

ಮೈಸೂರು: ರಾಜೇಂದ್ರ ಶ್ರೀಗಳು ಆಡಂಬರ ಜೀವನವನ್ನು ತ್ಯಜಿಸಿ ಲೋಕಕಲ್ಯಾಣ ಮತ್ತು ಆತ್ಮಕಲ್ಯಾಣಕ್ಕಾಗಿ ತಮ್ಮ ಜೀವನ ಮುಡಿಪಾಗಿರಿಸಿದ್ದರು ಎಂದು ಮೈವಿವಿ ಕುವೆಂಪು ಅಧ್ಯಯನ ಸಂಸ್ಥೆ ನಿವೃತ್ತ ನಿರ್ದೇಶಕ ಪ್ರೊ.ನೀಲಗಿರಿ ತಳವಾರ್ ಹೇಳಿದರು.
ನಗರದ ಜೆಎಸ್‌ಎಸ್ ಆಸ್ಪತ್ರೆಯ ಶ್ರೀ ರಾಜೇಂದ್ರ ಶತಮಾನೋತ್ಸವ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ 107ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶ್ರೀಗಳ ಅನ್ನ ದಾಸೋಹ, ಅಕ್ಷರ ದಾಸೋಹ, ಆಧ್ಯಾತ್ಮ ಮತ್ತು ಆರೋಗ್ಯ ಸೇವೆ ಮತ್ತು ಸಮಾಜ ಸೇವೆ ಸ್ಮರಿಸಿದರು.
ಮಾತೃ ಹೃದಯಿಗಳಾಗಿ, ಕರುಣಾಮಯಿಯಾಗಿ ಬದುಕಿದ್ದಾಗಲೇ ಸ್ವಾಮೀಜಿ ದಂತ ಕಥೆಯಾಗಿದ್ದರು. ತಮ್ಮ 12ನೇ ವಯಸ್ಸಿನಲ್ಲೇ ಶ್ರೀಮಠದ ಪೀಠಾಧಿಪತಿಯಾಗಿ ಧಾರ್ಮಿಕ ಪೀಠವನ್ನು ನಿಭಾಯಿಸುವುದಕ್ಕೆ ಎಂಟೆದೆ ಬೇಕು. ಅದು ಶ್ರೀಗಳ ಬಳಿಯಿತ್ತು. ಅವರು ನಿಜವಾದ ತಪಸ್ವಿಗಳು. ಸುತ್ತೂರು ಮಠ ಕಾರ್ಯವ್ಯಾಪಿಯನ್ನು ರಾಜ್ಯ ಮತ್ತು ದೇಶ, ವಿದೇಶಗಳಲ್ಲೂ ವಿಸ್ತರಿಸಿ ಮಹಾವೃಕ್ಷವಾಗಿದೆ, ಅದಕ್ಕೆ ತಾಯಿ ಬೇರು ರಾಜೇಂದ್ರ ಶ್ರೀಗಳು ಎಂದು ಹೇಳಿದರು.
ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿ ಪ್ರೊ.ಎಸ್.ಪಿ.ಮಂಜುನಾಥ್ ಮಾತನಾಡಿ, ಶ್ರೀಗಳು ಕಷ್ಟಪಟ್ಟು ಭಿಕ್ಷೆ ಬೇಡಿ, ಶ್ರಮ ವಹಿಸಿ ಕಟ್ಟಿದ ಸಂಸ್ಥೆ ಇದು. ಶ್ರೀಗಳ ಹಾದಿ ಸುಗಮವಾಗಿರಲಿಲ್ಲ. ಅವರ ಹಾದಿ ಕಠಿಣವಾಗಿ ಕಲ್ಲುಮುಳ್ಳುಗಳಿಂದ ಕೂಡಿತ್ತು. ಎಷ್ಟೇ ಕಷ್ಟವಿದ್ದರೂ ಸದಾ ಹಸನ್ಮುಖಿಗಳಾಗಿರುತ್ತಿದ್ದರು. ಅವರ ವಿದ್ಯಾಭ್ಯಾಸದ ಸಂದರ್ಭದಲ್ಲಿ ತಮ್ಮ ಜತೆ ಇನ್ನೂ 8ರಿಂದ 10 ಜನರಿಗೆ ಪಡಿ ಪದಾರ್ಥಗಳನ್ನು ಬಡಿಸಿ ಅವರ ವಿದ್ಯಾಭ್ಯಾಸಕ್ಕೆ ನೆರವಾಗುತ್ತಿದ್ದರು. ಶ್ರೀಗಳು ಹಾಕಿಕೊಳ್ಳುತ್ತಿದ್ದ ಚಿನ್ನ ಮಿಶ್ರಿತ ರುದ್ರಾಕ್ಷಿ ಸರದಲ್ಲಿ ಚಿನ್ನವನ್ನು ಬೇರ್ಪಡಿಸಿ ಅದನ್ನು ಮಾರಾಟ ಮಾಡಿ ಪ್ರಥಮ ವಿದ್ಯಾರ್ಥಿನಿಲಯವನ್ನು ಸ್ಥಾಪಿಸಿದರು. ಹಸಿದವರ, ದೀನ ದಲಿತರ, ಬಡವರ ಪಾಲಿಗೆ ದಾರಿ ದೀಪವಾಗಿದ್ದರು ಎಂದು ಸ್ಮರಿಸಿದರು.
ಹಸಿದವರು ಹೊಟ್ಟೆ ತುಂಬ ಊಟ ಮಾಡಿ ಸಂತಸ ಪಡುವುದರಲ್ಲಿ ದೇವರನ್ನು ಕಾಣುತ್ತಿದ್ದರು. ಅವರು ಯಾವುದೇ ಪವಾಡ ಮಾಡಲಿಲ್ಲ. ಅವರ ಸೇವೆ ಮತ್ತು ಕಾಯಕದಿಂದ ಜೆಎಸ್‌ಎಸ್ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದಿದೆ. ಸಮಾಜ ಸೇವೆಗೆ ತಮ್ಮ ಜೀವನ ಮುಡುಪಾಗಿಟ್ಟು ಶ್ರೀಗಳು, ಮನುಷ್ಯರಲ್ಲದೆ ಪ್ರಾಣಿ, ಪಕ್ಷಿಗಳನ್ನು ಸಹ ಬಹಳ ಅಕ್ಕರೆ ಮತ್ತು ಪ್ರೀತಿಯಿಂದ ಕಾಣುತ್ತಿದ್ದರು ಎಂದು ಹೇಳಿದರು.
ವಾಟಾಳು ಗ್ರಾಮದ ಸೂರ್ಯಸಿಂಹಾಸನ ಮಠದ ಶ್ರೀ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮಾತೃ ಹೃದಯಿಯಾಗಿದ್ದ ಶ್ರೀಗಳು ಯಾವುದೇ ವಿದ್ಯಾರ್ಥಿ ಹಸಿವಿನಿಂದ ಬಳಲಬಾರದು ಎಂದು ಪ್ರಸಾದ ನಿಲಯಗಳನ್ನು ಸ್ಥಾಪಿಸಿದರು. ತಮ್ಮ ಚಿನ್ನದ ಕರಡಿಗೆಯನ್ನು ಮಾರಾಟ ಮಾಡಿ ವಿದ್ಯಾರ್ಥಿಗಳಿಗೆ ದವಸ, ಧಾನ್ಯ ತಂದು ಅನ್ನದಾಸೋಹ ಮಾಡಿದ್ದರು. ಶ್ರೀಗಳು ಎತ್ತಿನಗಾಡಿಯಲ್ಲಿ ಹಳ್ಳಿಹಳ್ಳಿಗೆ ಭೇಟಿ ನೀಡಿ ಜೋಳ, ರಾಗಿ ಇನ್ನಿತರ ಧಾನ್ಯವನ್ನು ಭಿಕ್ಷೆ ಬೇಡಿ ಅಂದು ಕಟ್ಟಿದ ಸಂಸ್ಥೆ ಇಂದು ಬೃಹದಾಕಾರವಾಗಿ ಬೆಳೆದಿದೆ. ಶ್ರೀಗಳು ಮಠಾಧಿಪತಿಗಳಾಗದೆ ಸಾಮಾನ್ಯರಲ್ಲೇ ಸಾಮಾನ್ಯರಾಗಿದ್ದರು ಎಂದು ಸ್ಮರಿಸಿದರು.
ಜೈನ್ ಮಿಲನ್, ಆಸರೆ ಗ್ರೂಪ್ ಮತ್ತು ಎನ್.ಜೆ.ಎಸ್. ಸಂಸ್ಥೆಯ ವತಿಯಿಂದ ಅಂಗವಿಕಲರಿಗೆ ಉಚಿತವಾಗಿ ಗಾಲಿಕುರ್ಚಿ ಮತ್ತು ಕೃತಕಾಂಗವನ್ನು ವಿತರಿಸಲಾಯಿತು. ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ ಉಪಕುಲಪತಿ ಡಾ.ಸುರಿಂದರ್ ಸಿಂಗ್, ವೈದ್ಯಕೀಯ ಅಧೀಕ್ಷಕ ಡಾ.ಸಿ.ಪಿ.ಮಧು, ಪ್ರಾಂಶುಪಾಲ ಡಾ.ಬಸವನಗೌಡಪ್ಪ ಇನ್ನಿತರರು ಇದ್ದರು.