

ಹಾಸನ: ನಗರದ ಎಸ್‌ಪಿ ಕಚೇರಿ ಎದುರು ಮುಖ್ಯಪೇದೆ ಲೋಕನಾಥ್ ತನ್ನ ಪತ್ನಿಯನ್ನು ಕೊಲೆ ಮಾಡಿದ ಹಿನ್ನಲೆಯಲ್ಲಿ ಮೃತ ಮಮತಾ ಪೋಷಕರು ಲೋಕನಾಥ್ ಮನೆಯ ಮುಂದೆ ಶವವನ್ನು ಇಟ್ಟು ಆಕ್ರೋಶ ವ್ಯಕ್ತಪಡಿಸಿದರು.
ನಗರದ ಹೊಯ್ಸಳ ನಗರದಲ್ಲಿರುವ ಮನೆ ಮುಂದೆ ಶವವಿಟ್ಟು ಪೊಜೆ ಸಲ್ಲಿಸಿದರು.ತನ್ನ ಮಗಳನ್ನು ಕೊಲೆ ಮಾಡಿದ ಲೋಕನಾಥ್ ಮತ್ತು ತಂದೆ, ತಾಯಿಯನ್ನೂ ಬಂಧಿಸುವಂತೆ ಆಗ್ರಹಿಸಿದರು. ಲೋಕನಾಥ್‌ಗೆ ಅಕ್ರಮ ಸಂಬಂಧ ಹೊಂದಿರುವ ಮಹಿಳೆಯನ್ನೂ ಬಂಧಿಸಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಲೋಕನಾಥ್ ಹಾಗೂ ಮನೆಯವರು ಚಿನ್ನಾಭರಣಕ್ಕಾಗಿ ಪೀಡಿಸುತ್ತಿದ್ದುದರಿಂದ ಮಮತಾಳ ಮೃತದೇಹದ ಮೇಲೆ ಆಭರಣ ಇಟ್ಟು ಸಿಟ್ಟು ಹೊರ ಹಾಕಿದರು. ಈ ವೇಳೆ ಮನೆ ಒಡತಿ ಕಳೆದುಕೊಂಡು ರೋದಿಸುತ್ತಿದ್ದ ನಾಯಿಯನ್ನು ಮಮತಾ ಅವರ ಹಿರಿಯ ಪುತ್ರ ಸಂಯಮ್ ಸಮಾಧಾನಪಡಿಸಿದ. ಅಲ್ಲದೆ ಮಮತಾ ಅವರ ಸಹೋದರನ ಪತ್ನಿ ಶವ ನೋಡಲು ಅಡ್ಡಿ ಪಡಿಸಿದ ಸಂಯಮ್, ನೀನು ಇಲ್ಲಿಗೆ ಬರಬೇಡ ಹೋಗು ಎಂದು ಕಳಿಸಿದ. ಮುನ್ನೆಚ್ಚರಿಕೆಯಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಲೋಕನಾಥ್ ಬೇರೊಬ್ಬಳೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ. ಇದು ಗೊತ್ತಾಗಿ ಮಮತಾ ಪ್ರಶ್ನೆ ಮಾಡಿದ್ದರಿಂದ ಕೊಲೆ ಮಾಡಿದ್ದಾನೆ ಎಂದು ಮೃತೆ ಸಂಬಂಧಿಕರು ದೂರಿದ್ದಾರೆ.
ಲೋಕನಾಥ್ ಮತ್ತು ಮಮತಾ ಬೇರೆ ಜಾತಿಯವರಾದರೂ 17 ವರ್ಷಗಳ ಹಿಂದೆ ಪರಸ್ಪರ ಪ್ರೀತಿಸಿ ರಿಜಿಸ್ಟರ್ ಮದುವೆ ಮಾಡಿಕೊಂಡಿದ್ದರು. ಮದುವೆಯಾದ ಒಂದೇ ವರ್ಷದಲ್ಲಿ ನಾನು ಲಿಂಗಾಯತ, ನೀವು ಒಕ್ಕಲಿಗರು, ಇದೇ ಕಾರಣಕ್ಕೆ ನಮ್ಮ ಮನೆಯವರು ಮಾತನಾಡಿಸುತ್ತಿಲ್ಲ ಎಂದು ಲೋಕನಾಥ್ ತಗಾದೆ ತೆಗೆದಿದ್ದನಂತೆ.ಅಲ್ಲದೆ ಮುಂದೆ ನೀನು ಚೆನ್ನಾಗಿರಬೇಕು ಎಂದರೆ ಇನ್ನೂ ಹೆಚ್ಚಿನ ವರದಕ್ಷಿಣೆ ಹಾಗೂ ಚಿನ್ನ ತೆಗೆದುಕೊಂಡು ಬರಬೇಕು ಎಂದು ತಾಕೀತು ಮಾಡಿದ್ದ ಎಂದು ಮಮತಾ ಮನೆಯವರು ಆರೋಪಿಸಿದ್ದಾರೆ.
ಇಲ್ಲವಾದರೇ ನೀನು ನನ್ನ ಜೊತೆ ವಿವಾಹ ಸಂಬಂಧ ಮುರಿದುಕೊಂಡು ಹೋಗಬೇಕಾಗುತ್ತದೆ ಎಂದು ಮಗಳಿಗೆ ಹಿಂಸೆ ಕೊಡುತ್ತಿದ್ದ. ಈ ವಿಚಾರವನ್ನು ಮಗಳು ನಮಗೆ ತಿಳಿಸಿದ್ದಳು. ಬಳಿಕ ಸಂಬಂಧಿಕರ ಮೂಲಕ ಲೋಕನಾಥ್ ತಂದೆಗೆ ಪಂಚಾಯಿತಿದಾರರ ತಿರ್ಮಾನದಂತೆ 10 ಲಕ್ಷ ಹಣ ಮತ್ತು 500 ಗ್ರಾಂ ಚಿನ್ನ ಕೊಡಲು ಒಪ್ಪಿದ್ದೆವು. 1 ತಿಂಗಳು ಬಿಟ್ಟು 500 ಗ್ರಾಂ ಚಿನ್ನ ಕೊಟ್ಟೆವು, ಉಳಿದ 10 ಲಕ್ಷ ಹಣವನ್ನು 6 ತಿಂಗಳು ಬಿಟ್ಟು ಕೊಟ್ಟಿದ್ದೆವು.
ಇದಾದ ಬಳಿಕ, 2-3 ವರ್ಷಗಳಿಂದ ಲೋಕನಾಥಗೆ ಬೇರೊಬ್ಬರೊಂದಿಗೆ ಅನೈತಿಕ ಸಂಬಂಧ ಇರುವುದು ಮಮತಾಗೆ ಗೊತ್ತಾಗಿ ಇದನ್ನು ತಂದೆ ಶ್ಯಾಮಣ್ಣಗೆ ತಿಳಿಸಿದ್ದಳು. ನಂತರ ತಂದೆ ಹಾಗೂ ಹಿರಿಯ ಮಗಳು ಮಧು ಸೇರಿ ಬೇರೊಬ್ಬ ಮಹಿಳೆಯ ಸಹವಾಸ ಬಿಟ್ಟು ಬಿಡು ಎಂದಾಗ ನಿಮ್ಮ ಮಗಳನ್ನು ಬಿಟ್ಟು ಬಿಡುತ್ತೇನೆ, ಆದರೆ ಅವಳ ಸಹವಾಸ ಬಿಡುವುದಿಲ್ಲ ಎಂದು ಲೋಕನಾಥ್ ಹೇಳಿದ್ದ. ಇನ್ನೊಂದು ಸಲ ಈ ವಿಚಾರವಾಗಿ ಮಾತನಾಡಿದರೆ ನಿನ್ನ ಮಗಳನ್ನು ಸಾಯಿಸಿ ನಾನು ಇಟ್ಟುಕೊಂಡಿರುವವಳನ್ನೇ ಮದುವೆ ಆಗುವೆ ಎಂದು ಗರಿಸಿದ್ದ ಎಂದು ದೂರಿದ್ದಾರೆ.
ಜೂ.30 ರಂದು ಜಗಳ:
ಪತ್ನಿ ಕೊಲೆ ಮಾಡಿದ ಮುನ್ನಾದಿನ ದಿನ ರಾತ್ರಿ ಮನೆಗೆ ಬಂದ ಲೋಕನಾಥ್, ನನ್ನ ಅನೈತಿಕ ಸಂಬಂಧದ ಬಗ್ಗೆ ಎಲ್ಲಾ ಕಡೆ ಮಾತನಾಡುತ್ತೀಯಾ, ನೀನು ನಿಮ್ಮ ತಂದೆಯ ಆಸ್ತಿಯಲ್ಲಿ ಪಾಲು ಕೇಳು ಎಂದು ಹಾಕಿಸಿರುವ ಕೇಸಿನಲ್ಲಿ ಇನ್ನೂ ಯಾವುದೇ ತೀರ್ಮಾನ ಮಾಡಿಕೊಂಡಿಲ್ಲ, ನೀನು ನಾನು ಹಾಕಿಸಿರುವ ಕೇಸನ್ನು ಬೇಗ ತಿರ್ಮಾನ ಮಾಡಿಸು ಇಲ್ಲವಾದರೇ ನೀನು ತಂದೆಯ ಮನೆಗೆ ಹೋಗು ಎಂದು ಮೊಮ್ಮಕ್ಕಳ ಮುಂದೆಯೇ ಪತ್ನಿಗೆ ಹಲ್ಲೆಗೆ ಪ್ರಯತ್ನಿಸಿದ್ದ ಎಂದಿದ್ದಾರೆ.
ಇದೇ ಕಾರಣಕ್ಕೆ ಸೋಮವಾರ ಮಮತಾ ಹಾಗೂ ಸಹೋದರ ಪ್ರದೀಪ ಎಸ್‌ಪಿ ಅವರಿಗೆ ದೂರು ಕೊಡಲು ಬಂದಾಗ ಹಿಂಬಾಲಿಸಿ ಬಂದು ಇರಿದು ಕೊಂದಿದ್ದಾನೆ. ಅಳಿಯ ಲೋಕನಾಥ ನೀಡಿದ ವರದಕ್ಷಿಣೆ ಮತ್ತು ಆಸ್ತಿಗಾಗಿ ನೀಡಿದ ಹಿಂಸೆ, ಇದಕ್ಕೆ ಲೋಕನಾಥ್ ತಂದೆ ಧರ್ಮಪ್ಪ, ತಾಯಿ ಕಾವೇರಿ, ನಳಿನಿ ಎಂಬುವರ ಮೇಲೆ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ.