

ಶ್ರೀರಂಗಪಟ್ಟಣ: ಗುರುವಾರ ರಾತ್ರಿ ಸುರಿದ ಭಾರಿ ಮಳೆಗೆ ಚಿಂದಗಿರಿಕೊಪ್ಪಲು ಗ್ರಾಮದ ಲೋಕಪಾವನಿ ನದಿ ಪ್ರವಾಹದಿಂದ ಉಕ್ಕಿ ಹರಿದಿದ್ದು, ರೈತರು ಬೆಳೆದಿದ್ದ ಬೆಳೆಗಳು ಹಾಳಾಗಿವೆ.
ಮೂರ‌್ನಾಲ್ಕು ದಿನಗಳಿಂದ ಎಡಬಿಡದೆ ಸುರಿದ ನಿರಂತರ ಮಳೆಗೆ ಹಿರೋಡೆ ಕೆರೆ ಕೋಡಿ ಒಡೆದಿದ್ದು, ಇದರೊಂದಿಗೆ ಗುರುವಾರ ರಾತ್ರಿ ಪೂರ ಸುರಿದ ರಣಮಳೆಗೆ ಸಣ್ಣ-ಪುಟ್ಟ ಹಳ್ಳಗಳ ಮಳೆ ನೀರು ಲೋಕಪಾವನಿ ನದಿಗೆ ಸೇರಿ ಅಪಾಯ ಮಟ್ಟ ಮೀರಿ ಉಕ್ಕಿ ಹರಿದಿದೆ. ಪರಿಣಾಮ ಚಿಂದಗಿರಿಕೊಪ್ಪಲು ಮತ್ತು ಬಲ್ಲೇನಹಳ್ಳಿ ವ್ಯಾಪ್ತಿಯ ರೈತರು ಬೆಳೆದಿದ್ದ ಕಬ್ಬು, ಬಾಳೆ, ಅಡಕೆ, ತೆಂಗು ಹಾಗೂ ತರಕಾರಿ ತೋಟಗಳು ಫಲವತ್ತಾದ ಮಣ್ಣಿನ ಸಮೇತ ಕೊಚ್ಚಿಹೋಗಿದೆ. ಪ್ರಮುಖವಾಗಿ ಎಂ.ಶೆಟ್ಟಹಳ್ಳಿ ಹಾಗೂ ಸಬ್ಬನಕುಪ್ಪೆ ಗ್ರಾಮ ವ್ಯಾಪ್ತಿಯಲ್ಲಿ 5 ಹೆಕ್ಟೇರ್ ಪ್ರದೇಶದಲ್ಲಿದ್ದ ಕಬ್ಬು-ಭತ್ತ ಬೆಳೆಗಳು ಸಂಪೂರ್ಣ ನಾಶವಾಗಿದೆ.
ಚಿಂದಗಿರಿಕೊಪ್ಪಲು, ಬಲ್ಲೇನಹಳ್ಳಿ ಹಾಗೂ ಸಬ್ಬನಕುಪ್ಪೆಗೆ ಸಂಪರ್ಕ ಕಲ್ಪಿಸುವ ಲೋಕಪಾವನಿ ಸೇತುವೆ ನೀರಿನಿಂದ ಸಂಪೂರ್ಣ ಮುಳುಗಡೆಯಾಗಿದ್ದು, ಜನರಲ್ಲಿ ಆತಂಕ ಸೃಷ್ಟಿಸಿದೆ.