

ಚಿತ್ರದುರ್ಗ: ಚಿತ್ರದುರ್ಗ ಲೋಕಸಭಾ ಎಸ್‌ಸಿ ಮೀಸಲು ಕ್ಷೇತ್ರಕ್ಕೆ ಏಪ್ರಿಲ್ 26ರಂದು ನಡೆದ ಚುನಾವಣೆ ಮತ ಎಣಿಕೆ ಕಾರ‌್ಯ ಜೂ.4ರಂದು ನಗರದ ಸರ್ಕಾರಿ ವಿಜ್ಞಾನ ಕಾಲೇಜಿನ ಹೊಸ ಕಟ್ಟಡದಲ್ಲಿ ನಡೆಯಲಿದ್ದು, ಸಕಲ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಟಿ.ವೆಂಕಟೇಶ್ ತಿಳಿಸಿದರು.
ಸೋಮವಾರ ಮತ ಎಣಿಕೆ ಕೇಂದ್ರಕ್ಕೆ ಭೇಟಿ ನೀಡಿ ಸಿದ್ಧತೆ ಪರಿಶೀಲಿಸಿದ ಬಳಿಕ ಮಾತನಾಡಿ, ಮಧ್ಯಾಹ್ನ 12.30ರೊಳಗೆ ಫಲಿತಾಂಶ ಪ್ರಕಟಿಸುವ ವಿಶ್ವಾಸ ವ್ಯಕ್ತಪಡಿಸಿದರು.
4ರ ಬೆಳಗ್ಗೆ 7.30ಕ್ಕೆ ಭದ್ರತಾ ಕೊಠಡಿಗಳನ್ನು ಚುನಾವಣಾ ವೀಕ್ಷಕರು, ಅಭ್ಯರ್ಥಿಗಳು, ಅವರ ಪ್ರತಿನಿಧಿಗಳ ಸಮಕ್ಷಮದಲ್ಲಿ ತೆರೆಯಲಾಗುವುದು ಹಾಗೂ 8 ಗಂಟೆಗೆ ಎಣಿಕೆ ಪ್ರಾರಂಭವಾಗಲಿದೆ. ಪ್ರತಿ ಕೌಟಿಂಗ್ ಹಾಲ್‌ನಲ್ಲಿ ಪ್ರತಿ ಟೇಬಲ್‌ಗೆ ಸಿಸಿ ಟಿವಿ ಅಳವಡಿಸಿ ಮಾನಿಟರಿಂಗ್ ಮಾಡಲಾಗುತ್ತಿದೆ. ಪ್ರತಿ ಸುತ್ತಿನ ಎಣಿಕೆ ಮುಕ್ತಾಯದ ನಂತರ ವೀಕ್ಷಕರ ಗಮನಕ್ಕೆ ತಂದು ಅಂಕಿ ಅಂಶಗಳ ಕ್ರೂಢೀಕರಿಸಲಾಗುತ್ತದೆ ಎಂದರು.
ಅಂಚೆ ಮತಪತ್ರಗಳ ಎಣಿಕೆ ಜತೆಯಲ್ಲೇ ಇವಿಎಂ ಮತ ಎಣಿಕೆಯೂ ನಡೆಯಲಿದ್ದು, ಮಧ್ಯಾಹ್ನ 12.30ರ ವೇಳೆಗೆ ಮತ ಎಣಿಕೆ ಸ್ಪಷ್ಟಚಿತ್ರಣ ದೊರೆಯಲಿದೆ. ಪ್ರತಿ ಟೇಬಲ್‌ಗೆ 141 ಎಣಿಕೆ ಮೈಕ್ರೋ ಅಬ್ಸರ್ವರ್, 141 ಎಣಿಕೆ ಮೇಲ್ವಿಚಾರಕರು, 154 ಎಣಿಕೆ ಸಹಾಯ ಕರನ್ನು ನೇಮಿಸಲಾಗಿದೆ ಎಂದು ಮಾಹಿತಿ ನೀಡಿದರು.
ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 14 ಟೇಬಲ್‌ಗಳನ್ನು ಹಾಗೂ ಅಂಚೆ ಮತಪತ್ರಗಳ ಎಣಿಕೆಗೆ 12 ಟೇಬಲ್‌ಗಳನ್ನು ನಿಗದಿಪಡಿಸಲಾಗಿದೆ. ನೆಲಮಹಡಿಯಲ್ಲಿ ಚಳ್ಳಕೆರೆ, ಹೊಸದುರ್ಗ, ಪಾವಗಡ ಹಾಗೂ ಅಂಚೆಮತ ಪತ್ರಗಳ ಮತ ಎಣಿಕೆ ನಡೆಯಲಿದೆ. ಮೊದಲನೇ ಮಹಡಿಯಲ್ಲಿ ಮೊಳಕಾಲ್ಮೂರು, ಹಿರಿಯೂರು ಹಾಗೂ ಶಿರಾ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಹಾಗೂ 2ನೇ ಮಹಡಿಯಲ್ಲಿ ಚಿತ್ರದುರ್ಗ ಹಾಗೂ ಹೊಳಲ್ಕೆರೆ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ನಡೆಯಲಿದೆ ಎಂದರು.
ಮತ ಎಣಿಕೆ ದಿನದಂದು ಜಿಲ್ಲಾದ್ಯಂತ 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಮದ್ಯಪಾನ, ಮಾರಾಟ, ಸಾಗಾಟವನ್ನು ನಿಷೇಧಿಸಲಾಗಿದೆ. ಸಭೆ, ಸಮಾರಂಭ ಹಾಗೂ ವಿಜಯೋತ್ಸವ ಆಚರಿಸುವಂತಿಲ್ಲ. ಎಣಿಕೆ ಕೇಂದ್ರದೊಳಗೆ ಮೊಬೈಲ್ ಫೋನ್ ಇತ್ಯಾದಿ ಎಲೆಕ್ಟ್ರಾನಿಕ್ ವಸ್ತುಗಳು, ಬೀಡಿ, ಸಿಗರೇಟ್, ಬೆಂಕಿಪೊಟ್ಟಣ, ಲೈಟರ್, ನೀರಿನ ಬಾಟಲ್,ಇಂಕ್‌ಪೆನ್ ಮತ್ತಿತರ ವಸ್ತುಗಳನ್ನು ತರುವಂತಿಲ್ಲ ಎಂದು ತಿಳಿಸಿದರು.
ಎಸ್‌ಪಿ ಧರ್ಮೆಂದರ್‌ಕುಮಾರ್ ಬಂದೋಬಸ್ತ್ ಕ್ರಮಗಳನ್ನು ಪರಿಶೀಲಿಸಿದರು. ಲೋಕಸಭಾ ಕ್ಷೇತ್ರದ ಸಾಮಾನ್ಯ ವೀಕ್ಷಕ ಮನೋಹರ್ ಮರಂಡಿ, ಜಿಲ್ಲಾ ಸಹಾಯಕ ಚುನಾವಣಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಎಂ.ಕಾರ್ತಿಕ್, ತಹಸೀಲ್ದಾರ್ ಡಾ.ನಾಗವೇಣಿ ಇದ್ದರು.
*ಇಪ್ತತ್ತು ಮಂದಿ ಭವಿಷ್ಯ ಇವತ್ತು
ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಡಿಸಿಎಂ ಗೋವಿಂದ ಎಂ.ಕಾರಜೋಳ, ಕಾಂಗ್ರೆಸ್‌ನಿಂದ ಬಿ.ಎನ್.ಚಂದ್ರಪ್ಪ ಸೇರಿ 20 ಅಭ್ಯರ್ಥಿಗಳು ಕಣದಲ್ಲಿದ್ದರು. ಮತದಾನಕ್ಕೆ ಎರಡು ಬ್ಯಾಲೆಟ್ ಯೂನಿಟ್‌ಗಳನ್ನು ಬಳಸಲಾಗಿತ್ತು. ಶೇ.73.3 ಮತದಾನವಾಗಿತ್ತು.