

ಹುಬ್ಬಳ್ಳಿ: ಇಲ್ಲಿಯ ರಾಮಕೃಷ್ಣ ವಿವೇಕಾನಂದ ಆಶ್ರಮದ ವತಿಯಿಂದ ಲೋಕಕಲ್ಯಾಣಾರ್ಥವಾಗಿ ವಿದ್ಯಾನಗರ ಕಲ್ಯಾಣನಗರದಲ್ಲಿ ಶ್ರೀ ಶತಚಂಡೀಕಾ ಮಹಾಯಾಗ ಹೋಮ ಭಾನುವಾರ ಜರುಗಿತು.
ವಿದ್ವಾನ್ ಸತ್ಯನಾರಾಯಣ ಭಟ್ ಮತ್ತು ವಿನಾಯಕ ಭಟ್ ಅವರ ನೇತೃತ್ವದಲ್ಲಿ ಮಹಾಯಾಗ ನೆರವೇರಿತು. 700ಕ್ಕೂ ಹೆಚ್ಚು ದಂಪತಿಗಳು, ಭಕ್ತರು ಭಾಗವಹಿಸಿದ್ದರು.
ಬೆಳಗ್ಗೆ ಶ್ರೀದುರ್ಗಾ ಮೂರ್ತಿಯ ಪ್ರಾಣಪತ್ರಿಷ್ಠಾಪನೆ ಮಾಡಿ ಶತಚಂಡೀಕಾ ಯಾಗದ ಮಹಾಸಂಕಲ್ಪ ನೆರವೇರಿಸಲಾಯಿತು. ನಂತರ ಹೋಮ, ಪೂರ್ಣಾಹುತಿ ನಡೆಯಿತು.
ಕುಮಾರಿ ಪೂಜೆ, ಸುಹಾಸಿನಿಯರ ಪೂಜೆ ಹಾಗೂ ಧಾರ್ವಿುಕ ಕಾರ್ಯಗಳು ಯತಿಗಳಿಂದ ನಡೆದವು. ಮಧ್ಯಾಹ್ನ ಮಹಾಪ್ರಸಾದ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಪ್ರವಚನ ನೀಡಿದ ಶಿವಮೊಗ್ಗದ ಶ್ರೀ ವಿಜಯಾನಂದ ಸರಸ್ವತಿ ಮಹಾರಾಜರು, ಪ್ರತಿಯೊಬ್ಬರು ದೇವಿ ಪಾರಾಯಾಣ ಮಾಡುತ್ತ ಅಹಂಕಾರ ತ್ಯಜಿಸಬೇಕು ಎಂದು ಹೇಳಿದರು.
ಶ್ರೀ ಪ್ರಕಾಶಾನಂದ ಸ್ವಾಮೀಜಿ ಮಾತನಾಡಿ, ದೇವಿಯು ಬುದ್ಧಿ ರೂಪದಲ್ಲಿ ಇದ್ದುಕೊಂಡು ಎಲ್ಲರಿಗೂ ಮಾರ್ಗದರ್ಶನ ಮಾಡುತ್ತಾಳೆಂದು ಹೇಳಿದರು.
ಗ್ರಂಥ ಬಿಡುಗಡೆ: ಉದಾತ್ತ ಮತ್ತು ಉತ್ತಮ ಹದಿನೆಂಟು ಲೇಖನಗಳನ್ನು ಒಳಗೊಂಡ ಜನನಿ ಸ್ಮರಣ ಸಂಚಿಕೆಯನ್ನು ಆಶ್ರಮದ ಯತಿಗಳು ಲೋಕಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಹುಬ್ಬಳ್ಳಿ ಆಶ್ರಮದ ಸ್ವಾಮಿ ರಘುವೀರಾನಂದಜೀ ಅವರು, ಶಾರದಾದೇವಿ ಅವರು ತಾಯಿಯ ವಿಶೇಷ ಗುಣಗಳಾದ ತಾಳ್ಮೆ, ವಿನಯ, ದಯೆ, ಪ್ರೇಮ, ಕ್ಷಮೆ ಮುಂತಾದ ಮಾನವೀಯ ಗುಣಗಳನ್ನು ಅಳವಡಿಸಿಕೊಂಡು ಬಾಳಿ ತೋರಿಸಿದರು. ಅವರ ಜೀವನ ಇಂದಿನ ಸ್ತ್ರೀ ಕುಲಕ್ಕೆ ಆದರ್ಶವಾಗಿದೆ. ಅವರ ಜೀವನ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕೆಂದು ಹೇಳಿದರು.
ಸ್ವಯಂ ಸೇವಕರು ಮತ್ತು ದಾನಿಗಳನ್ನು ಗೌರವಿಸಲಾಯಿತು. ಎಂ.ಎ. ಸುಬ್ರಮಣ್ಯ ಕಾರ್ಯಕ್ರಮ ನಿರೂಪಿಸಿದರು.
ಸಂಜೆ ತಾಯಿ ದುರ್ಗೆಯ ಮೆರವಣಿಗೆ ನಡೆಯಿತು. ಸ್ವಾಮಿ ತ್ಯಾಗೀಶ್ವರಾನಂದಜೀ ಅವರು ಮೆರವಣಿಗೆಗೆ ಚಾಲನೆ ನೀಡಿದರು. ನಂತರ ಉಣಕಲ್ಲ ಕೆರೆಯಲ್ಲಿ ವಿಸರ್ಜನೆ ಮಾಡಲಾಯಿತು.