ಲೊಕ್ಕನಹಳ್ಳಿ ವಿಜೃಂಭಣೆಯ ಕಂಡಾಯ ಉತ್ಸವ

21 HANRU 1
Published on

ಹನೂರು: ತಾಲೂಕಿನ ಲೊಕ್ಕನಹಳ್ಳಿ ಗ್ರಾಮದ ಸಿದ್ದಪ್ಪಾಜಿ ದೇಗುಲದಲ್ಲಿ ಕಡೇ ಕಾರ್ತಿಕ ಸೋಮವಾರದ ಪೂಜಾ ಕೈಂಕರ್ಯ ಜರುಗಿತು.


18 ವರ್ಷದ ಪೂಜಾ ಕಾರ್ಯಕ್ರಮದ ಹಿನ್ನ್ನೆಲೆ ಕಡೇ ಕಾರ್ತಿಕ ಸೋಮವಾರ ಸಿದ್ದಪ್ಪಾಜಿ ಮೂಲ ಮೂರ್ತಿಯನ್ನು ವಿವಿಧ ಪುಷ್ಪಗಳಿಂದ ಅಲಂಕರಿಸಿದ್ದಲ್ಲದೆ, ದೇಗುಲವನ್ನು ತಳೀರು ತೋರಣ ಹಾಗೂ ವಿವಿಧ ವಿದ್ಯುತ್ ದೀಪದಿಂದ ಸಿಂಗರಿಸಲಾಗಿತ್ತು. ಬೆಳಗಿನ ಜಾವದಿಂದಲೇ ದೇಗುಲದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು.

7 ಗಂಟೆಗೆ ದೇಗುಲದ ಆವರಣದಲ್ಲಿ ಸುಮಾರು 2 ಗಂಟೆಗಳ ಕಾಲ ಕಾವಲಿಯಲ್ಲಿ ಕುದಿಯುತ್ತಿದ್ದ ಎಣ್ಣೆಗೆ ಭಕ್ತರು ಕಜ್ಜಾಯ ಹಾಕಿ ಹರಕೆ ತೀರಿಸಿದರು. ಈ ವೇಳೆ ಅರ್ಚಕ ಸಿದ್ದರಾಜು ಅವರು ವಾದ್ಯಮೇಳ ಹಾಗೂ ಭಕ್ತರ ಜಯಘೋಷಕ್ಕೆ ಆವೇಶಭರಿತವಾಗಿ ಬರಿಗೈಲಿ ಕಜ್ಜಾಯ ಎತ್ತುವ ಪವಾಡ ಸೃಷ್ಟಿಸಿದರು. ನೆರೆದಿದ್ದ ಭಕ್ತರಲ್ಲಿ ಭಕ್ತರಲ್ಲಿ ಆಶ್ಚರ್ಯ ಮೂಡಿಸಿದರು.


ವಿಜೃಂಭಣೆಯ ಕಂಡಾಯ ಉತ್ಸವ: ಮಧ್ಯಾಹ್ನ ಸಿದ್ದಪ್ಪಾಜಿಯ ಕಂಡಾಯವನ್ನು ವಿವಿಧ ಪುಷ್ಪಗಳಿಂದ ಸಿಂಗರಿಸಿ ದೇಗುಲದಲ್ಲಿ ಪೂಜೆ ಸಲ್ಲಿಸಲಾಯಿತು. ಬಳಿಕ ಗ್ರಾಮದ ಹೊರವಲಯದ ನೀರಿನ ಆಸರೆಯಿರುವ ಸ್ಥಳಕ್ಕೆ ಕಂಡಾಯಗಳನ್ನು ಕೊಂಡೊಯ್ದು ಅರ್ಚಕ ವೃಂದ ಗ್ರಾಮಸ್ಥರ ಸಮ್ಮುಖದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಬಳಿಕ ವಾದ್ಯ ಮೇಳದೊಂದಿಗೆ ಗ್ರಾಮದ ಮುಖ್ಯರಸ್ತೆಯಲ್ಲಿ ಕಂಡಾಯ ಉತ್ಸವವನ್ನು ವಿಜೃಂಭಣೆಯಿಂದ ನೆರವೇರಿಸಲಾಯಿತು. ಈ ವೇಳೆ ಹರಕೆ ಹೊತ್ತವರು ಕಂಡಾಯ ಹೊತ್ತ ದೇವರಗುಡ್ಡರಿಗೆ ಪಾದಕ್ಕೇರಗಿ ಆಶೀರ್ವಾದ ಪಡೆದರು. ಹಣ್ಣು ಕಾಯಿ ನೀಡಿ ಪೂಜೆ ಸಲ್ಲಿಸಿದರು.ಮೆರವಣಿಗೆಯು ಸಮಾರು ಮೂರು ಗಂಟೆಗಳ ಕಾಲ ನಡೆಯಿತು. ಲೊಕ್ಕನಹಳ್ಳಿ, ಬೂದಿಪಡಗ, ಕಂಡಯ್ಯನಪಾಳ್ಯ, ಚಿಕ್ಕಮಾಲಾಪುರ ಸೇರಿದಂತೆ ಇನ್ನಿತರ ಗ್ರಾಮದ ಜನರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net