ಲೋಕ ಅದಾಲತ್‌ನಿಂದ 5.7 ಕೋಟಿ ಜನರಿಗೆ ಲಾಭ

5
ನಗರದಲ್ಲಿ ಆಯೋಜಿಸಿದ್ದ ‘ಸರ್ವರಿಗೂ ನ್ಯಾಯ ವರ್ಧನೆ’ ಹೆಸರಿನ ದಕ್ಷಿಣ ವಲಯ ಪ್ರಾದೇಶಿಕ ಸಮ್ಮೇಳನವನ್ನು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಸಂಜಯ್ ಕಿಶನ್‌ಕೌಲ್ ಉದ್ಘಾಟಿಸಿದರು. ಸಂಜೀವ್ ಖನ್ನಾ, ಪ್ರಸನ್ನ ಬಿ.ವರಾಳೆ, ಬಿ. ವೀರಪ್ಪ, ಕೆ.ಸೋಮಶೇಖರ್ ಇದ್ದರು.
Published on

ಪ್ರಸಕ್ತ ವರ್ಷದ ಮೊದಲ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ 30.50 ಲಕ್ಷ ಬಾಕಿ ಪ್ರಕರಣಗಳು ಹಾಗೂ 1.76 ಕೋಟಿ ವ್ಯಾಜ್ಯಪೂರ್ವ ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷ, ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಸಂಜಯ್ ಕಿಶನ್‌ಕೌಲ್ ತಿಳಿಸಿದರು.


ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ನಗರದ ಖಾಸಗಿ ಹೋಟೆಲ್‌ನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ‘ಸರ್ವರಿಗೂ ನ್ಯಾಯ ವರ್ಧನೆ’ ದಕ್ಷಿಣ ವಲಯ ಪ್ರಾದೇಶಿಕ ಸಮ್ಮೇಳನದಲ್ಲಿ ಮಾತನಾಡಿದರು.


ಪ್ರತಿವರ್ಷದಂತೆ ಈ ಬಾರಿಯೂ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಬಾಕಿ ಉಳಿದಿದ್ದ ಕೋಟ್ಯಂತರ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಕಾನೂನು ಸೇವಾ ಸಂಸ್ಥೆಗಳ ಕಾನೂನು ಅರಿವು ಹೆಚ್ಚಳದಿಂದಾಗಿ ಈ ಮಟ್ಟದ ಯಶಸ್ಸು ಸಾಧ್ಯವಾಗಿದೆ ಎಂದು ಹೇಳಿದರು.


ಪ್ರಸಕ್ತ ಹಣಕಾಸು ವರ್ಷದಲ್ಲಿ 3.88 ಲಕ್ಷ ಕಾನೂನು ಅರಿವು ಕಾರ್ಯಕ್ರಮ, ಶಿಬಿರ ಆಯೋಜಿಸಲಾಗಿದ್ದು, 5.7 ಕೋಟಿ ಜನರು ಲೋಕ ಅದಾಲತ್‌ನ ಲಾಭ ಪಡೆದಿದ್ದಾರೆ. ವಾಣಿಜ್ಯ ಪ್ರಕರಣಗಳಲ್ಲಿ ಸಂಸ್ಥೆಯ ಪೂರ್ವ ಮಧ್ಯಸ್ಥಿಕೆ ಇತ್ಯರ್ಥವು ಗಮನಾರ್ಹ ವೇಗ ಪಡೆದುಕೊಂಡಿದೆ ಎಂದು ಹೇಳಿದರು.


ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಸಂಜೀವ್ ಖನ್ನಾ ಮಾತನಾಡಿ, ಸಂವಿಧಾನದ 14, 21, 22(1), 38 ಮತ್ತು 39(ಎ) ವಿಧಿಗಳಿಗೆ ಅನುಗುಣವಾಗಿ ಕಾನೂನು ಸೇವೆಗಳ ಸಂಸ್ಥೆಯ ಪಾತ್ರದ ಬಗ್ಗೆ ವಿವರಿಸಿ, ಕ್ರಿಮಿನಲ್ ಪ್ರಕರಣಗಳ ತೀರ್ಪಿನಲ್ಲಿ ಕಾರ್ಯವಿಧಾನದ ಹಕ್ಕುಗಳ ಪ್ರಾಮುಖ್ಯತೆಯ ಬಗ್ಗೆ ತಿಳಿಸಿಕೊಟ್ಟರು.


ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ.ವರಾಳೆ ಮಾತನಾಡಿ, ನ್ಯಾಯವು ಕೆಲವರ ಸವಲತ್ತಾಗಿ ಉಳಿಯದೇ ಎಲ್ಲರ ಮೂಲಭೂತ ಹಕ್ಕಾಗಿದೆ ಎಂಬುದನ್ನು ಖಚಿತ ಪಡಿಸಿಕೊಳ್ಳುವುದು ಕಾನೂನು ಸೇವೆಗಳ ಕರ್ತವ್ಯ. ತಂತ್ರಜ್ಞಾನವನ್ನು ಬಳಸಿಕೊಂಡು ಎಲ್ಲರಿಗೂ ನ್ಯಾಯ ತಲುಪಿಸುವ ಕೆಲಸವಾಗಬೇಕು. ಜತೆಗೆ ಸಮುದಾಯ ಸಬಲೀಕರಣಕ್ಕೂ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.


ಹೈಕೋರ್ಟ್ ನ್ಯಾಯಮೂರ್ತಿಗಳಾದ ಬಿ. ವೀರಪ್ಪ, ಕೆ.ಸೋಮಶೇಖರ್ ಇದ್ದರು. ಕಾರ್ಯಕ್ರಮದಲ್ಲಿ ರಾಷ್ಟ್ರೀಯ, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸಲಹಾ ಮತ್ತು ಸಲಹೆಗಾರ ಸಮಿತಿ ಸದಸ್ಯರು, ಕಾರ್ಯನಿರ್ವಾಹಕ ಅಧ್ಯಕ್ಷರು, ಕರ್ನಾಟಕ, ತೆಲಂಗಾಣ, ತಮಿಳುನಾಡು, ಆಂಧ್ರಪ್ರದೇಶ, ಪುದುಚೇರಿ, ಕೇರಳ ಮತ್ತು ಒಡಿಶಾ ರಾಜ್ಯಗಳ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಭಾಗವಹಿಸಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net