

ಹಾಸನ: ಲೋಕಸಭೆ ಮತದಾನಕ್ಕೆ ದಿನಗಣನೆ ಶುರುವಾಗಿದ್ದು ಜಿಲ್ಲೆಯಲ್ಲಿ ಪಕ್ಷಾಂತರ ಪರ್ವ ಬಿರುಸುಗೊಂಡಿದೆ.
ಜೆಡಿಎಸ್-ಬಿಜೆಪಿ ಮೈತ್ರಿಯಿಂದ ಬೇಸತ್ತು ಬಿಜೆಪಿ ಮುಖಂಡರು ತಮ್ಮ ಬೆಂಬಲಿಗರ ಜೊತೆ ಕಾಂಗ್ರೆಸ್ ಸೇರಿದರೆ ಜೆಡಿಎಸ್ ಪ್ರತಿತಂತ್ರವಾಗಿ ಕಾಂಗ್ರೆಸ್ ಮುಖಂಡರನ್ನು ತನ್ನತ್ತ ಸೆಳೆಯುತ್ತಿದೆ. ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಚುನಾವಣೆ ಸಮಯದಲ್ಲಿ ಬರುವ ನಾಯಕರಿಂದ ಎಷ್ಟು ಪ್ರಮಾಣದ ಲಾಭವಾಗುತ್ತದೆ ಎಂಬ ಲೆಕ್ಕಾಚಾರವೂ ರಾಜಕೀಯ ವಲಯದಲ್ಲಿ ನಡೆಯುತ್ತಿದೆ.
ನಗರದ ಸಂಸದರ ನಿವಾಸದಲ್ಲಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಸಮ್ಮುಖದಲ್ಲಿ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಕೆ.ರಾಜು ಅವರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ್ದಾರೆ. ಅವರನ್ನು ಪಕ್ಷದ ಶಾಲು ಹಾಕಿ ಪ್ರಜ್ವಲ್ ಬರಮಾಡಿಕೊಂಡರು. ಇನ್ನು ಮಾಜಿ ಶಾಸಕ ಪ್ರೀತಮ್ ಗೌಡ ಬಳಗದಲ್ಲಿ ಗುರುತಿಸಿಕೊಂಡಿದ್ದ ಉದ್ದೂರು ಪುರುಷೋತ್ತಮ್ ಅವರು ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಸಮ್ಮುಖದಲ್ಲಿ ಜೊತೆಗೆ ಕಾಣಿಸಿಕೊಂಡಿದ್ದು ದಳಪತಿಗಳಿಗೆ ಶಾಕ್ ನೀಡಿದ್ದಾರೆ.
2018ರ ವಿಧಾನಸಭೆ ಚುನಾವಣೆ ಬಳಿಕ ಪ್ರೀತಂ ಗೌಡರ ಜೊತೆ ಓಡಾಡಿಕೊಂಡಿದ್ದ ಪುರುಷೋತ್ತಮ್ ಅವರು ಜಿಲ್ಲಾ ಪಂಚಾಯಿತಿ ಸದಸ್ಯ ಸ್ಥಾನದ ಆಕಾಂಕ್ಷಿಯಾಗಿದ್ದರು. ಲೋಕಸಭೆ ಚುನಾವಣೆಯಲ್ಲಿ ಪ್ರೀತಂ ಅವರು ತಟಸ್ಥ ನಿಲುವು ತಾಳಿದ್ದರಿಂದ ಕಾಂಗ್ರೆಸ್‌ಗೆ ತಮ್ಮ ಬೆಂಬಲ ಘೋಷಿಸಿದ್ದಾರೆ. ಸೋಮವಾರದಿಂದ ಶ್ರೇಯಸ್ ಪರ ಪ್ರಚಾರ ಸಹ ಆರಂಭಿಸಿದ್ದಾರೆ.