ಲೋಕ ಅದಾಲತ್‌ನಲ್ಲಿ ಪ್ರಕರಣ ಇತ್ಯರ್ಥಪಡಿಸಿಕೊಳ್ಳಿ

sri judje
ಶೃಂಗೇರಿ ನ್ಯಾಯಾಲಯದ ಆವರಣದಲ್ಲಿ ಲೋಕ ಅದಾಲತ್ ಪೂರ್ವಭಾವಿ ಸಭೆಯಲ್ಲಿ ನ್ಯಾಯಾಧೀಶ ಆರ್.ಎಸ್.ಜೀತು ಮಾತನಾಡಿದರು. ವಿ.ಆರ್.ನಟಶೇಖರ್, ಸುರೇಶ್, ಅಬೂಬಕರ್ ಇದ್ದರು.
Published on

ಶೃಂಗೇರಿ: ಜನಸಾಮಾನ್ಯರಿಗೆ ನ್ಯಾಯ ಒದಗಿಸುವ ಸಲುವಾಗಿ ಜನತಾ ನ್ಯಾಯಾಲಯ ಸ್ಥಾಪಿಸಲಾಗಿದೆ. ಇತ್ಯರ್ಥವಾಗದೆ ಉಳಿದ ಪ್ರಕರಣಗಳನ್ನು ಈ ನ್ಯಾಯಾಲಯದಲ್ಲಿ ರಾಜಿ ಸಂಧಾನದ ಮೂಲಕ ಇತ್ಯರ್ಥಗೊಳಿಸಬೇಕು. ಸಾಮಾನ್ಯರಿಗೆ ನ್ಯಾಯ ಒದಗಿಸುವುದು ಲೋಕ ಅದಾಲತ್ ಕಾರ್ಯಕ್ರಮದ ಉದ್ದೇಶ ಎಂದು ಶೃಂಗೇರಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶ ಆರ್.ಎಸ್.ಜೀತು ತಿಳಿಸಿದರು.

ಗುರುವಾರ ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಜು.12ರಂದು ನಡೆಯಲಿರುವ ರಾಷ್ಟ್ರೀಯ ಲೋಕ ಅದಾಲತ್ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ವರ್ಷದಲ್ಲಿ ನಾಲ್ಕು ಲೋಕ ಅದಾಲತ್‌ಗಳನ್ನು ರಾಷ್ಟ್ರೀಯ ಮಟ್ಟದಲ್ಲಿ ನಡೆಸುತ್ತಿದ್ದು, ಎಲ್ಲ ನ್ಯಾಯಾಲಯಗಳಲ್ಲಿ ಲೋಕ ಅದಾಲತ್ ಮೂಲಕ ಪ್ರಕರಣಗಳನ್ನು ಇತ್ಯರ್ಥಗೊಳಿಸಿ ಸಮಸ್ಯೆಗಳನ್ನು ಬಗೆಹರಿಸುವ ಕುರಿತು ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ. ಶಾಶ್ವತ, ರಾಷ್ಟ್ರೀಯ, ಮೆಗಾ ಹಾಗೂ ಸಂಚಾರಿ ಲೋಕ ಅದಾಲತ್ ಮೂಲಕ ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥಗೊಳಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. ಗ್ರಾಹಕರ ಕುಂದುಕೊರತೆ, ಬ್ಯಾಂಕ್ ವಸೂಲಾತಿ ಪ್ರಕರಣ, ಕೌಟುಂಬಿಕ ವಿವಾದ, ಸಿವಿಲ್ ಮುಂತಾದ ಪ್ರಕರಣಗಳನ್ನು ಅದಾಲತ್ ಮೂಲಕ ಇತ್ಯರ್ಥಗೊಳಿಸಬಹುದು ಎಂದರು. ಹೆಲ್ಮೆಟ್ ಧರಿಸದ ಬೈಕ ಸವಾರರು, ಕಾರಿನಲ್ಲಿ ಸೀಟ್ ಬೆಲ್ಟ್ ಹಾಕದವರ ವಿರುದ್ಧ ಮಾತ್ರ ಪೊಲೀಸರು ಪ್ರಕರಣ ದಾಖಲಿಸಬೇಕು ಎಂದು ತಿಳಿಸಿದರು.

ಶೃಂಗೇರಿ ನ್ಯಾಯಾಲಯದಲ್ಲಿ 391 ಪ್ರಕರಣಗಳಿದ್ದು ಅದರಲ್ಲಿ 72 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಜು.12ರಂದು ನಡೆಯಲಿರುವ ರಾಷ್ಟ್ರೀಯ ಅದಾಲತ್‌ನಲ್ಲಿ ಇತ್ಯರ್ಥಕ್ಕೆ ಗುರುತಿಸಲಾಗಿದೆ. ಅದರಲ್ಲಿ 31 ಪ್ರಕರಣ ಇತ್ಯರ್ಥಕ್ಕೆ ಆಯ್ಕೆಗೊಂಡಿವೆ. ಉಳಿದ ಪ್ರಕರಣಗಳನ್ನೂ ಪ್ರಾಮಾಣಿಕವಾಗಿ ಇತ್ಯರ್ಥಗೊಳಿಸಲು ಪ್ರಯತ್ನಿಸಲಾಗುವುದು ಎಂದರು.

ವಕೀಲರ ಸಂಘದ ಅಧ್ಯಕ್ಷ ಮಹೇಶ್, ಸರ್ಕಾರಿ ವಕೀಲೆ ವನಜಾಕ್ಷಿ, ವಕೀಲರಾದ ಉಮೇಶ್ ಹೆಗಡೆ, ರಾಜೇಶ್ವರಿ ಹೆಗಡೆ, ತಾಪಂ ಇಒ ಸುದೀಪ್, ಕಂದಾಯ ಇಲಾಖೆ ಶಿರಸ್ತೇದಾರ್ ಪ್ರವೀಣ್, ವಿವಿಧ ಕಚೇರಿಗಳ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net