

ಹಾಸನ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಆರು ತಿಂಗಳಲ್ಲಿ ಒಂದೊಂದೇ ಧ್ವನಿಗಳು ಹೊರಬರುತ್ತವೆ ಲೋಕಸಭಾ ಚುನಾವಣೆ ಮುಗಿದ ಬಳಿಕ ಮಹಾರಾಷ್ಟ್ರದಲ್ಲಿ ಆದಂತಹ ಘಟನೆ ರಾಜ್ಯದಲ್ಲಿಯೂ ಕೂಡ ಪುನರಾವರ್ತನೆಯಾಗುವ ಸಾಧ್ಯತೆಗಳಿವೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಭವಿಷ್ಯನುಡಿದರು ನುಡಿದರು.
ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿ.ಕೆ.ಹರಿಪ್ರಸಾದ್ ಅವರು ತಮ್ಮ ಅಸಮಾಧಾನವನ್ನು ಹೊರ ಹಾಕುತ್ತಿದ್ದಾರೆ. ಇದೇ ರೀತಿ ಹಲವು ನಾಯಕರು ಲೋಕಸಭಾ ಚುನಾವಣೆ ಮುಗಿದ ಬಳಿಕ ಪಕ್ಷದ ವಿರುದ್ಧವೇ ತಿರುಗಿ ಬೀಳಲಿದ್ದಾರೆ. ಸರ್ಕಾರ ಏನಾಗಲಿದೆ ಎಂಬುದು ಮುಂದೆ ತಿಳಿಯಲಿದೆ ಎಂದು ಮಾರ್ಮಿಕವಾಗಿ ನುಡಿದರು.
ನಾನು ಸರ್ಕಾರದ ವಿರುದ್ಧ ಮಾಡಿರುವ ಆರೋಪದಿಂದ ಹಿಂದೆ ಸರಿಯುವುದಿಲ್ಲ. ದಾಖಲೆಯನ್ನು ಇಟ್ಟುಕೊಂಡು ಮಾತನಾಡುತ್ತೇನೆ. ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ರಾಜ್ಯದ ಅಭಿವೃದ್ಧಿ ಮತ್ತು ಉತ್ತರ ಕರ್ನಾಟಕದ ಭಾಗಕ್ಕೆ ಆದ್ಯತೆ,ಬರಗಾಲದ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಮುಂದೆ ಬೆಂಗಳೂರಿನಲ್ಲಿ ನಡೆಯುವ ಅಧಿವೇಶನದಲ್ಲಿ ಈ ಬಗ್ಗೆ ಸಾಕ್ಷಿ ಸಮೇತ ಮಾತನಾಡುತ್ತೇನೆ. ನಾನು ಪಲಾಯನ ಮಾಡುವುದಿಲ್ಲ ಎಂದರು.
ಕಾಡಾನೆಗಳ ಕಾದಾಟದಲ್ಲಿ ಅರ್ಜುನ ಆನೆ ವೀರ ಮರಣವನ್ನಪ್ಪಿರುವುದು ದುರದೃಷ್ಟಕರ ಸಂಗತಿ. ಆ ಆನೆಯನ್ನು ಮಾವುತರು ಮನೆಯ ಮಗುವಿನ ರೀತಿ ನೋಡುತ್ತಿದ್ದರು. ಮೊದಲೆ ಮುಂಜಾಗ್ರತಾ ಕ್ರಮ ತೆಗೆದುಕೊಂಡಿದ್ದರೆ ಆನೆ ಜೀವಂತ ಇರುತ್ತಿತ್ತು ಎಂದು ಹೇಳಿದರು.
ಸಿದ್ದು ವಿರುದ್ಧ ಎಚ್ಡಿಕೆ ಆಕ್ರೋಶ:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಹಸಪಟ್ಟು ಎರಡನೇ ಬಾರಿಗೆ ಮುಖ್ಯಮಂತ್ರಿ ಆಗಿರುವ ಇವರು ರಾಜ್ಯದ ಅಭಿವೃದ್ಧಿ ಮಾಡುವ ಬದಲು ಜಾತಿ ಜಾತಿಗಳ ನಡುವೆ ಸಂಘರ್ಷ ಉಂಟು ಮಾಡಿ, ಸಮಾಜವನ್ನು ಎತ್ತು ಕಟ್ಟುವ ಕೆಲಸವನ್ನು ಮಾಡುತ್ತಿದ್ದಾರೆ. ಒಂದು ಸಮಾಜವನ್ನು ಓಲೈಕೆ ಮಾಡುವ ಉದ್ದೇಶದಿಂದ ಜನರಲ್ಲಿ ಕೆಟ್ಟ ರೀತಿಯ ಭಾವನೆಯನ್ನು ಸೃಷ್ಟಿ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯಮಂತ್ರಿಗಳಿಗೆ ಜಾತಿ ಗಣತಿ ಮುಖ್ಯವಾಗಿದೆ. ಅದರ ಬದಲು ದೇಶ ಮತ್ತು ರಾಜ್ಯದ ಅಭಿವೃದ್ಧಿಗಾಗಿ ಆರ್ಧಿಕ ಮತ್ತು ಶೈಕ್ಷಣಿಕ ಸಮೀಕ್ಷೆಗಳನ್ನ ನಡೆಸಲಿ ಜಾತಿ ಜನಗಣತಿ ಮಾಡಿ ಜಾತಿಗಳ ನಡುವೆ ವಿಷ ಬೀಜ ಬಿತ್ತುವ ಕೆಲಸವನ್ನ ಯಾರು ಮಾಡಬಾರದು ಎಂದು ವಾಗ್ದಾಳಿ ನಡೆಸಿದರು.
ಅಪವಾದವನ್ನ ತೊಳೆಯುತ್ತೇವೆ:
ರಾಜ್ಯದಲ್ಲಿ ಕಾಂಗ್ರೆಸ್, ಬಿಜೆಪಿ ಅತೀ ಹೆಚ್ಚು ಲೋಕಸಭಾ ಸ್ಥಾನಗಳನ್ನು ಗೆದ್ದು ಕೇಂದ್ರದ ನಾಯಕರ ಮುಂದೆ ಕೈಕಟ್ಟಿ ನಿಲ್ಲುತ್ತಾರೆ, ರಾಜ್ಯದ ಅಭಿವೃದ್ಧಿಗೆ ಸ್ಪಂದಿಸುವುದಿಲ್ಲ ಎಂಬ ಅಪವಾದ ಇದೆ. ಇದನ್ನ ನಾವು ತೊಳೆಯುವ ಕೆಲಸವನ್ನ ಮಾಡುತ್ತೇವೆ. ಮೈತ್ರಿ ಮಾಡಿಕೊಂಡಿದ್ದರೂ ಕೂಡ ರಾಜ್ಯದ ಪರವಾಗಿ ಧ್ವನಿ ಎತ್ತಿ ಕೇಂದ್ರದ ಕಣ್ಣು ತೆರೆಸುವ ಕೆಲಸವನ್ನ ಮಾಡುತ್ತೇವೆ ನಮಗೆ ಅವಕಾಶ ಮಾಡಿಕೊಡಿ ಎಂದು ಎಚ್ಡಿಕೆ ಮನವಿ ಮಾಡಿದರು.
ಅಧಿಕಾರಕ್ಕಾಗಿ ನಾವು ಮೈತ್ರಿ ಮಾಡಿಕೊಂಡಿಲ್ಲ, ಮೈತ್ರಿ ವಿಚಾರ ಅಂತಿಮಗೊಂಡಿದ್ದು, ಡಿಸೆಂಬರ್ ಅಂತ್ಯದ ವೇಳೆಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ನೇತೃತ್ವದಲ್ಲಿ ಅವರ ಗೌರವಕ್ಕೆ ದಕ್ಕೆ ತರದ ರೀತಿಯಲ್ಲಿ ಟಿಕೆಟ್ ಹಂಚಿಕೆ ಮಾಡಲಾಗುವುದು ಎಂದು ಹೇಳಿದರು.
ಎಚ್.ಡಿ.ಕೆ.ಹೊಸ ಬಾಂಬ್!:
ಕಾಂಗ್ರೆಸ್‌ನ ನಾಯಕರೊಬ್ಬರು 50 ಜನರನ್ನು ಕರೆದುಕೊಂಡು ಬರುವುದಾಗಿ ಕೇಂದ್ರದ ಬಿಜೆಪಿ ನಾಯಕರ ಬಳಿ ಹೋಗಿದ್ದ ಮಾಹಿತಿ ಇದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದರು. 50 ಜನರನ್ನು ಕರೆದುಕೊಂಡು ಸಣ್ಣಪುಟ್ಟವರು ಬಿಜೆಪಿ ನಾಯಕರ ಬಳಿಗೆ ಹೋಗಲು ಆಗುತ್ತದೆಯೇ? ಐದಾರು ತಿಂಗಳು ರಿಲೀಫ್ ಕೊಡಿ ಎಂದು ಕೇಂದ್ರದ ಬಿಜೆಪಿ ನಾಯಕರ ಬಳಿಗೆ ಹೋಗಿದ್ದಾರೆ ಎಂದು ಆರೋಪಿಸಿದರು.
ಮಾಡಿರುವ ಅಕ್ರಮಗಳನ್ನು ಸರಿಪಡಿಸಿಕೊಳ್ಳಲು ಹೋಗಿರುವ ಮಾಹಿತಿ ಇದೆ. ಬಿಜೆಪಿ ನಾಯಕರ ಬಳಿ ವ್ಯಾಪಾರ ಮಾಡಲು ಹೋಗಿದ್ದಾರೆ ಎಂದು ಯಾರ ಹೆಸರನ್ನೂ ಪ್ರಸ್ತಾಪಿಸದೆ ಕುಮಾರಸ್ವಾಮಿ ಆರೋಪ ಮಾಡಿದರು.