

ನಂಜನಗೂಡು: ತಾಲೂಕಿನ ಹುಲ್ಲಹಳ್ಳಿ ಗ್ರಾಮದಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಡಾ.ಬಿ.ಆರ್. ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಮುಂದಿನ ಲೋಕಸಭೆ ಚುನಾವಣೆ ವೇಳೆಗೆ ಕಾಮಗಾರಿ ಮುಕ್ತಾಯಗೊಳ್ಳಲಿದ್ದು, ಭವನವನ್ನು ನಾನೇ ಉದ್ಘಾಟಿಸಲಿದ್ದೇನೆ ಎಂದು ಸಂಸದ ವಿ. ಶ್ರೀನಿವಾಸಪ್ರಸಾದ್ ಹೇಳಿದರು.
1 ಕೋಟಿ ರೂ. ವೆಚ್ಚದಲ್ಲಿ ಡಾ.ಬಿ.ಆರ್. ಅಂಬೇಡ್ಕರ್‌ಭವನ, 5 ಲಕ್ಷ ರೂ. ವೆಚ್ಚದಲ್ಲಿ ಕುರುಹಿನಶೆಟ್ಟರ ಭವನ, ತಾಲೂಕಿನ ಕಪ್ಪಸೋಗೆ ಗ್ರಾಮದಲ್ಲಿ 27 ಲಕ್ಷ ರೂ. ವೆಚ್ಚದಲ್ಲಿ ವಾಲ್ಮೀಕಿಭವನ ನಿರ್ಮಾಣ ಸೇರಿದಂತೆ ಒಟ್ಟು 1.32 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.
ಹೋಬಳಿ ಮಟ್ಟದಲ್ಲಿ ಅತ್ಯಂತ ದೊಡ್ಡದಾದ ಸುಸಜ್ಜಿತ ಭವನ ನಿರ್ಮಿಸಬೇಕೆಂಬ ಸಂಕಲ್ಪದಿಂದ ನನ್ನ ಸಂಸದ ನಿಧಿಯಿಂದ 1 ಕೋಟಿ ರೂ. ಅನುದಾನ ನೀಡಿ ಡಾ.ಬಿ.ಆರ್. ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದರು.
ಹುಲ್ಲಹಳ್ಳಿ-ನಂಜನಗೂಡು ರಸ್ತೆ ಸಂಪೂರ್ಣವಾಗಿ ಹದಗೆಟ್ಟಿತ್ತು. ನಾನು ಕಂದಾಯ ಸಚಿವನಾಗಿದ್ದ ವೇಳೆ ಆಸಕ್ತಿವಹಿಸಿ ಖುದ್ದು ನಿಂತು ರಸ್ತೆ ಅಭಿವೃದ್ಧಿಪಡಿಸಿದ್ದೇನೆ. ಹುಲ್ಲಹಳ್ಳಿ ಮತ್ತು ಹೆಡಿಯಾಲದಲ್ಲಿ ಪದವಿ ಕಾಲೇಜುಗಳನ್ನು ತೆರೆಯಲಾಗಿದೆ. ಸುಸಜ್ಜಿತ ಆಸ್ಪತ್ರೆ, ಅತಿಥಿಗೃಹ ನಿರ್ಮಿಸಲಾಗಿದೆ. ಅಲ್ಲದೆ ಹೆಡಿಯಾಲದಲ್ಲೂ ಸಹ 50 ಲಕ್ಷ ರೂ. ವೆಚ್ಚದಲ್ಲಿ ಅಂಬೇಡ್ಕರ್ ಭವನ ನಿರ್ಮಿಸಲಾಗಿದ್ದು ಮುಂದಿನ ವಾರದಲ್ಲಿ ಉದ್ಘಾಟನೆ ಮಾಡಲಾಗುವುದು. ಹುಲ್ಲಹಳ್ಳಿಯಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ನಾಯಕರ ಸಮುದಾಯಭವನ ನಿರ್ಮಿಸಿಕೊಡಲಾಗಿದೆ ಎಂದು ವಿವರಿಸಿದರು.
ಶಾಸಕ ಬಿ. ಹರ್ಷವರ್ಧನ್, ಬಿಜೆಪಿ ರಾಜ್ಯ ಮುಖಂಡ ಕುಂಬ್ರಳ್ಳಿ ಸುಬ್ಬಣ್ಣ, ಜಿಪಂ ಮಾಜಿ ಸದಸ್ಯ ಸಿ. ಚಿಕ್ಕರಂಗನಾಯಕ, ಬಿಜೆಪಿ ತಾಲೂಕು ಅಧ್ಯಕ್ಷ ಪಿ. ಮಹೇಶ್, ಹುಲ್ಲಹಳ್ಳಿ ಗ್ರಾಪಂ ಅಧ್ಯಕ್ಷ ಮಹೇಶ್, ಸದಸ್ಯರಾದ ಮಲ್ಲಿಕಾರ್ಜುನ, ನಾಗೇಂದ್ರ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೆಂಡಗಣ್ಣಪ್ಪ, ಮುಖಂಡರಾದ ಪರಶಿವಮೂರ್ತಿ, ಮಲ್ಕುಂಡಿ ಪುಟ್ಟಸ್ವಾಮಿ, ಶಿವರುದ್ರ, ಬಸಪ್ಪ, ಸೇರಿದಂತೆ ಪ್ರಮುಖರು ಇದ್ದರು.