗೆರೆಯಲ್ಲಿ ನಡೆದ ಸಿದ್ದರಾಮಯ್ಯ ಸಮಾವೇಶದಿಂದ ಕಾಂಗ್ರೆಸ್ ಹೆಚ್ಚು ಸ್ಥಾನ ಗೆಲ್ಲಲು ಸಾಧ್ಯವಾಗಿದೆ. ಹೀಗಾಗಿ ಎಸ್ಸಿ, ಎಸ್ಟಿ ವಿರೋಧಿ ಕಾಯ್ದೆ ರದ್ದುಗೊಳಿಸಲಾಗಿದೆ. ಮುಂಬರುವ ಚುನಾವಣೆ ಗೆಲ್ಲುವ ವಾತಾವರಣವಿದ್ದು, ಸರ್ಕಾರದ ಸಾಧನೆ ಜನರ ಮುಂದಿಡಬೇಕಿದೆ. ಕಾರ್ಯಕರ್ತರು ಅವಿರತ ಶ್ರಮಿಸಬೇಕಿದೆ ಎಂದು ಸಲಹೆ ನೀಡಿದರು.

ಕೆಪಿಸಿಸಿಗೆ ವರದಿ ಸಲ್ಲಿಕೆ: ಆಕಾಂಕ್ಷಿಗಳ ಪಟ್ಟಿ ತಯಾರು ಮಾಡಲು ಸೂಚನೆ ಇದ್ದು, ಸಂಗ್ರಹಿಸಿದ ಅಭಿಪ್ರಾಯ, ಮಾಹಿತಿಯನ್ನು ಕೆಪಿಸಿಸಿಗೆ ಸಲ್ಲಿಸಲಿದ್ದೇನೆ. ಸ್ಥಳೀಯರಾಗಲಿ, ಹೊರಗಿನವರಾಗಲಿ ಯಾವುದೇ ಕ್ಷೇತ್ರದಲ್ಲಿ ಯಾರೂ ಬೇಕಾದರೂ ಸ್ಪರ್ಧಿಸಲು ಸಂವಿಧಾನದಡಿ ಅವಕಾಶವಿದೆ. ಕಾಂಗ್ರೆಸ್ ಟಿಕೆಟ್ ಯಾರಿಗೆ ಎಂಬುದನ್ನು ಹೈಕಮಾಂಡ್ ನಿರ್ಧರಿಸಲಿದೆ ಎಂದು ಮಹದೇವಪ್ಪ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಆಕಾಂಕ್ಷಿಗಳ ಸಂಖ್ಯೆ ಡಜನ್‌ಗಿಂತ ಹೆಚ್ಚು: ಡಾ.ಬಿ.ತಿಪ್ಪೇಸ್ವಾಮಿ ಜೆ.ಜೆ.ಹಟ್ಟಿ, ಬಿ.ಎನ್.ಚಂದ್ರಪ್ಪ, ಜಿ.ಎಸ್.ಮಂಜುನಾಥ್, ವಿನಯಕುಮಾರ್ ತಿಮ್ಮಾಪುರ, ಪಾವಗಡ ಎಸ್.ಟಿ.ಕುಮಾರಸ್ವಾಮಿ, ರಾಮಪ್ಪ, ಹನುಮಂತಪ್ಪ ಗೋಡೆಮನೆ, ಡಿ.ಬಸವರಾಜು, ಓ.ಶಂಕರ್, ಡಿ.ಎನ್.ಮೈಲಾರಪ್ಪ, ಚೌಳೂರು ಪ್ರಕಾಶ್, ನಿರಂಜನಮೂರ್ತಿ, ಕೆಂಚ ಮಲ್ಲಯ್ಯ, ರಾಘವೇಂದ್ರ ನಾಯ್ಕ್ ಸೇರಿ 15ಕ್ಕೂ ಹೆಚ್ಚು ಮಂದಿ ಆಕಾಂಕ್ಷಿಗಳು ಕೈ ಟಿಕೆಟ್‌ಗಾಗಿ ಶಕ್ತಿ ಪ್ರದರ್ಶಿಸಲು ಮುಂದಾದರು.

ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಶಾಸಕರಾದ ಟಿ.ರಘುಮೂರ್ತಿ, ಜಿ.ವಿ.ಗೋವಿಂದಪ್ಪ, ಎನ್.ವೈ.ಗೋಪಾಲಕೃಷ್ಣ, ಮಾಜಿ ಸಚಿವ ಎಚ್.ಆಂಜನೇಯ, ಮಾಜಿ ಶಾಸಕ ಎ.ವಿ.ಉಮಾಪತಿ, ಪಕ್ಷದ ಜಿಲ್ಲಾಧ್ಯಕ್ಷ ಎಂ.ಕೆ.ತಾಜ್‌ಪೀರ್, ಮಹಿಳಾ ಜಿಲ್ಲಾಧ್ಯಕ್ಷೆ ಗೀತಾನಂದಿನಿ ಗೌಡ, ಮುಖಂಡರಾದ ಹನುಮಲಿ ಷಣ್ಮುಖಪ್ಪ, ಶ್ರೀನಿವಾಸ್, ಹಾಲಸ್ವಾಮಿ, ಸಂಪತ್‌ಕುಮಾರ್, ಕೆ.ಸಿ.ನಾಗರಾಜ್, ಎನ್.ಡಿ.ಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net