

ಮೈಸೂರು: ಮುಂಬರುವ ಲೋಕಸಭೆ ಚುನಾವಣೆಗೆ ಜೆಡಿಎಸ್ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಅದಕ್ಕಾಗಿ ಶೀಘ್ರದಲ್ಲೇ ರಾಜ್ಯ ಪ್ರವಾಸ ಆರಂಭಿಸಲಾಗುವುದು ಎಂದು ಶಾಸಕ, ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚಿಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ಗೆ ಸೋಲಾಗಿದೆ. ಆದರೆ ಸೋಲು-ಗೆಲುವು ಹೊಸದಲ್ಲ. ರಾಜ್ಯ ಪ್ರವಾಸ ಮಾಡಿ ಪಕ್ಷ ಕಟ್ಟಬೇಕಿದೆ. ಇದಕ್ಕಾಗಿ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರು 20 ಸದಸ್ಯರ ಕೋರ್ ಕಮಿಟಿ ರಚಿಸಿದ್ದಾರೆ. ನನ್ನ ಅಧ್ಯಕ್ಷತೆಯಲ್ಲೇ ಸಮಿತಿ ಆಗಬೇಕೆಂದು ದೇವೇಗೌಡರು ತೀರ್ಮಾನ ಮಾಡಿದ್ದಾರೆ. ನನ್ನ ಮೇಲೆ ಇಟ್ಟಿರುವ ಪ್ರೀತಿಗಾಗಿ ನಾನು ಧನ್ಯವಾದ ಸಲ್ಲಿಸುತ್ತೇನೆ ಎಂದರು.
ನನ್ನೊಂದಿಗೆ ವೈ.ಎಸ್.ವಿ.ದತ್ತ, ಬಂಡೆಪ್ಪ ಕಾಶಂಪೂರ್ ಕೂಡ ಇರುತ್ತಾರೆ. ಎಚ್.ಡಿ.ದೇವೇಗೌಡರು, ಎಚ್.ಡಿ. ಕುಮಾರಸ್ವಾಮಿ ಹಾಗೂ ಪಕ್ಷದ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಆ. 15ರಂದು ಸಭೆ ನಡೆಯಲಿದ್ದು, ಎಲ್ಲ 20 ಸದಸ್ಯರು ಸೇರಿ ಮುಂದಿನ ಯೋಜನೆ ರೂಪಿಸಲಾಗುವುದು ಎಂದರು.
ಲೋಕಸಭೆ ಚುನಾವಣೆ ಇನ್ನೂ 7-8 ತಿಂಗಳು ಬಾಕಿ ಇದೆ. ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಬೇಕು. ಇದಕ್ಕಾಗಿ ಶೀಘ್ರವೇ ರಾಜ್ಯ ಪ್ರವಾಸ ಮಾಡಲಾಗುವುದು. ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಮಾಡಿದ ಅಭಿವೃದ್ಧಿ ಕಾರ್ಯಗಳು, ಪಂಚರತ್ನ ಯೋಜನೆಯ ಉದ್ದೇಶವನ್ನು ಜನರಿಗೆ ತಿಳಿಸಬೇಕು. ಪಕ್ಷವನ್ನು ಬಲಪಡಿಸಲು ಎಲ್ಲ ರೀತಿಯ ಪ್ರಯತ್ನವನ್ನೂ ಮಾಡಲಾಗುವುದು ಎಂದು ತಿಳಿಸಿದರು.
ಜನರು ಬುದ್ಧಿವಂತರಿದ್ದು, ರಾಜ್ಯದ ಅಧಿಕಾರವನ್ನು ಕಾಂಗ್ರೆಸ್‌ಗೆ ಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ದೇಶದ ಅಧಿಕಾರವನ್ನು ಸಮರ್ಥ ನಾಯಕನ ಕೈಗೆ ಕೊಡಲಿದ್ದಾರೆ. ಮೈತ್ರಿ ಬಗ್ಗೆ ವರಿಷ್ಠರು ತೀರ್ಮಾನ ಮಾಡಲಿದ್ದಾರೆ. ಮೈಸೂರು ಕ್ಷೇತ್ರದ ವಿಷಯವೂ ಅಷ್ಟೇ. ಯಾರು ಅಭ್ಯರ್ಥಿ ಆಗಬೇಕು ಎಂಬುದನ್ನು ವರಿಷ್ಠರು ನಿರ್ಧಾರ ಮಾಡುತ್ತಾರೆ. ಪಕ್ಷ ಸೂಚನೆ ನೀಡಿದರೆ ನಾನೇ ಅಭ್ಯರ್ಥಿ ಆಗಬೇಕಾಗುತ್ತದೆ ಎಂದು ಹೇಳಿದರು.
ಎಚ್.ಡಿ.ಕುಮಾರಸ್ವಾಮಿ ದಾಖಲೆ ಇಲ್ಲದೆ ಯಾವತ್ತೂ ಏನೂ ಹೇಳುವುದಿಲ್ಲ. ಅವರು ಆರೋಪ ಮಾಡಿದ ಕಾರಣ ಎಲ್ಲವೂ ಸರಿ ದಾರಿಗೆ ಬಂತು. ಎಚ್‌ಡಿಕೆ ಹೇಳಿಕೆಯ ಬಳಿಕವೇ ಸಿದ್ದರಾಮಯ್ಯ, ಡಾ.ಜಿ.ಪರಮೇಶ್ವರ ಎಚ್ಚೆತ್ತುಕೊಂಡರು. ಇಲ್ಲಿ ಹಿಟ್ ಆ್ಯಂಡ್ ರನ್ ಪ್ರಶ್ನೆ ಇಲ್ಲ. ಪ್ರತಿಪಕ್ಷದ ಕೆಲಸ ಸರ್ಕಾರದ ತಪ್ಪುಗಳನ್ನು ತಿಳಿಸುವುದು. ಅದನ್ನು ಜೆಡಿಎಸ್ ಮಾಡುತ್ತಿದೆ ಎಂದರು.
ಆಡಳಿತ ಪಕ್ಷದ ಶಾಸಕರಲ್ಲಿ ಖಂಡಿತ ಅಸಮಾಧಾನ ಇದೆ. ಸಾಲ ಮಾಡಿ ಶಾಸಕರು ಗೆದ್ದು ಬಂದಿದ್ದಾರೆ. ಅವರಿಗೆ ಜನರು ಕೆಲಸ ಮಾಡುವಂತೆ ಹೇಳುತ್ತಿದ್ದಾರೆ. ಆದರೆ, ಈ ಸರ್ಕಾರದಲ್ಲಿ ಅಭಿವೃದ್ಧಿ ಕೆಲಸ ಆಗುತ್ತಿಲ್ಲ. ಹೊಸ ಕೆಲಸ ಅಲ್ಲ, ಹಿಂದಿನ ಯೋಜನೆಗಳಿಗೂ ಅನುದಾನ ನೀಡುತ್ತಿಲ್ಲ ಎಂದು ಕಿಡಿಕಾರಿದರು.