ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಏಕಾಂಗಿ ಸ್ಪರ್ಧೆ

ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಏಕಾಂಗಿ ಸ್ಪರ್ಧೆ
Published on

ಹಾಸನ: ಎಲ್ಲಿಯವರೆಗೂ ನಾನು ಉಸಿರಾಡುತ್ತೇನೋ ಅಲ್ಲಿಯವರೆಗೂ ನನ್ನ ಶಕ್ತಿಯನ್ನು ಪಕ್ಷಕ್ಕಾಗಿ ಧಾರೆ ಎರೆದು ಪ್ರಾದೇಶಿಕ ಪಕ್ಷ ಜೆಡಿಎಸ್ ಉಳಿಸಲು ಹೋರಾಡುತ್ತೇನೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಹೇಳಿದರು.

ನಗರದ ಸಂಸದರ ಮನೆಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಾದೇಶಿಕ ಉಳಿಸಲು 45 ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿದ್ದೇನೆ. ನನ್ನ ಕೈ-ಕಾಲು ಗಟ್ಟಿ ಇರುವವರೆಗೂ ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆ. ಪಕ್ಷವನ್ನು ಸಂಘಟಿಸುತ್ತೇನೆ ಎಂದರು.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಈಗಾಗಲೇ ಶಾಸಕ ಜಿ.ಟಿ. ದೇವೇಗೌಡರ ನೇತೃತ್ವದಲ್ಲಿ ಕೋರ್ ಕಮಿಟಿ ರಚಿಸಲಾಗಿದ್ದು, ಅವರು ಸಭೆ ನಡೆಸುವುದರ ಜತೆಗೆ ರಾಜ್ಯಾದ್ಯಂತ ಪ್ರವಾಸ ಮಾಡಲಿದ್ದಾರೆ. ನಮ್ಮ ಪಕ್ಷದಿಂದ ಒಬ್ಬ ಕಾರ್ಯಕರ್ತ ಕೂಡ ಪಕ್ಷ ಬಿಟ್ಟು ಹೋಗುವುದಿಲ್ಲ. ಅವರೆಲ್ಲರಿಗೂ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಲಾಗುವುದು ಎಂದು ಹೇಳಿದರು.

ಎಚ್.ಡಿ. ಕುಮಾರಸ್ವಾಮಿ ಅವರು ಈ ಹಿಂದೆ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಮಹಾಮೈತ್ರಿ ರಚನೆ ಮಾಡಲಾಗಿತ್ತು. ಈಗ ಐಎನ್‌ಡಿಐಎ ರಚನೆ ಮಾಡಿಕೊಂಡಿರುವ ಹಲವು ನಾಯಕರು ಆಗಮಿಸಿದ್ದರು. ಆದರೆ ನಮ್ಮನ್ನು ಹೊರಗಿಟ್ಟು ಸಭೆ ನಡೆಸುತ್ತಿದ್ದಾರೆ. ಆಗಿನ ಪರಿಸ್ಥಿತಿ ಬೇರೆ ಇತ್ತು. ಆದರೆ ಈಗ ರಾಜ್ಯದಲ್ಲಿ ಅಧಿಕಾರದಲ್ಲಿರುವ ಸರ್ಕಾರದ ನಿಲುವು ಬೇರೆಯಾಗಿದೆ ಎಂದರು.

ಐಎನ್‌ಡಿಐಎ ಒಕ್ಕೂಟ ರಚನೆ ಮಾಡಿಕೊಂಡು ದೇಶದಲ್ಲಿರುವ ಅಸ್ಥಿರತೆಗೆ ಪರ್ಯಾಯವಾಗಿ ಹೊಸ ವ್ಯವಸ್ಥೆ ಮಾಡಲು ಹೊರಟಿದ್ದಾರೆ. ಇದರಿಂದ ಸುಭದ್ರ ಸರ್ಕಾರ ಕೊಡಲು ಐಕ್ಯತೆಯಿಂದ ಹೋರಾಟ ಮಾಡುತ್ತೇವೆ ಎಂದು ಹೇಳಿದ್ದಾರೆ. ಇದು ಯಶಸ್ವಿಯಾದರೆ ತುಂಬಾ ಸಂತೋಷ ಎಂದರು.

ರಾಜ್ಯ ಬಿಜೆಪಿಗೆ ಸಾರಥಿ ಯಾರು?

ನಾನು ಕರ್ನಾಟಕ ಬಿಟ್ಟು ಎಲ್ಲಿಯೂ ಹೋಗಿಲ್ಲ. ಪಕ್ಷವನ್ನು ಉಳಿಸಿಕೊಳ್ಳಬೇಕಾದರೆ ಮುಂದಿನ ದಿನಗಳಲ್ಲಿ ಕೆಲ ಆಯ್ದ ಜಿಲ್ಲೆಗಳಲ್ಲಿ ಹೆಚ್ಚು ಗಮನಹರಿಸಿ ಪ್ರವಾಸ ಮಾಡಲಾಗುವುದು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಏಕಾಂಗಿಯಾಗಿ ಸ್ಪರ್ಧೆ ಮಾಡಲಿದೆ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ- ಜೆಡಿಎಸ್ ಮೈತ್ರಿ ಮಾಡಿಕೊಳ್ಳುತ್ತಿದೆ ಎಂಬ ಹೇಳಿಕೆ ನೀಡುತ್ತಿದ್ದಾರೆ. ಆದರೆ ಬಿಜೆಪಿ ಇದುವರೆಗೂ ರಾಜ್ಯದಲ್ಲಿ ಒಬ್ಬ ನಾಯಕನನ್ನು ಆಯ್ಕೆ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಇಂತಹ ಸಂದರ್ಭದಲ್ಲಿ ನಾವು ಯಾರ ಜೊತೆ ಮಾತನಾಡಲು ಸಾಧ್ಯ ಎಂದು ದೇವೇಗೌಡರು ಹೇಳಿದರು.

ಜೆಡಿಎಸ್ ಏಕಾಂಗಿಯಾಗಿ ಹೋರಾಟ ನಡೆಸುತ್ತಿದೆ. ಆದರೆ ಬಿಜೆಪಿ ವಿಪಕ್ಷ ನಾಯಕನನ್ನು ಆಯ್ಕೆ ಮಾಡಿಲ್ಲ. ಆ ಪಕ್ಷದ ಅಧ್ಯಕ್ಷರು ಯಾರು ಎಂಬುದೂ ತಿಳಿದಿಲ್ಲ. ರಾಜ್ಯದವರ ಜತೆ ಮಾತನಾಡದೆ ಕೇಂದ್ರದವರ ಜತೆ ಮಾತನಾಡಲು ಸಾಧ್ಯವೇ? ಅವರಲ್ಲೇ ಒಗ್ಗಟ್ಟಿಲ್ಲ ಎಂದರು.

ತನಿಖೆ ನಡೆಸಲಿ

ಕಳೆದ ಮೂರು ತಿಂಗಳಿನಿಂದ ಬಿಜೆಪಿಯ ಎಲ್ಲಾ ಅಕ್ರಮಗಳನ್ನು ತನಿಖೆ ಮಾಡುತ್ತೇವೆ ಎಂದು ಪ್ರತಿದಿನ ತಮಟೆ ಹೊಡೆಯುತ್ತಿದ್ದರು. ಈಗ ಅಧಿಕಾರಕ್ಕೆ ಬಂದಿದ್ದಾರೆ. ಈಗ ಅವರನ್ನು ಯಾರಾದರೂ ಹಿಡಿದುಕೊಂಡಿದ್ದಾರೆಯೇ? ಕಾರ್ಪೊರೇಷನ್‌ನಲ್ಲಿ ಸಾಕಷ್ಟು ಅವ್ಯವಹಾರ ನಡೆದಿದೆ. ಇದರ ಬಗ್ಗೆ ತನಿಖೆ ಮಾಡುತ್ತೇವೆ ಎಂದು ಹೇಳಿದ ಸಿದ್ದರಾಮಯ್ಯ ಈಗ ಏಕೆ ಮೌನವಾಗಿದ್ದಾರೆ ಎಂದು ಪ್ರಶ್ನಿಸಿದರು.

ಅಧಿಕಾರಿಗಳಿಗೆ ನೀರಾವರಿ ಮಂತ್ರಿ ಬೆದರಿಕೆ

ನೀರಾವರಿ ಇಲಾಖೆಯ ಯಾವುದೇ ಮಾಹಿತಿಗಳನ್ನು ನೀಡಬಾರದು ಎಂದು ಅಧಿಕಾರಿಗಳಿಗೆ ಮಂತ್ರಿಗಳು ಬೆದರಿಕೆ ಹಾಕಿದ್ದಾರೆ. ಆದ್ದರಿಂದ ಯಾವುದೇ ಮಾಹಿತಿಯನ್ನು ಅಧಿಕಾರಿಗಳು ನೀಡುತ್ತಿಲ್ಲ ಎಂದು ಗೌಡರು ಆಕ್ರೋಶ ವ್ಯಕ್ತಪಡಿಸಿದರು.

ನಾನು ದೂರವಾಣಿ ಕರೆ ಮಾಡಿ ಅಧಿಕಾರಿಗಳಿಗೆ ರಾಜ್ಯದ ಎಲ್ಲಾ ಜಲಾಶಯಗಳ ನೀರಿನ ಮಟ್ಟ ಒಳಹರಿವು ಹೊರಹರಿವು ಸಂಗ್ರಹದ ಬಗ್ಗೆ ಮಾಹಿತಿ ಕೇಳಿದರೆ ಮಾಹಿತಿಯನ್ನು ಯಾರಿಗೂ ನೀಡದಂತೆ ಸಚಿವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎಂದು ಹೇಳುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಎಲ್ಲ ಎಂದು ಡಿಕೆ ಶಿವಕುಮಾರ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಸುಪ್ರೀಂನಲ್ಲಿ ಮೇಲ್ಮನವಿ

ಪ್ರಜ್ವಲ್ ರೇವಣ್ಣ ಅವರ ಸಂಸದ ಸ್ಥಾನವನ್ನು ಹೈಕೋರ್ಟ್ ಅಸಿಂಧುಗೊಳಿಸಿ ಆದೇಶ ನೀಡಿದೆ. ಇದರಲ್ಲಿ ಮುಚ್ಚುಮರೆ ಏನು ಇಲ್ಲ. ಈ ಆದೇಶ ಪ್ರಶ್ನೆ ಮಾಡಿ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಎಚ್.ಡಿ. ದೇವೇಗೌಡರು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net