

ಕಲಬುರಗಿ: ಲೋಕ ಕಲ್ಯಾಣಾರ್ಥ, ಭಗವತಿ ಪ್ರತ್ಯರ್ಥವಾಗಿ ದೇಶಕ್ಕೆ ಶುಭವಾಗಲಿ, ಸುಭೀಕ್ಷೆಯಿಂದ ಸಾಗಲಿ, ಶತ್ರುಗಳಿಂದ ರಕ್ಷಣೆ ಸಿಗಲಿ ಎಂದು ಪ್ರಾರ್ಥಿಸಿ ನಗರದ ರಾಜಾಪುರದಲ್ಲಿನ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಶನಿವಾರ ಸಹಸ್ರ ಚಂಡಿಕಾಯಾಗ ಮಾಡಿ, ಪ್ರಧಾನ ಸಂಕಲ್ಪ ನೆರವೇರಿಸಲಾಯಿತು.
ಆಶ್ರಮದ ಪೂಜ್ಯ ಶ್ರೀ ಸ್ವಾಮಿ ಮಹೇಶ್ವರಾನಂದ ಜೀ ಮಹಾರಾಜರ ಸಾನ್ನಿಧ್ಯದಲ್ಲಿ ಬೆಂಗಳೂರು, ದಾವಣಗೆರೆ, ಹುಬ್ಬಳಿ ಸೇರಿ ವಿವಿಧೆಡೆಯಿಂದ ಆಗಮಿಸಿದ ೪೦೦ಕ್ಕಿಂತ ಹೆಚ್ಚಿನ ಭಕ್ತರು ಯಾಗದಲ್ಲಿ ಸಂಕಲ್ಪ ಮಾಡುವ ಜತೆಗೆ ದುರ್ಗಾಸಪ್ತ ಶತಿ ಪಾರಾಯಣ ಮಾಡಿದರು.
ಬೆಳಗ್ಗೆ ೯.೩೦ರಿಂದ ಮೂರು ಗಂಟೆವರೆಗೆ ನಿರಂತರವಾಗಿ ದುರ್ಗಾಸಪ್ತ ಶತಿ ಪಾರಾಯಣ ನಡೆಸಲಾಯಿತು. ಎಲ್ಲ ಭಕ್ತರಿಗೂ ಬೆಳಗ್ಗೆ ಉಪಹಾರ, ಮಧ್ಯಾಹ್ನ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.
ಪ್ರಸ್ತುತ ಪಾರಾಯಣ ಮಾಡುತ್ತಿರುವ ತಂಡವೂ ಇದುವರೆಗೆ ೨,೬೦೦ ಪಾರಾಯಣಗಳನ್ನು ನೆರವೇರಿಸಿದೆ. ಭಾನುವಾರ ಚಂಡಿಕಾಯಾದ ಪೂರ್ಣಾಹುತಿ ನೆರವೇರಲಿದೆ ಎಂದು ಶ್ರೀ ಮಹೇಶ್ವರಾನಂದ ಜೀ ಮಹಾರಾಜ ತಿಳಿಸಿದರು.
ಶ್ರೀ ಸ್ವಾಮಿ ಮಹೇಶ್ವರಾನಂದ ಜೀ ಮಹಾರಾಜ, ಯುವ ಬ್ರಿಗೇಡ್‌ನ ರುದ್ರೇಶ, ವಿಜಯನಗರದ ಪೂಜ್ಯ ಸುಮೇಧಾನಂದ ಜೀ ಮಹಾರಾಜ, ಬೆಂಗಳೂರಿನ ಶ್ರೀ ಯತೀಶ್ವರಿ ರಾಮಪ್ರಿಯಾಂಬಾ, ಸಹೋದರಿ ಉಮಾ, ಮಲ್ಲತ್ತಳ್ಳಿಯ ಸಹೋದರಿ ಕಾಂತಾ ಸೇರಿ ಸ್ಥಳೀಯ ನೂರಾರು ಭಕ್ತರು ಉಪಸ್ಥಿತರಿದ್ದರು.