ಲೊಕ್ಕನಹಳ್ಳಿಯಲ್ಲಿ ನಿಶಾಂತ್ ದಿಢೀರ್ ಪ್ರತ್ಯಕ್ಷ! : ಬೆಂಬಲಿಗರನ್ನು ಭೇಟಿ ಮಾಡಿ ಮಾತುಕತೆ

BJP NEW LOGO
Published on
  • ಚಾಮರಾಜನಗರ : ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಯುವ ಮುಖಂಡ ನಿಶಾಂತ್ ಭಾನುವಾರ ಹನೂರಿನ ಲೊಕ್ಕನಹಳ್ಳಿ ಭಾಗದಲ್ಲಿ ಸಂಚರಿಸಿ, ಬೆಂಬಲಿಗರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

  • ಬಿಜೆಪಿಯಿಂದ ಡಾ.ಪ್ರೀತನ್ ನಾಗಪ್ಪ, ರಾಜ್ಯ ಒಬಿಸಿ ಮೋರ್ಚಾದ ಕಾರ್ಯಕಾರಿಣಿ ಸದಸ್ಯ ಬಿ.ವೆಂಕಟೇಶ್, ಜಿಲ್ಲಾ ಉಪಾಧ್ಯಕ್ಷ ಡಾ.ಎಸ್ ದತ್ತೇಶ್‌ಕುಮಾರ್ ಹಾಗೂ ನಿಶಾಂತ್ ಪ್ರಬಲ ಟಿಕೆಟ್ ಆಕಾಂಕ್ಷಿಗಳಾಗಿದ್ದರು.
  • ಎಲ್ಲರೂ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಿದ್ದರು. ಆದರೆ ಕೊನೇ ಕ್ಷಣದಲ್ಲಿ ಡಾ.ಪ್ರೀತನ್ ನಾಗಪ್ಪಗೆ ಪಕ್ಷದಿಂದ ಟಿಕೆಟ್ ಒಲಿದು ಬಂತು. ಇದರಿಂದ ಉಳಿದವರು ಹಾಗೂ ಅವರ ಬೆಂಬಲಿಗರು ಅಸಾಮಾಧಾನಗೊಂಡಿದ್ದರು. ಚುನಾವಣೆಗೂ ಮುನ್ನ ಅಮಿತ್ ಷಾ ಹನೂರಿಗೆ ಆಗಮಿಸಿ, ಮತ ಪ್ರಚಾರ ಸಭೆಯಲ್ಲಿ ಪ್ರೀತನ್ ನಾಗಪ್ಪಗೆ ಬೆಂಬಲ ನೀಡಿ ಗೆಲ್ಲಿಸುವಂತೆ ಈ ಮೂವರಿಗೂ ಸೂಚಿಸಿದ್ದರು.

  • ಆದರೆ ಡಾ.ಎಸ್ ದತ್ತೇಶ್‌ಕುಮಾರ್ ಕೆಲ ದಿನಗಳ ಕಾಲ ಹಾಗೂ ವೆಂಕಟೇಶ್ ಒಂದೆರೆಡು ದಿನ ಮಾತ್ರ ಪ್ರೀತನ್ ಅವರೊಂದಿಗೆ ತೆರಳಿ ಮತ ಯಾಚಿಸುವುದರ ಮೂಲಕ ಬೆಂಬಲ ಸೂಚಿಸಿದ್ದರು.
  • ಆದರೆ ನಿಶಾಂತ್ ಬೆಂಬಲ ಸೂಚಿಸಿರಲಿಲ್ಲ. ಜತೆಗೆ, ಚುನಾವಣೆ ವೇಳೆ ಕ್ಷೇತ್ರದಿಂದ ದೂರ ಉಳಿದಿದ್ದರು. ಇದರಿಂದ ನಾಗಪ್ಪ ಅಭಿಮಾನಿಗಳು ಆಕ್ರೋಶಗೊಂಡಿದ್ದರು. ಕೆಲವರು ಅಲಗಾಪುರದಲ್ಲಿ ನಿಶಾಂತ್ ನಿರ್ಮಿಸಿದ್ದ ಶುದ್ಧ ಕುಡಿಯುವ ನೀರಿನ ಘಟಕವನ್ನೂ ಧ್ವಂಸಗೊಳಿಸಿದ್ದರು. ನಿಶಾಂತ್ ಬಗ್ಗೆ ಅಪಸ್ವರದ ಮಾತುಗಳು ಕೇಳಿಬಂದಿದ್ದವು. ಇದೀಗ ಲೊಕ್ಕನಹಳ್ಳಿ ಭಾಗಕ್ಕೆ ನಿಶಾಂತ್ ಆಗಮಿಸಿದ್ದು, ಬೆಂಬಲಿಗರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಅಲ್ಲದೆ ಪಕ್ಷ ಸಂಘಟನೆಯನ್ನು ಮುಂದುವರಿಸುವುದಾಗಿ ನಿರ್ಧರಿಸಿದ್ದಾರೆ ಎನ್ನಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net