ಲೋಕಜ್ಞಾನದ ಪ್ರಸಾರಕರ ಅಂತರಂಗ

Published on

ಚಾಮರಾಜನಗರ: ಸರ್ಕಾರಗಳು ಮತ್ತು ರಾಜಕೀಯದ ಆಗು-ಹೋಗುಗಳನ್ನು ಸಾರ್ವಜನಿಕರಿಗೆ ಮುಟ್ಟಿಸುವಲ್ಲಿ ಪತ್ರಿಕಾ ವಿತರಕರ ಪಾತ್ರ ಅತ್ಯಂತ ಪ್ರಮುಖವಾಗಿದೆ.

ಸೆ.4 ಪತ್ರಿಕಾ ವಿತರಕರ ದಿನಾಚರಣೆಯಾಗಿದ್ದು, ಚಳಿ, ಗಾಳಿ ಎನ್ನದೆ ಅವಿರತವಾಗಿ ದುಡಿಯುತ್ತಿರುವ ಈ ಕಾಯಕ ಜೀವಿಗಳನ್ನು ನೆನೆಯುವ ದಿನವಾಗಿದೆ. ಆದರೆ ಇಂತಹ ಸ್ವಾಭಿಮಾನಿ ವಿತರಕರಿಗೆ ಸೌಲಭ್ಯಗಳು ಸಿಗುತ್ತಿಲ್ಲವೆಂಬ ಕೊರಗು ಯಾವಾಗಲೂ ಕೇಳಿಬರುತ್ತಲೇ ಇದೆ. ಹಿಂದೊಮ್ಮೆ ಪತ್ರಿಕಾ ವಿತರಕರನ್ನು ಅಸಂಘಟಿತ ವಲಯಕ್ಕೆ ಸೇರಿಸಿದ್ದು ಬಿಟ್ಟರೆ, ಹೆಚ್ಚಿನ ಸೌಕರ್ಯ ಒದಗಿಸಿಲ್ಲವೆನ್ನುವುದು ಬೇಸರದ ಸಂಗತಿಯಾಗಿದೆ. ಮುಂಜಾನೆಯೇ ಎದ್ದು ಮನೆ ಮನೆಗಳಿಗೆ ಪತ್ರಿಕೆ ಹಂಚುತ್ತಿರುವ ವಿತರಕರಿಗೆ ಜೀವನ ಭದ್ರತೆ ಇಲ್ಲ. ಕನ್ನಡ ಶಾಲೆಗಳು ಮುಚ್ಚುತ್ತಿವೆ. ಆಂಗ್ಲ ವ್ಯಾಮೋಹ ಹೆಚ್ಚುತ್ತಿದೆ. ಇಂತಹ ದಿನಗಳಲ್ಲಿ ಕನ್ನಡ ಪತ್ರಿಕೆಗಳನ್ನು ಓದುಗರ ಕೈಗೆ ಇಡುತ್ತಿರುವ ವಿತರಕರು ಕನ್ನಡಕ್ಕಾಗಿ ದುಡಿಯುತ್ತಿರುವವರು. ಆದರೆ ಸರ್ಕಾರದಿಂದ ಸೌಲಭ್ಯಗಳು ಸಿಗದೆ ಇವರ ಬದುಕು ಮಾತ್ರ ಕಲ್ಪವೃಕ್ಷವಾಗುತ್ತಿಲ್ಲ.

ಇವರಿಗೆ ಆರೋಗ್ಯ ವಿಮೆ, ಮಕ್ಕಳ ಶಿಕ್ಷಣಕ್ಕಾಗಿ ಸಾಲ ಸೌಲಭ್ಯ, ಉಚಿತ ನಿವೇಶನ, ಗೃಹ ನಿರ್ಮಾಣಕ್ಕೆ ಸಾಲ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಕೊಟ್ಟರೆ ಇವರು ಕೂಡ ಮುನ್ನಲೆಗೆ ಬರುತ್ತಾರೆ. ಆರ್ಥಿಕವಾಗಿ ಇನ್ನಷ್ಟು ಸಬಲರಾಗುತ್ತಾರೆ. ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ಸ್ಥಳೀಯ ಶಾಸಕರು ಪತ್ರಿಕೆಗಳ ಓದುಗರು. ಪತ್ರಿಕಾ ವಿತರಕರ ಸ್ನೇಹಿತರೂ ಆಗಿದ್ದು, ಇವರ ಕಷ್ಟಗಳನ್ನು ರಾಜ್ಯ ಸರ್ಕಾರದ ಗಮನಕ್ಕೆ ತಂದು ಸೌಲಭ್ಯಗಳನ್ನು ಕಲ್ಪಿಸಬೇಕಿದೆ. ಈ ನಿಟ್ಟಿನಲ್ಲಿ ಪತ್ರಿಕಾ ವಿತರಕರ ಅಭಿಪ್ರಾಯಗಳು, ಒತ್ತಾಯಗಳನ್ನು ‘ಲೌಡ್ ಸ್ಪೀಕರ್’ನಲ್ಲಿ ಸಂಗ್ರಹಿಸಲಾಗಿದೆ.

*ನನಗೆ ತೃಪ್ತಿ ನೀಡಿದೆ

ಪತ್ರಿಕೆಗಳ ಕ್ಷೇತ್ರದಲ್ಲಿ ನನ್ನದು 50 ವರ್ಷ ನಿರಂತರ ಸೇವೆ. ಪ್ರಸ್ತುತ ಓದುಗರು ಕ್ಷೀಣಿಸಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ನಿಜಕ್ಕೂ ಈ ಕಾಯಕ ನನಗೆ ತೃಪ್ತಿ ನೀಡಿದೆ. ನಷ್ಟವನ್ನು ಸರಿದೂಗಿಸುವ ಕೆಲಸವಾಗುವುದು ಸಾಮಾನ್ಯವಾಗಿರುತ್ತದೆ. ಪತ್ರಿಕೆಗಳು ಸಮಾಜಮುಖಿಯಾಗಿ ಕೆಲಸ ಮಾಡುತ್ತಿದೆ.ಯುವಕರು, ಮಕ್ಕಳು ಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಮೊಬೈಲ್ ಬಳಕೆ ಬಿಡಬೇಕು. ಪಾಲಕರು ಮನೆಗೆ ಪತ್ರಿಕೆ ಹಾಕಿಸಿಕೊಂಡು ಓದುವಂತೆ ನಿರ್ದೇಶನ ನೀಡ ಬೇಕು. ಪತ್ರಿಕೆ ಓದು ಜ್ಞಾನವನ್ನು ಹೆಚ್ಚಿಸುತ್ತದೆ. ಅವಕಾಶಗಳು ದೊರಕುತ್ತದೆ.

ಸೋಮಶೇಖರ್, ಪತ್ರಿಕಾವಿತರಕ, ಕಾಮಗೆರೆ, ಕೊಳ್ಳೆಗಾಲ

*ತಾಯಂದಿರು ಪತ್ರಿಕೆ ಓದಲಿ

ತಾಯಿಯೇ ಮೊದಲು ಗುರು ಆಗಿರುತ್ತಾರೆ. ಆಗಾಗಿ ಮೊದಲು ತಾಯಂದಿರೇ ಪತ್ರಿಕೆಗಳನ್ನು ಓದುವ ಅವ್ಯಾಸ ಬೆಳೆಸಿಕೊಳ್ಳಬೇಕು. ಈ ಮೂಲಕ ಪ್ರಚಲಿತ ವಿದ್ಯಾಮಾನ ಗಳನ್ನು ತಿಳಿದುಕೊಳ್ಳಬೇಕು. ಮಕ್ಕಳ ಜತೆ ಅದನ್ನು ಚರ್ಚಿಸಬೇಕು. ಮಕ್ಕಳು ಇತ್ತೀಚಿಗೆ ಮೊಬೈಲ್ ವ್ಯಸನಕ್ಕೆ ಒಳಗಾಗುತ್ತಿದ್ದಾರೆ. ಪತ್ರಿಕೆಗಳನ್ನು ಓದುವುದರಿಂದ ಮೊಬೈಲ್ ಬಳಕೆ ಚಟದಿಂದ ಹೊರಬರಬಹುದು. ಪಠ್ಯದಷ್ಟೇ ಪತ್ರಿಕೆಗಳು ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗಿರುತ್ತದೆ.

ಮಲ್ಲೇಶ್, ಪತ್ರಿಕಾ ವಿತರಕ, ವಿಜಯವಾಣಿ, ಕೊಳ್ಳೇಗಾಲ

*ಸಂತಸ ನೀಡುತ್ತಿದೆ

ಕಳೆದ 25 ವರ್ಷಗಳಿಂದ ನಾನು ಮನೆ ಮನೆಗಳಿಗೆ ಪತ್ರಿಕೆ ಹಂಚುವ ಕೆಲಸವನ್ನು ಮಾಡುತ್ತಿದ್ದೇನೆ. ಪ್ರತಿದಿನ ಬೆಳಗ್ಗೆ4 ಗಂಟೆಗೆ ಎದ್ದು ಪತ್ರಿಕೆ ಬಂಡಲ್ ಬಿಚ್ಚಿ ಬೆಳಕು ಹರಿಯುವವರೆಗೆ ಓದುಗರ ಮನೆಗಳಿಗೆ ತಲುಪಿಸುವ ಕಾಯಕ ತುಂಬಾ ಸಂತಸ ನೀಡುತ್ತಿದೆ.

ವೆಂಕಟೇಶ್, ಪತ್ರಿಕಾ ವಿತರಕ, ಗುಂಡ್ಲುಪೇಟೆ

*ಜನರ ಪರಿಚಯವಾಗುತ್ತದೆ

ನಮ್ಮ ಕುಟುಂಬವು ಕಳೆದ ನಾಲ್ಕಾರು ದಶಕಗಳಿಂದ ಮನೆಗಳಿಗೆ ಪತ್ರಿಕೆ ಹಂಚುವ ಕೆಲಸ ಮಾಡುತ್ತಿದ್ದರು. ನಾನು ಹತ್ತು ವರ್ಷಗಳಿಂದ ಸ್ವತಂತ್ರವಾಗಿ ಮಾಡುತ್ತಿದ್ದೇನೆ. ಇದರಿಂದ ನನಗೆ ಜನರ ಪರಿಚಯ ಹಾಗೂ ವ್ಯವಹಾರಿಕ ಸಂಪರ್ಕ ಹೆಚ್ಚು ಸಾಧ್ಯವಾಗಿದೆ. ಜನರು ದಿನಪತ್ರಿಕೆಗಳನ್ನು ಓದಿದರೇ ದಿನವಿಡಿ ಲವಲವಿಕೆಯಿಂದ ಇರಬಹುದು.

ನಾಗೇಂದ್ರ, ವಿತರಕ, ಗುಂಡ್ಲುಪೇಟೆ

*ಸರ್ಕಾರದ ಸಹಕಾರ ಅಗತ್ಯ

ಹಲವಾರು ನಿರುದ್ಯೋಗಿಗಳು ಪತ್ರಿಕಾ ವಿತರಣೆ ಮಾಡುವುದನ್ನೇ ಒಂದು ಉದ್ಯೋಗ ಮಾಡಿಕೊಂಡಿದ್ದಾರೆ. ಈ ಮೂಲಕ ಜೀವನ ನಡೆಸುತ್ತಿದ್ದಾರೆ. ರಾಜ್ಯ ಸರ್ಕಾರ ಹೊಸ ನೀತಿ ಜಾರಿಗೆ ಮಾಡುವಂತೆ ಪ್ರತಿ ಮನೆಗೊಂದು ದಿನ ಪತ್ರಿಕೆ ಆದೇಶ ಮಾಡಬೇಕು. ಈ ಮೂಲಕ ರಾಜ್ಯದಲ್ಲಿ ಓದುಗರ ಸಂಖ್ಯೆ ಮತ್ತು ಉದ್ಯೋಗ ಸೃಷ್ಟಿಸಬಹುದಾಗಿದೆ. ಸರ್ಕಾರ ಪತ್ರಿಕಾ ವಿತರಕರ ಉಳಿವಿಗಾಗಿ ಹೆಚ್ಚಿನ ಸಹಕಾರ ನೀಡಬೇಕು.

ವಿಷ್ಣು, ವಿತರಕ, ಮಾಂಬಳ್ಳಿ, ಯಳಂದೂರು

*ಸಂಕಷ್ಟದ ಪರಿಸ್ಥಿತಿ ಇದೆ

ದಿನ ಪತ್ರಿಕೆಯನ್ನು ಮನೆ ಮನೆಗಳಿಗೆ ತಲುಪಿಸುವ ಕಾಯಕ ಮಾಡುವ ವಿತರಕರು, ಪ್ರಸ್ತುತ ದಿನದಲ್ಲಿ ಸಾಕಷ್ಟು ಸಮಸ್ಯೆಗಳ ನಡುವೆ ಜೀವನ ನಿರ್ವಹಿಸುತ್ತಿದ್ದಾರೆ. ಇವರನ್ನು ಗುರುತಿಸುವ ಕೆಲಸವನ್ನು ಸರ್ಕಾರ ಮಾಡುತ್ತಿಲ್ಲ. ಸರ್ಕಾರವು ಮಾಧ್ಯಮವನ್ನು 4ನೇ ಅಂಗ ಎಂದು ಹೇಳುತ್ತದೆ. ಆದರೆ ಇಲ್ಲಿ ಕೆಲಸ ಮಾಡುವ ಯಾರಿಗೂ ಕೂಡ ಸೌಲಭ್ಯಗಳನ್ನು ನೀಡುವಲ್ಲಿ ವಿಫಲವಾಗಿದೆ. ಇದರಿಂದ ಪತ್ರಿಕೆಯನ್ನು ನಂಬಿ ಜೀವನ ನಿರ್ವಹಣೆ ಮಾಡುವ ಕುಟುಂಬಗಳಿಗೆ ಸಂಕಷ್ಟ ಪರಿಸ್ಥಿತಿ ಇದ್ದು , ಈ ಬಗ್ಗೆ ವಿಶೇಷವಾದ ಗಮನ ನೀಡಬೇಕಾಗಿದೆ.

ರಾಚಯ್ಯ, ಪತ್ರಿಕಾ ಏಜೆಂಟ್, ಕಿನಕಹಳ್ಳಿ, ಯಳಂದೂರು

*ಭದ್ರತೆ ಇಲ್ಲದಂತಾಗಿದೆ

ನಾನು ಕಳೆದ 8 ವರ್ಷದಿಂದ ಪತ್ರಿಕಾ ವಿತರಕನಾಗಿ ಕೆಲಸ ಮಾಡುತ್ತಿದ್ದೇನೆ. ಸಮಸ್ಯೆಯ ನಡುವೆಯೂ ಪತ್ರಿಕೆಯನ್ನು ಹಂಚುತ್ತಿದ್ದೇನೆ. ವರ್ಷಪೂರ್ತಿ ಮನೆಮನೆಗೆ ಪತ್ರಿಕೆ ಹಂಚುವ ವಿತರಕರಿಗೆ ಯಾವ ಸೌಕರ್ಯ ಹಾಗೂ ಭದ್ರತೆಯೂ ಇಲ್ಲದಂತಾಗಿದೆ. ಆದ್ದರಿಂದ ಸರ್ಕಾರ ವಿತರಕರ ಸಮಸ್ಯೆಗಳನ್ನು ಮನಗಂಡು ಸವಲತ್ತುಗಳನ್ನು ಒದಗಿಸಬೇಕು.

ಮನು, ಪತ್ರಿಕಾ ವಿತರಕ, ಹನೂರು

*ಶ್ರಮವಹಿಸುವುದೇ ಆಗಿದೆ

ನಾನು ಕಳೆದ 30 ವರ್ಷಗಳಿಂದ ಪತ್ರಿಕಾ ವಿತರಕನಾಗಿದ್ದು, ಚಳಿ, ಮಳೆಯೆನ್ನದೇ ಮನೆಮನೆಗೆ ತೆರಳಿ ಪತ್ರಿಕೆ ಹಂಚುತ್ತಿದ್ದೇನೆ. ಆದರೆ ಸರ್ಕಾರದಿಂದ ಯಾವುದೇ ಸೌಕರ್ಯ ಈವರೆಗೂ ನನಗೆ ದೊರೆತಿಲ್ಲ. ಬರಿ ಶ್ರಮ ವಹಿಸುವುದೇ ಆಗಿದೆ. ಆದ್ದರಿಂದ ಸರ್ಕಾರ ಪತ್ರಿಕಾ ವಿತರಕರ ಬಗ್ಗೆ ಗಮನಹರಿಸಿ ಸವಲತ್ತುಗಳನ್ನು ದೊರಕಿಸಿ ಕೊಡುವುದರ ಮೂಲಕ ಅನುಕೂಲ ಕಲ್ಪಿಸಬೇಕು. ಇದರಿಂದ ಪತ್ರಿಕೆ ಹಂಚಲು ಉತ್ತೇಜನ ನೀಡಿದಂತಾಗುತ್ತದೆ.

ಮಾದೇಶ್, ಪತ್ರಿಕಾ ವಿತರಕ, ರಾಮಾಪುರ, ಹನೂರು

*ವಿಮೆ ಮಾಡಿಕೊಡಿ

ನಿತ್ಯ ಮುಂಜಾನೆ ಪತ್ರಿಕೆ ವಿತರಣೆ ಕಾರ್ಯದಲ್ಲಿ ತೊಡಗುವ ವಿತರಕರಿಗೆ ಅಪಘಾತ ಸೇರಿದಂತೆ ಅನಾರೋಗ್ಯಕ್ಕೆ ತುತ್ತಾದರೆ ವಿಮಾ ಸೌಲಭ್ಯ ನೀಡಬೇಕು. ಜೀವನ ಭದ್ರತೆ, ಸೌಲಭ್ಯ ಒದಗಿಸಬೇಕು. ಎಲ್ಲ ಯೋಜನೆ ಹಾಗೂ ಅಗತ್ಯ ಸಾಲ ಸೌಲಭ್ಯ, ವೈದ್ಯಕೀಯ, ಪಿಂಚಣಿ ಹಾಗೂ ನಮ್ಮಂತಹ ಕಾರ್ಮಿಕರು ಉನ್ನತ ಶಿಕ್ಷಣಕ್ಕೆ ಪೂರಕವಾದ ಸಹಕಾರ ಒದಗಿಸಿಕೊಡಲು ಅಗತ್ಯ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಯೋಜನೆ ರೂಪಿಸಿ ಜಾರಿಗೊಳಿಸಬೇಕು.

ಆರ್.ಎನ್.ನವೀನ್‌ಕುಮಾರ್, ಕಾರ್ಯದರ್ಶಿ, ಪತ್ರಿಕಾ ವಿತರಕರ ಸಂಘ, ಚಾಮರಾಜನಗರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net